ಬಡವ- ಶ್ರೀಮಂತ ಅಂತರ ತಪ್ಪಲಿ
ಕ.ಪ್ರ.ವಾರ್ತೆ ಮೈಸೂರು ಫೆ. 11
ಇಂದು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಪ್ಪಬೇಕು ಎಂದು ಗ್ಲೋಬಲ್ ರಿಸರ್ಚ್ ಅಲೈಯನ್ಸ್ ಅಧ್ಯಕ್ಷ ಹಾಗೂ ಸಿಎಸ್ಐಆರ್ನ ಮಾಜಿ ನಿರ್ದೇಶಕ, ಪದ್ಮವಿಭೂಷಣ ಡಾ. ಆರ್.ಎ. ಮಷೇಲ್ಕರ್ ಹೇಳಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯಲ್ಲಿ (ಎಸ್ಡಿಎಂಐಎಂಡಿ)ಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಯಕತ್ವ ಕುರಿತ ವಾರ್ಷಿಕ ಭಾಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಬಡವರ ಆದಾಯ ಹೆಚ್ಚಾಗುತ್ತಿದ್ದರೂ, ಅಷ್ಟೇ ಪ್ರಮಾಣದಲ್ಲಿ ಶ್ರೀಮಂತರು ಹೆಚ್ಚು ವರಮಾನ ಗಳಿಸಿ ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ. ಇದರಿಂದಾಗಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಿಲ್ಲ. ಬಡವರು ಮಧ್ಯಮ ವರ್ಗಕ್ಕೆ ಬರಬೇಕಾದರೆ ಸುಮಾರು 30 ವರ್ಷ ಕಾಲ ಬೇಕಾಗಲಿದೆ. ಅಂಥ ದೊಡ್ಡ ಸಮಯದ ಅಂತರ ಸರಿಯಲ್ಲ ಎಂದು ಅವರು ವಿಷಾದಿಸಿದರು.
ಬಡವರು ಮತ್ತು ಶ್ರೀಮಂತರ ನಡುವೆ ಇರುವ ತಾರತಮ್ಯ ಹೋಗಲಾಡಿಸಬೇಕಾದರೆ ಸಾಮಾಜಿಕ ಒಳಗೊಳ್ಳುವಿಕೆಯಿಂದ ಮಾತ್ರ ಸಾಧ್ಯ. ಗುಣಮಟ್ಟದ ಎಲ್ಲ ವಸ್ತುಗಳು ಬಡವರಿಗೂ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಆಗ ಮಾತ್ರ ದೇಶದ ಸಮಗ್ರ ಪ್ರಗತಿಯನ್ನು ನೀರಿಕ್ಷಿಸಿಬಹುದು ಎಂದರು.
ಇಂದಿನ ಜಗತ್ತಿನಲ್ಲಿ ಯಾರು ಹೊಸ ಹೊಸ ಅನ್ವೇಷಣೆಗೆ ಹಾಗೂ ಆಲೋಚನೆಗೆ ಮುಂದಾಗುತ್ತಾರೋ ಅಂಥ ಪರಿಣಿತರು ಮುಂದಿನ ನಾಯಕರಾಗಬಲ್ಲರು. ಹೊಸತನದಿಂದ ಸಾಮಾಜಿಕ ಹಾಗೂ ಆರ್ಥಿಕತೆ ವೃದ್ಧಿಸುವುದಲ್ಲದೆ. ಅಸಮಾನತೆ ತೊಲಗಲಿದೆ. 21ನೇ ಶತಮಾನದಲ್ಲಿ ಇಂಥ ಹೊಸ ಅಲೋಚನೆಯಲ್ಲಿ ಭಾರತವು ಅಗ್ರ ಸ್ಥಾನ ಹೊಂದಲಿದೆ ಎಂದರು. ಯುವಜನತೆ ತಂತ್ರಜ್ಞಾನವನ್ನು ಹೆಚ್ಚಾಗಿ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮೊಬೈಲ್ ಮಾಹಿತಿ, ಇಂಟರ್ನೆಟ್, ಕ್ಲೌಡಿಂಗ್ ವ್ಯವಸ್ಥೆ, ತ್ರೀಡಿ ಪ್ರಿಂಟಿಂಗ್ ಹಾಗೂ ಶಕ್ತಿ ಸಂಗ್ರಹದತ್ತ ಗಮನ ಹರಿಸಿದಾಗ ಹೊಸತನದತ್ತ ಸಾಗಬಹುದು ಎಂದರು.
ಎಂವಿಟಿ ಸ್ಲೋನ್ ಶಾಲೆ ಪ್ರಾಧ್ಯಾಪಕ ಡಾ. ಮೈಕಲ್ ಕುಸುಮಾನೊ, ಸಿಎಫ್ಟಿಆರ್ ಮಾಜಿ ನಿರ್ದೇಶಕ ಡಾ. ವಿ. ಪ್ರಕಾಶ್, ಕರುಣಾ ಟ್ರಸ್ಟ್ ಗೌರವ ಕಾರ್ಯದರ್ಶಿ ಡಾ.ಎಚ್. ಸುದರ್ಶನ್, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ ಹಾಗೂ ಗ್ರೋಟ್ಯಾಲೆಂಟ್ ಕಂಪನಿ ಸ್ಥಾಪಕ ಅನಿಲ್ ಸಚ್ದೇವ್, ಸಂಸ್ಥೆ ನಿರ್ದೇಶಕ ಡಾ. ಪರಶುರಾಮನ್ ಇದ್ದರು.