ಸಾಂಸ್ಕೃತಿಕ ನಗರಿಯಲ್ಲಿ ಓಡುವುದೇ ಖರ್ಗೆ ರೈಲು?
-ಅಂಶಿ ಪ್ರಸನ್ನಕುಮಾರ್
ಮೈಸೂರು: ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಫೆ.12ರಂದು ರೇಲ್ವೆ ಬಜೆಟ್ ಮಂಡಿಸಲಿದ್ದು, ಮೈಸೂರು ಭಾಗದ ಜನರ ನಿರೀಕ್ಷೆಗಳು ಹತ್ತು ಹಲವು ಇವೆ.
ಸದ್ಯದಲ್ಲೇ ಲೋಕಸಭಾ ಚುನಾವಣೆ ನಡೆಯಬೇಕಿರುವುದಿರಂದ ಪೂರ್ಣ ಪ್ರಮಾಣದ ಬಜೆಟ್ ಇದಾಗಿರುವುದಿಲ್ಲ. ಆದರೂ ರಾಜ್ಯದವರೇ ಆದ ಖರ್ಗೆ ಅವರು ಒಂದಷ್ಟು ಅನುಕೂಲ ಮಾಡಿಕೊಡಬಹುದು ಎಂಬುದು ಜನರ ನಿರೀಕ್ಷೆ.
ಮೈಸೂರುವರೆಗೂ ಉದ್ಯಾನ್ ಎಕ್ಸ್ಪ್ರೆಸ್ ವಿಸ್ತರಣೆ, ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಗೆ ರಾತ್ರಿ ರೈಲು ಸಂಚಾರ, ವಾರಣಾಸಿ ರೈಲು, ಸ್ವರ್ಣಜಯಂತಿ ರೈಲು ಹೆಚ್ಚುವರಿ ಸಂಚಾರ- ಈ ನಾಲ್ಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಮೈಸೂರು ನಿಲ್ದಾಣಕ್ಕೆ ಒತ್ತಡ ಹೆಚ್ಚಿರುವುದರಿಂದ ಬೆಳಗೊಳದಲ್ಲಿ ಮತ್ತೊಂದು ಟರ್ಮಿನಲ್ ಆರಂಭಿಸುವ ಪ್ರಸ್ತಾವನೆಗೂ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಮೈಸೂರಿಗೆ ರೇಲ್ವೆ ವೈದ್ಯಕೀಯ ಕಾಲೇಜು ಮಂಜೂರಾಗಿ ನಾಲ್ಕು ವರ್ಷಗಳಾದರೂ 25 ಎಕರೆ ಜಾಗ ಒಂದೆಡೆ ಸಿಗದೇ ಕಾಲೇಜು ಆರಂಭವಾಗಿಲ್ಲ. ಮೈಸೂರು ರೇಲ್ವೆ ಕಾರ್ಯಾಗಾರದ ಬಳಿ 18 ಎಕರೆ ಜಮೀನು ಮಾತ್ರ ಇದೆ. 25 ಎಕರೆ ಜಮೀನು ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಹೇಳಿದ್ದರು. ಆದರೆ ಈವರೆಗೂ ಯಾವುದೇ ಪ್ರಗತಿಯಾಗಿಲ್ಲ.
ಮೈಸೂರು ರೇಲ್ವೆ ನಿಲ್ದಾಣದಲ್ಲಿ ಸಬ್ ವೇ ನಿರ್ಮಾಣ ಕಾಮಗಾರಿ ಬಹಳ ವರ್ಷಗಳಿಂದ ಆಗಿಲ್ಲ. ಈ ಕೆಲಸವಾದಲ್ಲಿ ಬೆಂಗಳೂರಿನಂತೆ ಮೊದಲ ಪ್ಲಾಟ್ಫಾರಂನಿಂದ ಉಳಿದ ಪ್ಲಾಟ್ಫಾರಂಗಳಿಗೆ ಹೋಗಲು ಅನುಕೂಲ.
ಮೈಸೂರು- ಕುಶಾಲನಗರ ಮಾರ್ಗದ ರೇಲ್ವೆ ಹಳಿ ಕಾಮಗಾರಿ ಚುರುಕಾಗಬೇಕು. ಏಕೆಂದರೆ ಮೈಸೂರು- ತಲಚೇರಿ ಮಾರ್ಗದ ಘೋಷಣೆಯಾಗಿ ಐದೂವರೆ ದಶಕಗಳು ಕಳೆದಿವೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೇಲ್ವೆ ಸಚಿವರಾಗಿದ್ದಾಗ ಈ ಮಾರ್ಗ ಘೋಷಣೆಯಾಗಿತ್ತು.
ಈ ಮಾರ್ಗ ಕಾರ್ಯಗತವಾಗಬೇಕು ಎಂದು ಕೇರಳದವರು ಪದೇ ಪದೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈ ಮಾರ್ಗ ಆದಲ್ಲಿ ಮೈಸೂರಿನಿಂದ ಬೈಲುಕಪ್ಪೆಯ ಸ್ವರ್ಣ ದೇಗುಲ, ಕೊಡಗಿನ ಕುಶಾಲನಗರ, ಮಡಿಕೇರಿ, ದುಬಾರೆ, ನಿಸರ್ಗಧಾಮ ಮೊದಲಾದ ಪ್ರವಾಸಿತಾಣಗಳಿಗೆ ಹೋಗಲು ಅನುಕೂಲವಾಗಲಿದೆ.
ಬೆಂಗಳೂರು- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ಕಾಮಗಾರಿಯೂ ಚುರುಕಾಗಬೇಕು. ಚಾಮರಾಜನಗರದಲ್ಲಿ ರೇಕ್ ನಿರ್ಮಾಣವಾಗಬೇಕು. ಬೆಂಗಳೂರು- ಚಾಮರಾಜನಗರ ಮಾರ್ಗಕ್ಕೆ ಈ ಬಾರಿಯ ಬಜೆಟ್ನಲ್ಲಿ ಹಣ ಮಂಜೂರಾಗುವ ಸಾಧ್ಯತೆ ಹೆಚ್ಚಿದೆ.
ಮೈಸೂರಿನ ಅಶೋಕಪುರಂನಲ್ಲಿರುವ ರೇಲ್ವೆ ಕಾರ್ಯಾಗಾರ ಮೇಲ್ದರ್ಜೆಗೇರಬೇಕು. ಮೈಸೂರು- ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳ್ಳಲು ಅಡ್ಡಿಯಾಗಿರುವ ಶ್ರೀರಂಗಪಟ್ಟಣ ಬಳಿ ಟಿಪ್ಪು ಶಸ್ತ್ರಕೋಠಿ ಸ್ಥಳಾಂತರ ಕಾರ್ಯ ಆಗಬೇಕು.
ಮೈಸೂರು- ಕೊಡಗು ಸಂಸದ ಎಚ್.ವಿಶ್ವನಾಥ್ ಹಾಗೂ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ ಅವರು ಈ ಭಾಗದ ರೇಲ್ವೆ ಯೋಜನೆಗಳ ಬಗ್ಗೆ ಹಿಂದೆ ರೇಲ್ವೆ ಖಾತೆಯ ಸಹಾಯಕ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರ ಗಮನಕ್ಕೂ ತಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರೇ ಸಂಪುಟ ದರ್ಜೆಯ ಸಚಿವರಾಗಿರುವುದರಿಂದ ಮತ್ತೊಮ್ಮೆ ಗಮನಕ್ಕೆ ತಂದು, ಎಲ್ಲ ಕಾಮಗಾರಿಗಳನ್ನು ತ್ವರಿತಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.