ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಜಯಶಂಕರ್‌ಗೆ ಟಿಕೆಟ್ ನೀಡಿ

Srinivasa Murthy VN
Updated On : 10 Feb 2014, 11:55 am

ಮೈಸೂರು: ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅವರಿಗೆ ಬಿಜೆಪಿಯಿಂದ ಲೋಕಸಭಾ ಚುನಾವಣೆಯ ಟಿಕೆಟ್ ನೀಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಣ್ಣಸ್ವಾಮಿ ಪಕ್ಷದ ವರಿಷ್ಠರನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ  ಒತ್ತಾಯಿಸಿದರು. ರೈತ, ದಲಿತ ಪರ, ಮುಸ್ಲಿಂ, ಕ್ರಿಶ್ಚಿಯನ್, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿರುವ ಮಾಜಿ ಸಂಸದ ವಿಜಯಶಂಕರ್‌ಗೆ ಟಿಕೆಟ್ ನೀಡಿ, ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸುವಂತೆ  ಮನವಿ ಮಾಡಿದರು. ವಿಜಯಶಂಕರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿದಲ್ಲಿ ಒಂದು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಬಿಜೆಪಿಯಲ್ಲಿ ಪರ್ಯಾಯ ಹೆಸರು ಕೇಳಿ ಬರುತ್ತಿದ್ದು,ಅವರಿಗೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆದಿದೆ ಎಂದು ದೂರಿದರು.

ಸಿದ್ದರಾಮಯ್ಯ ಹೆಸರು ನಾಮಕರಣ
ಮೈಸೂರು: ಆಲನಹಳ್ಳಿ ಸಮೀಪದ ವರ್ತುಲ ರಸ್ತೆಗೆ ಸಿದ್ದರಾಮಯ್ಯ ವೃತ್ತ ಎಂದು ನಾಮಕರಣ ಮಾಡುವಂತೆ ಆಲನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೈಸೂರಿನಿಂದ- ಟಿ. ನರಸೀಪುರಕ್ಕೆ ತೆರಳುವ ಮಾರ್ಗದಲ್ಲಿನ ಆಲನಹಳ್ಳಿಯ ಬಳಿ ನಿರ್ಮಾಣವಾಗುತ್ತಿರುವ ವರ್ತುಲ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಗ್ರಾಮದ ಬಿ. ಮೋಹನ್‌ಕುಮಾರ್, ಸಿದ್ದೇಶ್, ಗೋಪಾಲ್ , ಚಂದ್ರಶೇಖರ್ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡೆ, ಸಾಂಸ್ಕೃತಿಕ, ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ರಿಂದ 35 ವರ್ಷ ವಯೋವುತಿಯ ಯುವಕ, ಯುವತಿಯರು ಹಾಗೂ ಯುವಕ ಸಂಘ, ಯುವತಿ ಮಂಡಳಿಗಳಿಂದ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡೆ, ಸಾಂಸ್ಕೃತಿಕ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೊಂದಾವಣೆಯಾದ ಯುವಕ ಸಂಘಗಳ, ಯುವತಿ ಮಂಡಳಿಗಳ 5 ಮಂದಿ ಯುವಕರಿಗೆ ಅಥವಾ ಯುವತಿರಿಗೆ ಮತ್ತು ಯುವಕ ಸಂಘ, ಯುವತಿ ಮಂಡಳಿಗೆ ತಲಾ ಒಂದರಂತೆ ಜಿಲ್ಲಾ ಯುವ ಪ್ರಶಸ್ತಿ ನೀಡಲಾಗುವುದು. ಆಸಕ್ತರು ತಮ್ಮ ವೈಯಕ್ತಿಕ ಅರ್ಜಿಯೊಂದಿಗೆ ಸಾಧನೆಗಳ ದೃಢೀಕೃತ ಪ್ರಶಸ್ತಿ ಪತ್ರಗಳ ಪ್ರಸ್ತಾವನೆಯನ್ನು ಫೆ. 22 ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಮೈಸೂರು ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 0821- 2564179 ಸಂಪರ್ಕಿಸಬಹುದು.

ಶ್ರೀಧರ್ ಜೈನ್ ದಂಪತಿಗೆ ಪ್ರಶಸ್ತಿ
ಮೈಸೂರು: ಕುವೆಂಪು ಕಲಾನಿಕೇತನ ಸಂಸ್ಥೆ ಮತ್ತು ಕನ್ನಡ ಸಂಘದ ವತಿಯಿಂದ ಫೆ.16ರಂದು ಹಾಂಕಾಂಗ್‌ನಲ್ಲಿ ನಡೆಯುವ 3ನೇ ವಿಶ್ವಕನ್ನಡ ಸಮ್ಮೇಳನದಲ್ಲಿ ಮೈಸೂರಿನ ನಿಮಿಷಾಂಬ ನೃತ್ಯ ಶಾಲೆಯ ಶ್ರೀಧರ್ ಜೈನ್ ಮತ್ತು ಸೌಮ್ಯ ಶ್ರೀಧರ್ ಜೈನ್ ದಂಪತಿಗೆ ಕುವೆಂಪು ವಿಶ್ವಕನ್ನಡ ರತ್ನ ಅಂತಾರಾಷ್ಟ್ರೀಯ ಹಾಂಕಾಂಗ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಸ್ವೀಕರಿಸಲು ಮತ್ತು ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲು ಜೈನ್ ದಂಪತಿ ತೆರಳುವರು.

ಪದಾಧಿಕಾರಿಗಳಿಗೆ ಬೀಳ್ಕೊಡುಗೆ
ಮೈಸೂರು: ಮಹಾನಗರಪಾಲಿಕೆ ಎಸ್ಸಿ, ಎಸ್ಟಿ ಪದಾಧಿಕಾರಿಗಳಿಗೆ ಸೋಮವಾರ ಬೀಳ್ಕೊಡುಗೆ ನೀಡಲಾಯಿತು. ಪಾಲಿಕೆ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ನಿರ್ಗಮಿತ ಪದಾಧಿಕಾರಿಗಳು ಹಾಗೂ ಪಾಲಿಕೆಯಲ್ಲಿ ನಿವೃತ್ತರಾದ ನೌಕರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನೌಕರರಾದ ನಾಗರಾಜು ಅನುಭವ ಹಂಚಿಕೊಂಡರು. ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ- ಬಿ. ಸಿದ್ದರಾಜು, ಕಾರ್ಯಾಧ್ಯಕ್ಷ- ನಾರಾಯಣ್, ಅಧ್ಯಕ್ಷ- ಬಿ.ಎಸ್. ಸುಬ್ರಹ್ಮಣ್ಯ, ಉಪಾಧ್ಯಕ್ಷರು- ಉಮೇಶ್, ಸಿ. ರಾಜು, ಪ್ರಧಾನ ಕಾರ್ಯದರ್ಶಿ- ಡಿ. ಸುರೇಂದ್ರಕುಮಾರ್, ಪತ್ರಿಕಾ ಕಾರ್ಯದರ್ಶಿ- ಎನ್. ಮಂಜುನಾಥ್, ಜಂಟಿ ಕಾರ್ಯದರ್ಶಿ-ಆರ್ಮುಗಂ, ಸಂಚಾಲಕ- ಜಿ. ಶಿವಸಿದ್ದು, ಸಂಘಟನಾ ಕಾರ್ಯದರ್ಶಿಗಳು- ಬಸವರಾಜು, ಎನ್.ಶ್ರೀನಿವಾಸ್, ಸಲಹೆಗಾರರು- ನಾಗರಾಜು. ನಿರ್ದೇಶಕರು- ಎಂ.ಆರ್. ಸ್ವಾಮಿ, ಮಲ್ಲೇಶ್, ಶ್ರೀನಿವಾಸ್, ರವಿಶಂಕರ್, ಶ್ರೀನಿವಾಸ್, ಶಿವಶಂಕರ್, ಸಿ. ಚಾಮರಾಜು, ಶಿವಸ್ವಾಮಿ, ಎಸ್. ವೆಂಕಟೇಶ್, ಕುಪ್ಪರಾಜು, ಎಸ್. ಸುಲೋಚನ, ಬಿ.ಟಿ. ಧನಲಕ್ಷ್ಮೀ, ಶಿವಕುಮಾರ್, ಎಸ್.ಡಿ. ವೆಂಕಟೇಶ್, ದೊರೆಸ್ವಾಮಿ, ಸಿದ್ದರಾಜು, ವಿಶೇಷ ಆಹ್ವಾನಿತ ನಿರ್ದೇಶಕರು- ಎಸ್.ಇ. ಶ್ರೀನಿವಾಸ್, ವೇಣುಗೋಪಾಲ್, ರಾಚಪ್ಪ, ಜವರಯ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement