ಶುಲ್ಕ ವಿನಾಯಿತಿ ರದ್ದು ಖಂಡಿಸಿ ಪ್ರತಿಭಟನೆ
ಮೈಸೂರು: ಯುವರಾಜ ಕಾಲೇಜಿನ ಬಿಸಿಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ರದ್ದುಪಡಿಸಿರುವುದನ್ನು ಖಂಡಿಸಿ ಎಐಡಿವೈಒ ಮತ್ತು ಎಐಡಿಎಸ್‌ಒ ಪದಾಧಿಕಾರಿಗಳು ಕ್ರಾಫರ್ಡ್ ಭವನದ ಎದುರು ಸೋಮವಾರ ಪ್ರತಿಭಟಿಸಿದರು.
ಬಿಸಿಎಂ ವರ್ಗದ ಯುವರಾಜ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ಪ್ರವೇಶದ ಸಂದರ್ಭದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಿದವರಿಗೆ ಶುಲ್ಕ ವಿನಾಯಿತಿ ನೀಡಿ ಕಾಲೇಜಿನ ಮೂಲಕವೆ ನೇರವಾಗಿ ಸರ್ಕಾರದಿಂದ ಬಾಕಿ ಹಣ ಪಡೆಯಲಾಗುತ್ತಿತ್ತು. ಆದರೆ ಈಗ ಏಕಾಏಕಿ ಶುಲ್ಕ ವಿನಾಯಿತಿ ರದ್ದುಪಡಿಸಲಾಗಿದೆ ಮತ್ತು ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳೆ ಭರಿಸಬೇಕು ಎಂದು ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸದಿದ್ದರೆ ಅಂಕಪಟ್ಟಿ ಮತ್ತು ಪರೀಕ್ಷಾ ಪ್ರವೇಶಪತ್ರ ತಡೆ ಹಿಡಿಯುವುದಾಗಿ ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ವಿವಿಯು ಸರ್ಕಾರದಿಂದ ಅನುದಾನ ಬಂದಿಲ್ಲದಿರುವುದರಿಂದ ಈ ಕ್ರಮ ಜರುಗಿಸಿರುವುದಾಗಿ ಕಾರಣ ಕೊಡುತ್ತದೆ. ಸಂಕಷ್ಟದಲ್ಲಿರುವ ಬಡ ಹಿಂದುಳಿದ ಅಸಹಾಯಕ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ಕೇಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. ಪ್ರತಿಭಟನೆ ನೇತೃತ್ವವನ್ನು ಯುವರಾಜ ಕಾಲೇಜು ವಿದ್ಯಾರ್ಥಿ ಅವಿನಾಶ್ ವಹಿಸಿದ್ದರು. ಎಐಡಿವೈಒ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಮೇಟಿ, ವಿದ್ಯಾರ್ಥಿಗಳಾದ ಸುನಿಲ್, ಸುಮ, ನಾಗೇಶ್, ಬಸವರಾಜು, ಚಂದ್ರಕಲಾ, ಸಿದ್ದೇಶ್, ಮಹೇಶ್, ವರುಣ್ ಇದ್ದರು.