ಶೈಕ್ಷಣಿಕ ಪ್ರಗತಿ ಸಮಗ್ರ ಅಭಿವೃದ್ಧಿಗೆ ಸಹಕಾರಿ: ಶಾಸಕ ಮಂಜುನಾಥ್
ಹುಣಸೂರು: ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ನನ್ನ ಎರಡು ಕಣ್ಣುಗಳಿದಂತೆ, ಎರಡೂ ಶಾಲೆಗಳ ಶೈಕ್ಷಣಿಕ ಪ್ರಗತಿ ತಾಲೂಕಿನ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಟ್ಯಾಲೆಂಟ್ ವಿದ್ಯಾಸಂಸ್ಥೆಯ 14ನೇ ವರ್ಷದ ವಾರ್ಷಿಕ ಸಿರಿ-ಶೈಕ್ಷಣಿಕ ಸಂಭ್ರಮಾಚರಣೆ 2014ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ಕೈಗೆಟಕುವಂತೆ ಸಿಗಬೇಕು ಮತ್ತು ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಾನ್ಮುಖರಾಗುವಂತೆ ಕರೆ ನೀಡಿದರು.
ಬೆಂಗಳೂರಿನ ದೇವನಹಳ್ಳಿ ವಿಜಯಪುರದ ಸರ್ಕಲ್ ಇನ್‌ಸ್ಪೆಕ್ಟರ್, ಮುಖ್ಯಮಂತ್ರಿಗಳ ಪದಕ ಪಡೆದ ಎಸ್. ಮಹೇಶ್‌ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಡಿವೈಎಸ್ಪಿ ನಂಜುಂಡ ಅವರನ್ನು ಸನ್ಮಾನಿಸಲಾಯಿತು. ಬಿಇಒ ರಾಜಶೇಖರ್ ಮಾತನಾಡಿದರು.
ವಿದ್ಯಾಸಂಸ್ಥೆಯ ಟ್ಯಾಲೆಂಟ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಗುಲ್ನಾಜ್ ಖಾನ್, ಟ್ಯಾಲೆಂಟ್ ವಿದ್ಯಾಸಂಸ್ಥೆ ಪ್ರಾಂಶುಪಾಲ ರವಿದೀಪಕ್, ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ ರೈ, ಸಂಸ್ಥಾಪಕ ನಿರ್ದೇಶಕ ನವೀನ್ ರೈ ಮಾತನಾಡಿದರು. ಸಂಸ್ಥಾಪಕ ನಿರ್ದೇಶಕ ಎಚ್.ಆರ್. ಕೃಷ್ಣಮೂರ್ತಿ, ನಿರ್ದೇಶಕರಾದ ಮಂಜುನಾಥ್, ಶ್ರೀನಾಥ್ ಇದ್ದರು