ಪ್ರಾದೇಶಿಕ ಪಕ್ಷಗಳ ಐಕ್ಯತೆ ದೇಶದ ಏಕತೆಗೆ ಮಾರಕ
ಮೈಸೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳು ಒಗ್ಗೂಡುತ್ತಿದ್ದು, ಇದರಿಂದ ದೇಶದ ಏಕತೆಗೆ ಭಂಗ ಬಂದರೂ ಬರಬಹುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಕಳವಳ ವ್ಯಕ್ತಪಡಿಸಿದರು.
ಮೈಸೂರು- ಕೊಡಗು ಒಕ್ಕಲಿಗರ ಹಿತರಕ್ಷಣಾ ವೇದಿಕೆಯು ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್.ಸಿ. ದಾಸಪ್ಪ ಮತ್ತು ಯಶೋಧರಮ್ಮ ಅವರ ಮಾನವೀಯ ಗುಣಗಳಿಂದ ನಾನು ಈ ಮಟ್ಟಕ್ಕೆ ಬೆಳೆದೆ. ಎಸ್. ನಿಜಲಿಂಗಪ್ಪ ಅವರ ಅಳಿಯ ಆಗುವುದಕ್ಕೂ ದಾಸಪ್ಪ ಅವರೇ ಕಾರಣಕರ್ತರು ಎಂದು ಸ್ಮರಿಸಿದರು.
ಸಂಸದ ಎಚ್.ವಿಶ್ವನಾಥ್ ಮಾತನಾಡಿ, ಇವತ್ತಿನ ಕುಟುಂಬ ರಾಜಕಾರಣಕ್ಕೂ, ದಾಸಪ್ಪ ಅವರ ಕುಟುಂಬ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಇಂದಿನ ಜಾತಿ ರಾಜಕಾರಣಕ್ಕೂ, ಅಂದಿನ ಜಾತ್ಯತೀತ ರಾಜಕಾರಣಕ್ಕೂ ವ್ಯತ್ಯಾಸ ಇದೆ ಎಂದರು. ಸರೋಜಮ್ಮ ತುಳಸೀದಾಸಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ. ದಾಸೇಗೌಡ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ಮೋದಾಮಣಿ, ಮಾಜಿ ಶಾಸಕ ಸತ್ಯನಾರಾಯಣ, ಬಸವೇಗೌಡ, ವಿಷ್ಣು, ರಾಮೇಗೌಡ ಇದ್ದರು.