'ಸ್ವಯಂಸೇವಕರಿಂದ ಹಲವರಿಗೆ ಅಕ್ಷರಭಾಗ್ಯ'
ಪಿರಿಯಾಪಟ್ಟಣ: ಅನಕ್ಷರಸ್ಥರಿಗೆ ಅಕ್ಷರ ಕಲಿಸುವಲ್ಲಿ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣವಾದದ್ದು ಎಂದು ಬೆಂಗಳೂರಿನ ಲೋಕಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಎನ್.ಸಿ.ಸೀತಮ್ಮ ಹೇಳಿದರು.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಸಾಕ್ಷರ ಭಾರತ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, 15 ವರ್ಷದ ಮೇಲ್ಪಟ್ಟು 50 ವರ್ಷದ ಒಳಗಿರುವ ವಯೋವಾನದವರಿಗೆ ಅಕ್ಷರ ಕಲಿಸುವ ಕೆಲಸ ಬಹಳ ಕಷ್ಟದ ಕೆಲಸ. ಆ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೆ ತರಬೇತಿ ನೀಡಿ ಮನವೊಲಿಸಿ ಅನಕ್ಷರಸ್ಥರಿಗೆ ಕಲಿಸಲು ಪ್ರೇರಣೆ ನೀಡಿ ಕಲಿಕೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಇದೇ ವೇಳೆ ಪ್ರೇರಕರು ನಮಗೆ ಕೊಡುವ ಎರಡು ಸಾವಿರ ಗೌರವಧನವನ್ನು 12 ತಿಂಗಳಿಂದ ಇದುವರೆಗೂ ನೀಡಿಲ್ಲ. ನೀಡುತ್ತಿರುವ 2000 ಗೌರವಧನ ಸಾಕಾಗುವುದಿಲ್ಲ. ಇನ್ನು ಮುಂದೆ ನಮಗೆ 8 ಸಾವಿರ ಗೌರವಧನವನ್ನು ಕೊಡಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಎನ್.ಸಿ.ಸೀತಮ್ಮ ನಿಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು ನಿಮ್ಮ ಬೇಡಿಕೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಜಿಲ್ಲಾ ಸಂಯೋಜಕ ಎಸ್. ಮಂಜುನಾಥ್, ತಾ. ಸಂಯೋಜಕ ಎಸ್.ಆರ್. ಅನಂತ್, ತಾ. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ದಯಾನಂದ್, ಸಂಪನ್ಮೂಲ ವ್ಯಕ್ತಿಗಳಾದ ಎಂ.ಡಿ. ಶಿವಕುಮಾರ್, ಎಸ್.ಎಂ. ಸುರೇಶ್, ಪುಟ್ಟರಾಜ್, ಗ್ರಾಪಂ ಸಂಯೋಜಕರಾದ ಕೆ. ಶಿವಣ್ಣ ಬೈಲಕುಪ್ಪೆ, ಹರೀಶ್, ಪ್ರದೀಪ್, ಮಂಜು, ರೇಷ್ಮ, ಸುಮ, ಶೃತಿ, ನಂದಿನಿ ತಾರಾದೇವಿ ಇದ್ದರು.