ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವರದಕ್ಷಿಣೆ ಕಿರುಕುಳ; ಗೃಹಿಣಿ ಆತ್ಮಹತ್ಯೆ

Srinivasa Murthy VN
Updated On : 10 Feb 2014, 11:56 am

ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಟ್ಟಗಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅರವಿಂದ್ ಎಂಬವರ ಪತ್ನಿ ಮಾಲತಿ(24) ಆತ್ಮಹತ್ಯೆ ಮಾಡಿಕೊಂಡವರು. ಮಡಿಕೇರಿಯಲ್ಲಿ ಶ್ರೀರಾಮ ಆಟೋ ಫೈನಾನ್ಸ್‌ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿರುವ ಅರವಿಂದ್‌ಗೆ 10 ತಿಂಗಳ ಹಿಂದಷ್ಟೆ ಮಾಲತಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಮದುವೆ ವೇಳೆ 50 ಗ್ರಾಂ ಚಿನ್ನ ನೀಡಲಾಗಿತ್ತು. ಆದರೆ ಅರವಿಂದ್ ಮದುವೆಯಾದ ನಾಲ್ಕೈದು ತಿಂಗಳಲ್ಲಿಯೆ 50 ಸಾವಿರ ನಗದು ಮತ್ತು ನೆಕ್ಲೇಸ್ ತರುವಂತೆ ಒತ್ತಡ ಹೇರಿದ್ದರು. ಆದರೆ ಮಾಲತಿ ಅವರ ತಂದೆಗೆ ಹಣ ನೀಡಲು ಸಾಧ್ಯವಾಗಿಲ್ಲ. ಅಂದಿನಿಂದ ಕಿರುಕುಳ ಹೆಚ್ಚಾಗಿದೆ. ಇದರಿಂದ ಮನ ನೊಂದ ಮಾಲತಿ ತನ್ನ ತಮ್ಮ ರೋಹಿತ್‌ಗೆ ನಿನ್ನ ಬಾವ, ಅತ್ತೆ ಕಾಟ ತಾಳಲಾಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎಸ್‌ಎಂಎಸ್ ಮಾಡಿ ನೇಣು ಬಿಗಿದುಕೊಂಡಿದ್ದಾರೆ. ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೃದ್ಧೆ ಸಾವು:  ನಗರದ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಮೃತಪಟ್ಟಿದ್ದಾರೆ. ಜವರಮ್ಮ(80) ಮೃತಪಟ್ಟವರು. ಮನೆ ನಂ. 3957/1, 2ನೇ ಕ್ರಾಸ್, ಗಾಂಧಿನಗರದಲ್ಲಿ ವಾಸವಿದ್ದ ಜವರಮ್ಮ ಅವರು ಕೆ.ಆರ್. ಆಸ್ಪತ್ರೆ ಆವರಣದಲ್ಲಿ ನಿಶ್ಯಕ್ತರಾಗಿ ಮಲಗಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 80 ವರ್ಷ, 157 ಸೆಂಮೀ ಎತ್ತರ, ಬೂದು ಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ಇವರ ಬಲ ಭಾಗದ ಪಕ್ಕೆಯ ಬಳಿ ಒಂದು ಕಪ್ಪು ಕಾರೆಹರಳು ಇದೆ. ವಾರಸುದಾರರು ಇದ್ದಲ್ಲಿ ದೇವರಾಜ ಪೊಲೀಸ್ ಠಾಣೆ ದೂ. 2418306 ಸಂಪರ್ಕಿಸಬಹುದು.

ಭಗ್ನ ಪ್ರೇಮಿ ಆತ್ಮಹತ್ಯೆ
ಮೈಸೂರು: ಭಗ್ನಪ್ರೇಮಿಯೊಬ್ಬ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರಂನಲ್ಲಿ ಸೋಮವಾರ ನಡೆದಿದೆ. ವಿದ್ಯಾರಣ್ಯಪುರಂ ನಿವಾಸಿ ಮಂಜುಳಾ ಎಂಬವರ ಪುತ್ರ ವಿ. ಭರತ್(22) ಆತ್ಮಹತ್ಯೆ ಮಾಡಿಕೊಂಡವರು. ಶಿಕ್ಷಕಿಯಾದ ಮಂಜುಳಾ ಅವರ ಕಾಲಿಗೆ ಗಾಯವಾಗಿ ತಮ್ಮನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಎಸ್ಸೆಸ್ಸೆಲ್ಸಿ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಭರತ್ ಕಳೆದ ರಾತ್ರಿ ತಾಯಿ ಉಳಿದುಕೊಂಡಿದ್ದ ಮಾವನ ಮನೆಗೆ ಬಂದು ಊಟ ಮಾಡಿ, ಬೆಳಗ್ಗೆ ತಿಂಡಿಗೆ ಬರುತ್ತೇನೆ ಎಂದು ಮನೆಗೆ ಹೋಗಿದ್ದ. ಸೋಮವಾರ ಮಧ್ಯಾಹ್ನವಾದರೂ ತಿಂಡಿಗೆ ಬಾರದಿದ್ದಾಗ ಅನುಮಾನಗೊಂಡ ಮಾವ ಬಂದು ನೋಡಿದಾಗ ಭರತ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಭರತ್ ಕನಕಗಿರಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅವರಿಬ್ಬರ ನಡುವಿನ ಮುನಿಸಿನಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭರತ್‌ನ ತಾಯಿ ಮಂಜುಳಾ ಶಂಕಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement