ನಿರಂತರ ಜ್ಯೋತಿ ಕಾಮಗಾರಿಗೆ ವೇಗ ನೀಡಿ
ಎಚ್.ಡಿ. ಕೋಟೆ: ತಾಲೂಕಿನ ಅಂತರಸಂತೆ ಹೋಬಳಿಯಲ್ಲಿ ನಡೆಯುತ್ತಿರುವ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ತೀವ್ರ ಮಂದಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಿ, ತಾಲೂಕಿನ ಗ್ರಾಮಗಳಿಗೆ ನಿರಂತರ ಜ್ಯೋತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಅಂತರಸಂತೆ ಹೋಬಳಿಯು ತೀರ ಹಿಂದುಳಿದ ಪ್ರದೇಶವಾಗಿದೆ. ಹೆಚ್ಚಿನ ಗ್ರಾಮಗಳು ಕಾಡಂಚಿನಲ್ಲಿ ಇವೆ. ಹೆಚ್ಚು ಕೃಷಿ ಅವಲಂಬಿತರಾಗಿದ್ದು, ಇಡಿ ತಾಲೂಕಿನಲ್ಲಿ ಅಂತರಸಂತೆ ಹೋಬಳಿಯು ಅತಿ ಹೆಚ್ಚಿನ ಕೃಷಿ ಪಂಪ್ಸೆಟ್ಗಳನ್ನು ಹೊಂದಿದೆ. ಇಲ್ಲಿನ ರೈತರು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಅಂತರಸಂತೆ ಹೋಬಳಿಗೆ 2011ನೇ ಇಸವಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿ ಮಂಜೂರಾಗಿದೆ. ಹೋಬಳಿಯು ಸುಮಾರು 63 ಗ್ರಾಮಗಳನ್ನು ಹೊಂದಿದ್ದು, ಇದರಲ್ಲಿ 45 ಗ್ರಾಮಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ನಿರಂತರ ಜ್ಯೋತಿಗೆ ಒಟ್ಟು 312.9 ಕೋಟಿ ಹಣ ಮಂಜೂರಾಗಿದ್ದು, ಎಚ್.ಡಿ. ಕೋಟೆ, ಅಂತರಸಂತೆ ಮಾರ್ಗ ಬಾವಲಿಯವರೆಗೆ 66.11 ಕಿ.ಮೀ ಲೈನ್ ಕಾಮಗಾರಿ ಎಳೆಯಲು ಗುತ್ತಿಗೆದಾರರು ಟೆಂಡರ್ ಪಡೆದುಕೊಂಡಿದ್ದಾರೆ.
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ 10-12 ಕಿ.ಮೀ ಮಾತ್ರ ಕಂಬ ಹಾಗೂ ಲೈನ್ ಎಳೆಯುವುದು ಬಾಕಿ ಇದ್ದು, ಇನ್ನುಳಿದಂತೆ ಎಚ್.ಡಿ.ಕೋಟೆಯಿಂದ ಬಾವಲಿವರೆಗೆ ಎಲ್ಲ ಕಡೆ ಕಂಬಗಳನ್ನು ಹಾಕಿ, ಲೈನ್ ಎಳೆದಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಗುತ್ತಿಗೆದಾರರು ಕಾಮಗಾರಿಯನ್ನು ಏಕಾಏಕಿ ನಿಲ್ಲಿಸಿರುವುದರಿಂದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ ಎಂದು ಕಿರಿಯ ಎಂಜಿನಿಯರ್ ವಿನೋದ್ ಹೇಳಿದರು. ಕಾಮಗಾರಿಯು ಶೇ.70ರಷ್ಟು ಭಾಗ ಮುಗಿದಿದ್ದು, ಎಲ್ಲ ಕಡೆ ಲೈನ್ ಎಳೆದಿದ್ದು, ವಿದ್ಯುತ್ ಟ್ರಾನ್ಸ್ಫಾರಂಗಳನ್ನು ಮಾತ್ರ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.
ಈ ಯೋಜನೆಯು ಅಂತರಸಂತೆ, ಎನ್. ಬೆಳತ್ತೂರು ಗ್ರಾಪಂ, ಡಿ.ಬಿ. ಕುಪ್ಪೆ ಗ್ರಾಪಂ ಹಾಗೂ ನೂರಲಕುಪ್ಪೆ ಗ್ರಾಪಂ ಕೆಲವು ಗ್ರಾಮಗಳಿಗೆ ಮಾತ್ರ ಅನ್ವಯವಾಗಿರುತ್ತದೆ. ಈ ಬಗ್ಗೆ ಜಿಪಂ ಸದಸ್ಯರಾದ ಅಂತರಸಂತೆ ವ್ಯಾಪ್ತಿ ಮಂಜುನಾಥ್ ಅವರನ್ನು ವಿಚಾರಿಸಿದರೆ ಕಾಡಿನ ಒಳಗೆ 10-12 ಕಿ.ಮೀ ಲೈನ್ ಎಳೆಯಲು ಅರಣ್ಯ ಇಲಾಖೆಯವರು ಬರುತ್ತಿಲ್ಲ ಎಂದರು.
ಗುತ್ತಿಗೆದಾರರು ಕಂಬಗಳನ್ನು ಹ್ಯಾಂಡ್ಪೋಸ್ಟ್ನಿಂದ ಬಾವಲಿವರೆಗೆ ಅಲ್ಲಲ್ಲಿ ಇಟ್ಟಿರುವುದರಿಂದ ಅವುಗಳ ಮೇಲೆ ಗಿಡಗಂಟೆಗಳು ಬೆಳೆದಿವೆ ಹಾಗೂ ಕೆಲವು ಕಡೆ ಕಿಡಿಗೇಡಿಗಳು ತಂತಿಗಳನ್ನು ಕಳವು ಮಾಡಿದ್ದಾರೆ. ಜಿಪಂ ಸದಸ್ಯರಾದ ಮಂಜುನಾಥ್ ಆಯ್ಕೆಯಾದ ವೇಳೆ ಇನ್ನು ಒಂದು ವರ್ಷದ ಒಳಗೆ ಕಾಮಗಾರಿ ಮುಗಿಸಿ ಹೋಬಳಿ ವ್ಯಾಪ್ತಿಗೆ ನಿರಂತರ ವಿದ್ಯುತ್ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.