ವಿದ್ಯುತ್ ವ್ಯತ್ಯಯ
ಮೈಸೂರು: ವಿಜಯನಗರದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಎಸ್ಎಲ್ವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಫೆ.11ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು- ಬೃಂದಾವನ ಬಡಾವಣೆ ಒಂದು ಮತ್ತು 2ನೇ ಹಂತ, ಪಿ.ಕೆ. ಸ್ಯಾನಿಟೋರಿಯಂ, ಗೋಕುಲಂ 2ನೇ ಹಂತ, ಹಸುಕರು ಪಾರ್ಕ್, ಗೋಕುಲಂ ರಾಮಮಂದಿರ ಸುತ್ತಮುತ್ತ, ಗೋಕುಲಂ 1ನೇ ಹಂತ, ಗೋಕುಲಂ ಪಾರ್ಕ್ ಸುತ್ತಮುತ್ತ, ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ, ವಿ.ವಿ. ಮೊಹಲ್ಲಾ, 1ರಿಂದ 3ನೇ ಹಂತ, ಕೆ.ಆರ್. ರಸ್ತೆಯ ರಾಮಕೃಷ್ಣ ಆಶ್ರಮ ಸುತ್ತಮುತ್ತ, ಗೋಕುಲಂ ಗಣಪತಿ ದೇವಸ್ಥಾನ, ಕಾಂಟೂರ್ ರಸ್ತೆ, ಲಯನ್ಸ್ ಸ್ಕೂಲ್ ಸುತ್ತಮುತ್ತಲ ಪ್ರದೇಶ.
ವಿದ್ಯುತ್ ವ್ಯತ್ಯಯ: ನಗರದ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆವಿ ಅಗ್ರಹಾರ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳುವುದರಿಂದ ಫೆ.11ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಕೆಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಪ್ರದೇಶಗಳು: ಶಂಕರಮಠ, ಅಗ್ರಹಾರ, ವಿವಿ ಮಾರ್ಕೆಟ್, ಬಸವೇಶ್ವರ ರಸ್ತೆ, ರಾಮಾನುಜ ರಸ್ತೆ, ಸೆಂಟ್ ಮೇರಿಸ್, ಸಿಹಿ ನೀರು ಕಟ್ಟೆ, ಜೆಎಸ್ಎಸ್ ರಸ್ತೆ, ಚಾಮುಂಡಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಮಾಸ್ಟರ್ ಅಥ್ಲೆಟಿಕ್ಸ್ಗೆ ಆಯ್ಕೆ
ಮೈಸೂರು: ಬ್ಯಾಂಕಾಕ್ನಲ್ಲಿ ಮಾ. 7 ರಿಂದ ನಡೆಯುವ 19ನೇ ಮಾಸ್ಟರ್ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಮೈಸೂರಿನ ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ಬಿ. ಬ್ಯಾಟರಾಯಪ್ಪ ಆಯ್ಕೆಯಾಗಿದ್ದಾರೆ.
ನಾಳೆ ವಿಡಿಯೋ ಸಂವಾದ
ಮೈಸೂರು: ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಕೇಂದ್ರವು ಫೆ.12ರ ಮಧ್ಯಾಹ್ನ 3ಕ್ಕೆ ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸೂಲೆಟ್ ಜನರಲ್ನ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಡೇವಿಡ್ ಗೈನರ್ ಅವರೊಂದಿಗೆ ವಿಡಿಯೋ ಸಂವಾದ ಏರ್ಪಡಿಸಿದೆ. ಈ ಸಂವಾದದಲ್ಲಿ ಮೈಸೂರು ವಿವಿ, ಮಣಿಪಾಲ ವಿವಿ, ಬಿಜಾಪುರದ ಮಹಿಳಾ ವಿವಿ, ಬೆಂಗಳೂರಿನ ಐಐಜೆಎನ್ಎಂ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಅಂದು ಗೈನರ್ ಅವರು ಮಾರ್ಟಿನ್ ಲೂಥರ್, ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೆಲಾ ಅವರ ಕುರಿತು ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು ಎಂದು ಕೇಂದ್ರದ ನಿರ್ದೇಶಕ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.
ಸೆಲೆರಿಯೋ ಅನಾವರಣ
ಮೈಸೂರು: ಭಾರತದ ಜನಸಂದಣಿ ಪ್ರದೇಶದಲ್ಲಿ ಓಡಾಡುವ ಹಾಗೂ ಕಡಿಮೆ ಇಂಧನದಲ್ಲಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲರಿಯೋ ಕಾರನ್ನು ಅನಾವರಣಗೊಳಿಸಲಾಯಿತು.ತಯಾರಕರ ಪ್ರಕಾರ ಈ ಕಾರು ಒಂದು ಲೀ. ಪೆಟ್ರೋಲ್ಗೆ 23.1 ಕಿ.ಮೀ.ನಷ್ಟು ಮೈಲೇಜ್ ನೀಡಲಿದೆ. ಆಟೋ ಗೇರ್ ಶಿಫ್ಟ್ ಹೊಂದಿದ್ದು, ಪ್ರಯಾಣಿಕರು ಸಂಚರಿಸುವ ಕಾರುಗಳಲ್ಲಿ ಮೊದಲ ಬಾರಿಗೆ ಆಟೋ ಗೇರ್ ಶಿಫ್ಟ್ ಹೊಂದಿದ ಖ್ಯಾತಿಗೆ ಭಾಜನವಾಗಿದೆ.
ಅರ್ಜಿ ಆಹ್ವಾನ
ಮೈಸೂರು: ಕೇಂದ್ರ ಪುರಸ್ಕೃತ ಮೇವು ಮತ್ತು ಪಶು ಆಹಾರ ಯೋಜನೆಯಡಿ ಪಶುಪಾಲನಾ ಇಲಾಖಾ ವತಿಯಿಂದ ಜಿಲ್ಲೆಯಲ್ಲಿ ಕೈ ಚಾಲಿತ ಮೇವು ಕತ್ತರಿಸುವ ಯಂತ್ರ, ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ ಹಾಗೂ ರಸ ಮೇವು ಉತ್ಪಾದನಾ ಘಟಕಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು ಸಂಬಂಧಿಸಿದ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಫೆ.12ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.