ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ತಾಂಡವಪುರ: ಸಂಸದ ಆರ್. ಧ್ರುವನಾರಾಯಣ್ ಹಾಗೂ ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಅವರು ನಂಜನಗೂಡು ತಾಲೂಕಿನ ಕಾರ್ಯ, ಕಾರಾಪುರ, ಹನುಮನಪುರ, ಬೆಳಗುಂದ ಮುಂತಾದ ಗ್ರಾಮಗಳಲ್ಲಿ ಸುಮಾರು 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ಗ್ರಾಮಸ್ಥರು ನಿಜವಾದ ಬಡ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಸಂಸದರು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂ. ರಾಮಯ್ಯ, ತಹಸೀಲ್ದಾರ್ ಅರುಳ್‌ಕುಮಾರ್, ಇಒ ಡಾ. ಕೃಷ್ಣರಾಜು, ಮಾಜಿ ಅಧ್ಯಕ್ಷರಾದ ಎಸ್.ಸಿ. ಬಸವರಾಜು, ಧರ್ಮೇಂದ್ರ ರಾಜು, ತಾಪಂ ಸದಸ್ಯರಾದ ಗೋವಿಂದರಾಜನ್, ಶ್ರೀಕಂಠು ಇದ್ದರು.
ಮಾ.2ರಂದು ಚುನಾವಣೆ
ಕೆ.ಆರ್. ನಗರ: ಪಟ್ಟಣದ ಪುರಸಭೆಯ ಎರಡು ಸ್ಥಾನಗಳಿಗೆ ಮಾ.2ರಂದು ಚುನಾವಣೆ ನಡೆಯಲಿದೆ ರಾಜ್ಯ ಚುನಾವಣಾ ಆಯೋಗ ಅದೇಶ ಹೊರಡಿಸಿದೆ. 15ನೇ ವಾರ್ಡ್‌ನ ಸದಸ್ಯ ಪಿ. ವಿನಯ್ ಮತ್ತು 18ನೇ ವಾರ್ಡ್‌ನ ಸದಸ್ಯ ರಿಜ್ವಾನ್ ಉಲ್ಲಾ ಖಾನ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಫೆ.12ರಂದು ಆಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಫೆ.19 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಫೆ.20ರಂದು ಪರಿಶೀಲನೆ ನಡೆಯಲಿದೆ. ಫೆ.22ರಂದು ನಾಮಪತ್ರ ವಾಪಸಾತಿಗೆ ಕಡೆ ದಿನವಾಗಿದ್ದು, ಮಾ.2ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮಾ.5ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ. 15ನೇ ವಾರ್ಡಿನ ಸದಸ್ಯ ಪಿ. ವಿನಯ್, 20ನೇ ವಾರ್ಡಿನ ಸದಸ್ಯ ರಿಜ್ವಾನ್ ಉಲ್ಲಾಖಾನ್ ನಿಧನದಿಂದ ಎರಡು ಸ್ಥಾನಗಳು ಖಾಲಿಯಾದ್ದವು. ಉಪಚುನಾವಣೆ ಘೋಷಣೆಯಾಗಿರುವುದರಿಂದ ಪಟ್ಟಣದಲ್ಲಿ ರಾಜಕೀಯ ಕಾವು ಏರತೊಡಗಿದ್ದು, ವಿವಿಧ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಲು ಮುಖಂಡರು ತೀವ್ರ ಆಸಕ್ತಿ ತೋರುತ್ತಿದ್ದಾರೆ.