ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತರಬೇತಿ
ಕೆ.ಆರ್. ನಗರ: ತಾಲೂಕು ನಾಮಧಾರಿಗೌಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆ.16 ಮತ್ತು 23ರ ಬೆಳಗ್ಗೆ 10ಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಭವಿ ಶಿಕ್ಷಕರಿಂದ ಉಚಿತ ಪರೀಕ್ಷಾ ಪೂರ್ವಸಿದ್ಧತಾ ಹಾಗೂ ಕ್ಲಿಷ್ಟ ವಿಷಯಗಳ ನಿವಾರಣ ಶಿಬಿರವನ್ನು ಪಟ್ಟಣದ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದೆ. ಶಿಬಿರದ ಕೊನೆ ದಿನ ವಿಷಯಾಧಾರಿತ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಕಠಿಣ ಹಾಗೂ ಗೊಂದಲದ ವಿಷಯಗಳನ್ನು ಪೂರ್ವಭಾವಿಯಾಗಿ ಪಟ್ಟಿ ಮಾಡಿಕೊಂಡು ಮೊ. 9449407999 ಸಂಪರ್ಕಿಸುವಂತೆ ಸಂಘದ ಖಜಾಂಚಿ ಪುರುಷೋತ್ತಮ್ ಕೋರಿದ್ದಾರೆ.
ಆರೋಗ್ಯ ತಪಾಸಣಾ ಶಿಬಿರ
ಕೆ.ಆರ್. ನಗರ: ತಾಲೂಕು ವೀರಶೈವ ಹಿತರಕ್ಷಣಾ ವೇದಿಕೆಯು ಫೆ.15ರಂದು 2ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದೆ. ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಡಾ. ಬ್ರಿಜ್ ಮೋಹನ್ಕುಮಾರ್ ನೇತೃತ್ವದಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ತಪಾಸಣೆ ನಡೆಸಲಾಗುತ್ತದೆ. ಮಧ್ಯಾಹ್ನ 2ಕ್ಕೆ ವಿವಿಧ ಮಠಾಧೀಶರು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
ಲಿಂಗಾಯಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕೆ.ಆರ್. ನಗರ: ತಾಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆ. 17ರಂದು ತೋಪಮ್ಮ ದೇವಾಲಯದ ಪಕ್ಕ ನಡೆಯುವ ಬಸವ ಭವನ ಭೂಮಿ ಪೂಜಾ ಕಾರ್ಯಕ್ರಮದಲ್ಲಿ 2012-13ನೇ ಸಾಲಿನಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ.15ರೊಳಗೆ ತಮ್ಮ ಅಂಕಪಟ್ಟಿ ಮತ್ತು ಶಾಲಾ ದಾಖಲಾತಿಗಳೊಂದಿಗೆ ಕರ್ನಾಟಕ ಎಟಿಎಂ ಪಕ್ಕ ಇರುವ ಪಿಆರ್ಡಿ ಎಂಟರ್ ಪ್ರೈಸಸ್ ಅಥವಾ ಮೊ. 9945003959 ಸಂಪರ್ಕಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಕೋರಿದ್ದಾರೆ.
ದಾ.ರಾ. ಮಹೇಶ್ ಆಯ್ಕೆ
ಹುಣಸೂರು: ತಾಲೂಕಿನ ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷರಾಗಿ ಪತ್ರಕರ್ತ ದಾ.ರಾ. ಮಹೇಶ್ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಶಿವಕುಮಾರ್ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಮಹೇಶ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಹುಣಸೂರು: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರ 66/11 ಕೆವಿಯಿಂದ ಹೊರಹೊಮ್ಮುವ 11 ಕೆವಿ ಕಲ್ಕುಣಿಕೆ ಹಾಗೂ ಚಿಕ್ಕ ಹುಣಸೂರು ನಗರ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿಯನ್ನು ಫೆ.13 ಹಾಗೂ 15 ರಂದು ಕೈಗೊಂಡಿರುವ ಹಿನ್ನೆಲೆಯಲ್ಲಿ ಹುಣಸೂರಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ಂ ಇಇ ನಾಗೇಶ್ ತಿಳಿಸಿದ್ದಾರೆ.
ಇಂದಿನಿಂದ ಗ್ರಾಮವಾಹಿನಿ ಬೀದಿ ನಾಟಕ
ಹುಣಸೂರು: ವಾರ್ತಾ ಇಲಾಖೆ ವತಿಯಿಂದ ಗ್ರಾಮ ವಾಹಿನಿ ಹಾಗೂ ಗ್ರಾಮ ಸಂಪರ್ಕ ಕಾರ್ಯಕ್ರಮದ ಅಂಗವಾಗಿ ಫೆ. 12ರಿಂದ 23ರವರೆಗೆ ತಾಲೂಕಿನ ವಿವಿಧೆಡೆ ಸಂಗೀತ ನಾಟಕ ಹಾಗೂ ಬೀದಿ ನಾಟಕ ಆಯೋಜಿಸಿದೆ.ಙ 12ರಂದು ಮನುಗನಹಳ್ಳಿ, ಹಂದಹಳ್ಳಿ, 13ರಂದು ತೆಂಗಲಕೊಪ್ಪಲು, 14ರಂದು ಹಳೇಬಿಡು, ಗೆರಸನಹಳ್ಳಿ, 15 ರಂದು ಬೋಳನಹಳ್ಳಿ, ಹೊಸರಾಮೇನಹಳ್ಳಿ, 16ರಂದು ಗಾಗೇನಹಳ್ಳಿ, ವಡೆರಾಹೊಸಹಳ್ಳಿ, 17ರಂದು ಬಸನಹಳ್ಳಿ, ಕರಿಮುದ್ದನಹಳ್ಳಿ, 18ರಂದು ಬನ್ನಿಕುಪ್ಪೆ, ಕಾಡನಹಳ್ಳಿ, 19ರಂದು ಮುಳ್ಳೂರು, ತೊಂಡಾಳು, 20ರಂದು ಹುಣಸೆನಹಳ್ಳಿ, ಕಲ್ಲಹಳ್ಳಿ, 21ರಂದು ನಾಗಮಂಗಲ, ಚಿಲ್ಕುಂದ. 22ರಂದು ಬೀಜನಹಳ್ಳಿ, ಮೂಕನಹಳ್ಳಿ ಹಾಗೂ 23ರಂದು ಗೋವಿಂದಹಳ್ಳಿ ಹಾಗೂ ಕಲ್ಲಕುಣಿಕೆ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಇಲಾಖೆಯ ಉಪನಿರ್ದೇಶಕ ಎ.ಆರ್ ಪ್ರಕಾಶ್ ತಿಳಿಸಿದ್ದಾರೆ.