ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಮೂಡಿಸಿ

Srinivasa Murthy VN
Updated On : 12 Feb 2014, 12:49 pm

ಮೈಸೂರು: ಸಮಾಜಮುಖಿ ಚಿಂತನೆಯ ಮಕ್ಕಳನ್ನು ತಯಾರು ಮಾಡಬೇಕಾದ ಅಗತ್ಯ ಶಿಕ್ಷಕರ ಮೇಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಎಚ್.ಡಿ. ಕೋಟೆ ರಸ್ತೆಯ ಮೌಂಟ್ ಲಿಟೆರಾ ಝೀ ಸ್ಕೂಲ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಕ್ಕೆ 58 ಸಾವಿರ ಕೋಟಿ ತೆರಿಗೆ ಬರುತ್ತದೆ. ಆದರೆ 28 ಸಾವಿರ ಕೋಟಿ ಸಂಬಳಕ್ಕೆ ವ್ಯಯವಾಗುತ್ತಿದೆ. ರಾಜ್ಯದಲ್ಲಿನ 6 ಲಕ್ಷ ಮಂದಿ ನೌಕರರಿಗೆ ಆದಾಯದ ಅರ್ಧದಷ್ಟು ಹಣ ಸಂಬಳಕ್ಕೆ ಹೋಗುತ್ತಿದೆ. ಆದ್ದರಿಂದ ಶಿಕ್ಷಕರು ಸಮಾಜಮುಖಿಯಾಗಿ ಚಿಂತಿಸುವ ಮಕ್ಕಳನ್ನು ತಯಾರು ಮಾಡಬೇಕಿದೆ. ಇಲಾಖೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ, ಬದಲಾವಣೆಗೆ ಹೆಚ್ಚಿನ ಗಮನ ನೀಡುವುದಾಗಿ ಹೇಳಿದರು.
ಪಾಂಡಿತ್ಯಕ್ಕೆ ಪೂರಕ ಮೌಲ್ಯ ಇರದಿದ್ದರೆ ಪದವಿಗೆ ಶೋಭೆ ಬರುವುದಿಲ್ಲ. ಪದವಿಗಳಾಚೆಗೂ ಬದುಕಿರುತ್ತದೆ. ನಾವು ಓದುವಾಗ ಶೇ. 18ರಿಂದ 22ರಷ್ಟು ಸಾಕ್ಷರತೆ ಪ್ರಮಾಣ ಇತ್ತು. ಈಗ ಅದು ಶೇ.76ಕ್ಕೆ ಏರಿಕೆಯಾಗಿದೆ. ಹೀಗಿದ್ದರೂ ಮನುಷ್ಯನಲ್ಲಿ ಪ್ರಾಮಾಣಿಕತೆ, ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಒಳ್ಳೆಯ ಗುಣ ಬೆಳೆಸಬೇಕು ಎಂದರು.
ಹುಟ್ಟುವಾಗ ವಿಶ್ವಮಾನವರಾಗುವ ಮಕ್ಕಳನ್ನು ಜಾತಿ, ಮತ, ಧರ್ಮದಂಥ ಸಂಕುಚಿತ ಬೇಲಿಗಳಿಂದ ದೂರ ಇರಿಸಬೇಕು. ಪ್ರಕೃತಿಯಲ್ಲಿ ಮಗು ಮತ್ತು ಹೂ ಅದ್ಭುತ ಸೃಷ್ಟಿ. ಮಗುವಿಗೆ ಯಾವುದೆ ಜಾತಿ, ಮತ ಭೇದ ಇರುವುದಿಲ್ಲ. ನಾವು ಅವರಿಗೆ ಮತ, ಧರ್ಮದ ಬೇಲಿ ಹಾಕಿ ಅಲ್ಪ ಮಾನವರನ್ನಾಗಿ ಮಾಡುತ್ತೇವೆ. ಇಂಥ ಸಂಕುಚಿತ, ಮತೀಯ ವಿಷಯಗಳನ್ನು ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬಾರದು ಎಂದು ಅವರು ಸಲಹೆ ನೀಡಿದರು.
ರಾಜ್ಯದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಪುಸ್ತಕ ಮುದ್ರಿಸಲಾಗುತ್ತದೆ. ಮುಂದಿನ ವರ್ಷ ಮತ್ತೆ ಅಷ್ಟೆ ಪ್ರಮಾಣದಲ್ಲಿ ಪುಸ್ತಕಕ್ಕೆ ಬೇಡಿಕೆ ಬರುತ್ತದೆ. ಹಾಗಿದ್ದರೆ ಆ ಪುಸ್ತಕಗಳನ್ನು ಮಕ್ಕಳು ಯಾರಿಗೆ ಕೊಡುತ್ತಾರೆ? ನಾವು ಓದುವಾಗ ನಮ್ಮ ಅಕ್ಕ, ಅಣ್ಣಂದಿರ ಪುಸ್ತಕಗಳನ್ನೆ ಬಳಸುತ್ತಿದ್ದೆವು. ಅಂತೆಯೆ ಶಿಕ್ಷಕ ವರ್ಗ ಪುಸ್ತಕಗಳನ್ನು ಮತ್ತೊಬ್ಬರಿಗೆ ನೀಡುವಂತೆ ಅರಿವು ಮೂಡಿಸಬೇಕು. ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು ಎಂದು ಕರೆ ನೀಡಿದರು.
ಸಂಸದ ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಶಾಸಕ ಎಂ. ಸತ್ಯನಾರಾಯಣ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಕೋಟೆಹುಂಡಿ ಮಹದೇವ್, ಶಾಲೆಯ ಅಧ್ಯಕ್ಷ ಜೋಸೆಫ್ ಥಾಮಸ್, ಕಾರ್ಯದರ್ಶಿ ನಾಗರಾಜ್, ಟ್ರಸ್ಟಿ ಸದಸ್ಯ ವಿಜು ಥಾಮಸ್, ಪ್ರಾಂಶುಪಾಲ ಆರ್.ಕೆ. ಮೋಸಸ್ ಇದ್ದರು.                

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement