16ರಂದು ಬೃಹತ್ ವಿದ್ಯಾರ್ಥಿ ಸಮ್ಮೇಳನ
ಮೈಸೂರು: ಬಹುಜನ ವಿದ್ಯಾರ್ಥಿ ಸಂಘವು (ಬಿವಿಎಸ್) ಫೆ.16ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಿಂದುಳಿದ ಜಾತಿಗಳಿಗೆ (ಒಬಿಸಿ, ಎಸ್ಸಿ, ಎಸ್ಟಿ) ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಒತ್ತಾಯಿಸಿ ಬೃಹತ್ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಿದೆ.
ಐಸಿಎಸ್ಎಸ್ಆರ್ ಮುಖ್ಯಸ್ಥ ಪ್ರೊ. ಸುಖದೇವ್ ಥೋರಟ್ ಸಮ್ಮೇಳನ ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ನಮ್ಮ ಹಕ್ಕೊತ್ತಾಯಗಳನನ್ನು ಸಲ್ಲಿಸಲಾಗುವುದು ಎಂದು ಬಿವಿಎಸ್ ಮುಖಂಡ ಡಾ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ವೇತನ 3,000ಕ್ಕೆ ಹೆಚ್ಚಿಸಬೇಕು. ಸಿಇಟಿ ಸೀಟು ಹಂಚಿಕೆ ಸರ್ಕಾರಿ ನಿಯಂತ್ರಣದಲ್ಲಿ ಇರಬೇಕು. ಎಲ್ಲ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ, ಬಡ್ತಿ ಮೀಸಲಾತಿ ಮಸೂದೆ ಅಂಗೀಕರಣ, ಸುಳ್ಳು ಜಾತಿ ಪ್ರಮಾಣ ಪತ್ರದಿಂದ ಹುದ್ದೆ ಪಡೆದವರಿಗೆ ಶಿಕ್ಷೆ, ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಖಾಲಿ ಇರುವ ಹುದ್ದೆಗಳ ಭರ್ತಿ- ಈ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಜೊತೆಗೆ ಹಲವು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು. ಮೈಸೂರಿನಿಂದ ಬಿವಿಎಸ್ ಕಾರ್ಯಕರ್ತರು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.