ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

20 ನಿಮಿಷ 20 ಸುದ್ದಿ

Srinivasa Murthy VN
Updated On : 15 Feb 2014, 10:26 am

ಹುಣಸೂರು: ಎಚ್ಐವಿ ಮತ್ತು ಏಡ್ಸ್ ಮಾರಕ ಕಾಯಿಲೆಯಾಗಿದ್ದು, ಮುನ್ನೆಚ್ಚರಿಕೆ ವಹಿಸಬೇಕೆಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಎಸ್. ಲೊಕೇಶ್ ಹೇಳಿದರು. ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ ಯವರ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಎಚ್ಐವಿ ಹಾಗೂ ಏಡ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರೆಡ್ ರಿಬ್ಬನ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಎನ್ಎಸ್ಎಸ್ ಯೋಜನಾಧಿಕಾರಿ ದೀಪುಕುಮಾರ್, ಸಾಂಸ್ಕೃತಿಕ ಸಂಚಾಲಕ ಪುಟ್ಟಶೆಟ್ಟಿ, ಐಕ್ಯೂಎಸಿ ಸಂಚಾಲಕ ಜ್ಞಾನಪ್ರಕಾಶ್, ಪ್ರಾಂಶುಪಾಲೆ ಎಂ.ಆರ್. ಸೌಭಾಗ್ಯ ಅಧ್ಯಕ್ಷತೆ ವಹಿಸಿದ್ದರು.

ಊರಿಗೊಂದು ದಲಿತರಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿ
ಹುಣಸೂರು: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತಿಂಗಳಿಗೆ ಕನಿಷ್ಠ ಒಂದು ದಲಿತ ಸ್ಮಶಾನವನ್ನಾದರೂ ಗುರುತಿಸಿ ಅಭಿವೃದ್ಧಿಪಡಿಸಿ, ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಅವರಿಗೆ ಈ ಜವಾಬ್ದಾರಿ ವಹಿಸಲು ತಹಸೀಲ್ದಾರ್ ಸುತ್ತೋಲೆ ಕಳುಹಿಸಬೇಕು ಎಂದು ದಲಿತ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು ಒತ್ತಾಯಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಮಾಜ ಕಲ್ಯಾಣಾಧಿಕಾರಿಗಳು ಇತ್ತೀಚೆಗೆ ಆಯೋಜಿಸಿದ್ದ ಪ.ಜಾತಿ, ಪ.ವರ್ಗಗಳ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ದಲಿತರ ಶವ ಸಂಸ್ಕಾರಕ್ಕೆ ಸ್ಮಶಾನವೆ ಇಲ್ಲ ಎಂದು ದೂರಿದರು. ದೊಡ್ಡ ಹೆಜ್ಜೂರಿನಲ್ಲಿ ದಲಿತರ ಸ್ಮಶಾನದಲ್ಲಿ ಸ್ವಾಮಿಗೌಡ ಎಂಬವರು ಶುಂಠಿ ಬೆಳೆದಿದ್ದು ಸರ್ಕಾರ ಆ ಭೂಮಿ ವಶಪಡಿಸಿಕೊಳ್ಳಬೇಕು ಎಂದು ದೇವೇಂದ್ರ ಆಗ್ರಹಿಸಿದರೆ, ರಾಯನಹಳ್ಳಿಯಲ್ಲಿ ಸ್ಮಶಾನ ಗುರುತಿಸಿ ಹದ್ದುಬಸ್ತು ಮಾಡಿದ್ದರೂ ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ವಾಮಿ ಆರೋಪಿಸಿದರು.

ಏಡ್ಸ್ ಜಾಗೃತಿ ನಡೆಸಿದ ವಿದ್ಯಾರ್ಥಿಗಳು
ಟಿ. ನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ಅರಿವು ಜಾಗೃತಿ ಜಾಥಾ ನಡೆಸಿದರು. ಕಾಲೇಜಿನ ಆವರಣದಲ್ಲಿಯೇ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಜಾಥಾಕ್ಕೆ ಪ್ರಾಂಶುಪಾಲ ಪ್ರೊ.ನಟರಾಜು ಚಾಲನೆ ನೀಡಿದರು. ಪ್ರಾಂಶುಪಾಲ ಪ್ರೊ.ನಟರಾಜು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಿರಂಜನಬಾಬು ರೆಡ್ಡಿ, ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ನಾಸಿರ್ ಅಹಮದ್, ಸಹಾಯಕ ಪ್ರಾಧ್ಯಾಪಕ ಎಚ್.ಎಂ. ಮಹದೇವಪ್ರಸಾದ್, ಎಚ್.ಎಂ. ಮಂಜುನಾಥ್, ಎಸ್. ಹರೀಶ್, ಪೂರ್ಣಿಮಾ, ಉದಯಕುಮಾರ್, ರಾಜೀವ್, ಡಾ. ನಾಗೇಂದ್ರಕುಮಾರ್, ಪ್ರೇಮಕುಮಾರಿ, ಪಾರ್ವತಿ ಇದ್ದರು.

ದೊಡ್ಡಹರವೆ ಸಹಕಾರ ಸಂಘಕ್ಕೆ ಆಯ್ಕೆ
ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ. ಕುಮಾರ್, ಉಪಾಧ್ಯಕ್ಷರಾಗಿ ಎನ್.ಜಿ.ನಾಗರಾಜ್ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪಿಡಿಒ ಮಹದೇವ್ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಲಕ್ಷ್ಮೇಗೌಡ, ಎಚ್.ಟಿ.ರವಿ, ಅರ್ಜುನ, ಗೌರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಶ್, ದಾಸು, ರವಿ, ಶಂಕರ್, ಮುಖಂಡರಾದ ರವಿ, ಜಗದೀಶ್, ರವಿಶಂಕರ್, ಛಲವಾದಿ ಮಹಾಸಭಾದ ಶಾಖಾಧ್ಯಕ್ಷ ರವಿಕುಮಾರ್, ಗಣೇಶ್ ಇದ್ದರು. ಶನಿವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಕುಮಾರ್, ತಾಲೂಕು ಹಾಲು ಉತ್ಪಾದನೆಯಲ್ಲಿ ನಮ್ಮ ಸಂಘ ಮೊದಲನೇ ಸ್ಥಾನದಲ್ಲಿದೆ. ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ. ಅಲ್ಲದೆ ಖಾಸಗಿ ಹಾಲಿನ ಕಂಪನಿಗಳ ಪೈಪೋಟಿಯೂ ಇದೆ ಎಂದು ಹೇಳಿದರು.

ಆಟೋ ಚಾಲಕರು ಕನಿಷ್ಠ ದರ ಮಾತ್ರ ಪಡೆಯಬೇಕು
ಪಿರಿಯಾಪಟ್ಟಣ: ಆಟೋ ಚಾಲಕರು ಪ್ರಯಾಣಿಕರಿಂದ ಕನಿಷ್ಠ ದರ 25 ಅನ್ನು ಮಾತ್ರ ಪಡೆಯಬೇಕೆಂದು ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಸೂಚಿಸಿದರು. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಆಟೋ ಚಾಲಕರ ಸಭೆ ನಡೆಸಿದರು. ಆಟೋ ಚಾಲಕರು ಪಟ್ಟಣದಲ್ಲಿ ಮಿತಿ ಇಲ್ಲದೆ ಆಟೋ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ, ಆಟೋ ಚಾಲಕರು ತಮ್ಮ ನಿಲ್ದಾಣಗಳಲ್ಲಿ ಕನಿಷ್ಠ ದರ 25 ಎಂದು ನಾಮಫಲಕದಲ್ಲಿ ಬರೆಯಬೇಕು ಎಂದು ತಿಳಿಸಿದರು. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕು. ರಾತ್ರಿ ಕಾರ್ಯನಿರ್ವಹಿಸುವ ಆಟೋ ಚಾಲಕರು 10ರ ನಂತರ ಕನಿಷ್ಠ ದರದ ಅರ್ಧದಷ್ಟು ಹೆಚ್ಚಿಗೆ ಪಡೆಯಬಹುದು ಎಂದು ಹೇಳಿದರು.

ಸಾರ್ವಜನಿಕರಲ್ಲಿ ಏಡ್ಸ್ಬಗ್ಗೆ ಅರಿವು ಮೂಡಿಸಲು ಕರೆ
ಕೆ.ಆರ್. ನಗರ: ಏಡ್ಸ್ ಒಂದು ಮಾರಕ ರೋಗವಾಗಿದ್ದು, ಅದು ಹರಡದಂತೆ ತಡೆಗಟ್ಟಿ ಮುಂದಿನ ಪೀಳಿಗೆಯನ್ನು ಆರೋಗ್ಯವಾಗಿ ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಡಾ.ಶಿವನಂಜಪ್ಪ ಹೇಳಿದರು. ಪಟ್ಟಣದ ಟಿ.ಮರಿಯಪ್ಪ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎಚ್ಐವಿ ಮಾರಕ ರೋಗ ತಡೆಗಟ್ಟಿ ಮುಂದಿನ ಪೀಳಿಗೆಯನ್ನು ರಕ್ಷಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾರಕ ರೋಗ ಏಡ್ಸ್ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದರ ಬಗ್ಗೆ ಪ್ರತಿಯೊಬ್ಬರೂ ಜಾಗರೂಕತೆಯಿಂದ ವರ್ತಿಸುವುದು ಸೂಕ್ತ ಎಂದರು. ಕಾಲೇಜು ಪ್ರಾಂಶುಪಾಲ ಎನ್.ಶಿವಣ್ಣ, ತಎಂ.ಬಿ. ಲೋಕನಾಥ್ ಮಾತನಾಡಿದರು.

ಕರ್ಪೂರವಳ್ಳಿ ಸಹಕಾರ ಸಂಘಕ್ಕೆ ಆಯ್ಕೆ
ಸಾಲಿಗ್ರಾಮ: ಕೆ.ಆರ್. ನಗರ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುಧಾ ಪರಮೇಶ್ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಆರ್. ಫಣಿಕುಮಾರ್ ತಿಳಿಸಿದರು. ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಚನ್ನಬಸಪ್ಪ, ಸಂಘದ ಕಾರ್ಯದರ್ಶಿ ಪದ್ಮಕೃಷ್ಣಶೆಟ್ಟಿ, ನಿರ್ದೇಶಕರಾದ ಜಯಮ್ಮ ರಾಜಾಚಾರಿ, ಶಿವಮ್ಮ ನಾಗಪ್ಪ, ಶಾಂತಮ್ಮ ಶ್ರೀನಿವಾಸಶೆಟ್ಟಿ, ಪ್ರೇಮ ಶಂಕರಪ್ಪ, ವೆಂಕಟಮ್ಮ ಅಣ್ಣಾಜೀಶೆಟ್ಟಿ, ಹೇಮಮ್ಮ ಬಸವಲಿಂಗಪ್ಪ, ಗೌರಮ್ಮ ರಾಜಯ್ಯ, ಪದ್ಮವೆಂಕಟೇಶಶೆಟ್ಟಿ, ಪಾರ್ವತಮ್ಮ ಚಂದ್ರಪ್ಪ ಇದ್ದರು.

ವಿಜೃಂಭಣೆಯಿಂದ ನಡೆದ ಸಿಡಿಲು ಮಲ್ಲಿಕಾರ್ಜುನ ಜಾತ್ರೆ
ರಾವಂದೂರು: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವವು ಶನಿವಾರ ವಿಜೃಂಭಂಣೆಯಿಂದ ನೆರವೇರಿತು. ಸಿಡಿಲು ಮಲ್ಲಿಕಾರ್ಜುನಸ್ವಾಮಿ ಕ್ಷೇತ್ರವು ಇತಿಹಾಸ ಪ್ರಸಿದ್ಧಿಯಾಗಿದ್ದು, ಮೂಲ ದೇವರು ಬೆಟ್ಟದಲ್ಲಿ ಸ್ಥಾಪಿತವಾಗಿದೆ. ಉತ್ಸವ ಮೂರ್ತಿಗಳಾದ ವಿನಾಯಕ, ಬೆಳ್ಳಿ ಬಸಪ್ಪ ಹಾಗೂ ಸಿಡಿಲು ಮಲ್ಲಿಕಾರ್ಜುನ ದೇವರು ಬೆಟ್ಟದಪುರದ ವಿವಿಧೆಡೆ ಸ್ಥಾಪಿತಗೊಂಡಿವೆ. ಬೆಟ್ಟದಪುರ ರಥದ ಬೀದಿಯಲ್ಲಿ ಉತ್ಸವ ಮೂರ್ತಿಗಳ ವಿಜೃಂಭಣೆ ರಥೋತ್ಸವಕ್ಕೆ ಸಾವಿರಾರು ಮಂದಿ ರಥ ಎಳೆಯುವುದರ ಮೂಲಕ ಚಾಲನೆ ನೀಡಿದರು. ತಹಸೀಲ್ದಾರ್ ಎಂ.ಕೆ. ಸವಿತ ರಥೋತ್ಸವ ಹಾಗೂ ಗಿರಿಜಾಕಲ್ಯಾಣ ಮಹೋತ್ಸವಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.

ಕಾಲುಬಾಯಿ ರೋಗ ತಡೆಗೆ ಲಸಿಕೆ ಕಾರ್ಯಕ್ರಮ
ಭೇರ್ಯ: ರಾಜ್ಯಾದಂತ ಜಾನುವಾರುಗಳಿಗೆ ಹರಡಿರುವ ಕಾಲುಬಾಯಿ ಜ್ವರಕ್ಕೆ ಸರ್ಕಾರ ಉಚಿತವಾಗಿ ಲಸಿಕೆ ಹಾಕುತ್ತಿದ್ದು, ರೈತರು ತಮ್ಮ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಮುಂದೊದಗುವ ದುಷ್ಪರಿಣಾಮಕ್ಕೆ ತಡೆವೊಡ್ಡುವಂತೆ ಜಿಪಂ ಸದಸ್ಯ  ರಾಜಯ್ಯ ಕರೆ ನೀಡಿದರು. ಹೊಸಅಗ್ರಹಾರ ಹೋಬಳಿಯ ಮಂಚನಹಳ್ಳಿ ಗ್ರಾಮದಲ್ಲಿ ಶನಿವಾರ ಪಶುವೈದ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರಕ್ಕೆ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಪಶುವೈದ್ಯಾಧಿಕಾರಿ ಡಾ.ಹರೀಶ್, ಡಾ. ರಘುಪತಿ, ಪಶುವೈದ್ಯಕೀಯ ಪರೀಕ್ಷಕರಾದ ಎಚ್.ಡಿ. ಬಸವರಾಜ್, ರಮೇಶ್, ಕೆ.ಸ್ವಾಮಿ, ಡಿ. ಬಾಲಸುಬ್ರಮಣ್ಯಂ, ಸಿ. ರಾಜು, ಕಾಂಗ್ರೆಸ್ ಮುಖಂಡ ಅರ್ಜುನಹಳ್ಳಿ ಮಂಜು, ಮಂಚನಹಳ್ಳಿ ಗ್ರಾಮಸ್ಥರು ಇದ್ದರು.

ಅನ್ವಯ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ
ಎಚ್.ಡಿ. ಕೋಟೆ: ತಾಲೂಕಿನ ಮಹದೇವನಗರದಲ್ಲಿರುವ ಅನ್ವಯ ಪಬ್ಲಿಕ್ ಸ್ಕೂಲ್ನ ಶಾಲಾ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಅಧ್ಯಕ್ಷ ಎಂ.ಸಿ.ಎಸ್. ಮನೋಹರ ಮಾತನಾಡಿ, ಹಳ್ಳಿಗಳಲ್ಲಿ ಅಭಿವೃದ್ಧಿಯ ಬದಲಾವಣೆಯ ಗಾಳಿ ಬೀಸುತ್ತಿದೆ. ಅದರಲ್ಲೂ ಶಿಕ್ಷಣ ಕುರಿತಾಗಿ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿಸಬೇಕೆಂಬ ಕಾಳಜಿ ಪೋಷಕರಲ್ಲಿ ಚಿಗುರೊಡೆಯುತ್ತಿದೆ ಎಂದರು. ಮುಖ್ಯ ಅತಿಥಿ ಸ್ನೇಕ್ಶ್ಯಾಮ್ ಮಾತನಾಡಿ, ಮಕ್ಕಳಲ್ಲಿ ದೇಶಾಭಿಮಾನ ಮತ್ತು ತನ್ನ ಸುತ್ತಲಿನ ಪರಿಸರ ಅಭಿಮಾನ ಬೆಳೆಯಬೇಕು. ಇಲ್ಲವಾದಲ್ಲಿ ಮಾನವ ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಮಕ್ಕಳು ಸಹಜವಾಗಿ ಕಲಿಯಲು ಶಿಕ್ಷಕರು ಹಾಗೂ ಪೋಷಕರು ನೆರವಾಗಬೇಕು ಎಂದು ತಿಳಿಸಿದರು.

ಏಕತಾ ಪ್ರತಿಮೆ ನಿರ್ಮಾಣಕ್ಕೆ ಲೋಹ ಸಂಗ್ರಹ
ಟಿ. ನರಸೀಪುರ: ದೇಶದ ಸಮಸ್ತ ರೈತರು ನೀಡುವ ಲೋಹದಿಂದಲೇ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರ ಬೃಹತ್ ಪ್ರತಿಮೆ ಗುಜರಾತ್ನಲ್ಲಿ ನಿರ್ಮಾಣವಾಗಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಹೇಳಿದರು. ತಾಲೂಕಿನ ಆಲಗೂಡು ಗ್ರಾಮದಲ್ಲಿ ಶನಿವಾರ ಲೋಹ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರ್ಮದಾ ನದಿ ದಂಡೆಯಲ್ಲಿ ವಿಶ್ವದ ಬೃಹತ್ ಪ್ರತಿಮೆಯನ್ನು ನಿರ್ಮಿಸುವ ಮೂಲಕ ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲರ ರಾಜಕೀಯ ಜೀವನ ಚರಿತ್ರೆ ಜಗತ್ತಿಗೆ ಅನಾವರಣಗೊಳ್ಳಲಿದೆ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟದಪ್ಪ ಬಸವರಾಜು,ಕರೋಹಟ್ಟಿ ಬಸವರಾಜು, ಮಂಜುನಾಥ್, ಮುಖಂಡರಾದ ಎಂ. ವೆಂಕಟರಮಣಶೆಟ್ಟಿ, ಎ.ಎನ್. ರಂಗುನಾಯ್ಕ, ಕುಮಾರ, ರಾಮದಾಸ್, ಸಿದ್ದಪ್ಪ ಇದ್ದರು.

ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು: ರಾಮಕೃಷ್ಣಪ್ಪ
ಟಿ. ನರಸೀಪುರ: ತಾಲೂಕಿನಲ್ಲಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಭೋವಿ ಸಮುದಾಯದ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಶ್ರಮಿಸಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ. ರಾಮಕೃಷ್ಣಪ್ಪ ಹೇಳಿದರು. ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಶಿವಯೋಗಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಯುವ ಮುಖಂಡ ಸುನಿಲ್ ಬೋಸ್ ಮಾತನಾಡಿಕರು. ಮಾಜಿ ಶಾಸಕ ಎಸ್. ಕೃಷ್ಣಪ್ಪ, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಸದಸ್ಯ ಕೊಡಗಹಳ್ಳಿ ರಾಮಕೃಷ್ಣ, ಎಪಿಎಂಸಿ ಅಧ್ಯಕ್ಷ ಕಗ್ಗಲೀಪುರ ಎಂ.ರಾಜು, ಮುಖಂಡರಾದ ಹೊನ್ನನಾಯ್ಕ, ಟಿ.ಎಚ್. ಮಂಜುನಾಥ್, ಧನಂಜಯಕುಮಾರ್, ಎ.ಎನ್. ಸ್ವಾಮಿ, ಪುಮುನಾವರ ಪಾಷ, ರವೀಂದ್ರಕುಮಾರ, ಮಹದೇವಮ್ಮದೊಳ್ಳಯ್ಯ, ತಿಮ್ಮಮ್ಮ, ರಂಗಯ್ಯ, ಪ್ರೇಮಕುಮಾರ್ ಇದ್ದರು.

ತಾಯಿ, ಮಗು ಮರಣ ತಪ್ಪಿಸಲು ಅಭಿಯಾನ
ಹುಣಸೂರು: ತಾಯಿ-ಮಗು ಮರಣ ಪ್ರಮಾಣ ತಪ್ಪಿಸಲು ಸರ್ತಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು ಮುಖ್ಯ ಗುರಿಯನ್ನಾಗಿಸಿಕೊಂಡಿದೆ ಎಂದು ತಾಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ವಿ.ಪಿ. ಬೋರೆಯ ಅಂಗನವಾಡಿ ಕೇಂದ್ರದಲ್ಲಿ ತಾಯಿ ಮತ್ತು ಮಗು ಮರಣ ಕುರಿತು ಆರೋಗ್ಯ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಒಂದು ಲಕ್ಷ ಜನನಗಳಿಗೆ 179 ತಾಯಂದಿರು ಮರಣ ಹೊಂದುತ್ತಿದ್ದು, 100ಕ್ಕೆ ಇಳಿಸುವ ಹಾಗೂ ಸಾವಿರ ಜನನಗಳಿಗೆ 42 ಶಿಶುಗಳು ಮರಣ ಹೊಂದುತ್ತಿವೆ. ಇದನ್ನು 30ಕ್ಕೆ ಇಳಿಸುವ ಉದ್ದೇಶ ಇದೆ ಎಂದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಂತಿ, ಸಹಾಯಕ ಅರಳಪ್ಪ, ಪುರಸಭಾ ಸದಸ್ಯೆ ಪಹಿಮುನ್ನಿಸ್ಸಾ, ಶಿವಪ್ಪ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಭಾಗವಹಿಸಿದ್ದರು.

ಅರಣ್ಯ ಉಳಿಸಲು ಎಲ್ಲರೂ ಮುಂದಾಗಿ: ಜಿಟಿಡಿ
ಮೈಸೂರು: ಅರಣ್ಯ ನಾಶವಾಗುತ್ತಿರುವ ಈ ಸಂದರ್ಭದಲ್ಲೇ ನಮ್ಮ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿಯುತ್ತಿದ್ದೇವೆ. ಇದರಿಂದ ಮಳೆ ಇಲ್ಲದೆ ಕುಡಿಯಲು ನೀರು ಸಹ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯವನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ಎಲ್ಲರೂ ತೊಡಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಅಭಿಪ್ರಾಯಪಟ್ಟರು. ಜಯಪುರ ಹೋಬಳಿ ಮಾದಹಳ್ಳಿಯಲ್ಲಿ ಏರ್ಪಡಿಸಿದ್ದ ಗ್ರಾಮ ಅರಣ್ಯ ಸಂರಕ್ಷಣ ಸಮಿತಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಗ್ರಾಮ ಅರಣ್ಯ ಸಮಿತಿಗಳ ಸದಸ್ಯರಿಗೆ ಸರಳ ಒಲೆ ಹಾಗೂ ಅನಿಲ ಸಂಪರ್ಕ ವಿತರಿಸಿ ಮಾತನಾಡಿದರು. ನಂತರ ಮಾದಹಳ್ಳಿ ಗ್ರಾಮದಲ್ಲಿ ಸುಮಾರು 4.5 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ಕುಮಾರ ಬೀಡು ಗ್ರಾಮದಲ್ಲಿ ಟಿಎಸ್ಪಿಯಡಿ 9 ಲಕ್ಷ ವೆಚ್ಚದಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕುಡಿಯುವ ನೀರು ಕೊಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು: ತಾಲೂಕಿನ ಇಲವಾಲ ಗ್ರಾಮದಲ್ಲಿರುವ ಕಲಾಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಕೊಡಲು ಆಗ್ರಹಿಸಿ ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣ ವೇದಿಕೆಯವರು ಹಾಗೂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಕಲಾಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕದಿಂದ ಪಿಯುಸಿವರೆಗೆ 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಸಂಸ್ಥೆಗೆ ಇಲವಾಲ ಗ್ರಾಮ ಪಂಚಾಯಿತಿನವರು ನೀರು ಕೊಡುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಕುಡಿಯಲು ನೀರು ಕೊಡಿ ಅಥವಾ ವಿಷ ಕೊಡಿ ಎಂದು ಘೋಷಣೆ ಕೂಗಿದರು. ವೇದಿಕೆಯ ರಾಜ್ಯ ಸಂಚಾಲಕ ಹಂ. ಲಕ್ಕೇಗೌಡ, ಮುಖಂಡರಾದ ಬಿ.ಎಚ್. ಗೋವಿಂದೇಗೌಡ, ಮರಿದಂಡಯ್ಯ ಬುದ್ಧ ಇದ್ದರು.

ದೊಡ್ಡಬೇಲಾಳು ಗ್ರಾಪಂ ಉಪಾಧ್ಯಕ್ಷರ ಆಯ್ಕೆ
ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಪಂ ಉಪಾಧ್ಯಕ್ಷರಾಗಿ ಅಮೀರ್ ಮಹಮ್ಮದ್ ರಿಜ್ವಾನ್ ಅವಿರೋಧ ಆಯ್ಕೆಯಾದರು. ತಾಲೂಕಿನ ದೊಡ್ಡಬೇಲಾಳು ಗ್ರಾಪಂನಲ್ಲಿ 20 ಸದಸ್ಯರ ಪೈಕಿ 7 ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು 13 ಜೆಡಿಎಸ್ ಬೆಂಬಲಿತ ಸದಸ್ಯರಿದ್ದು, ಜೆಡಿಎಸ್ ಅಧಿಕಾರ ಹಿಡಿದಿದೆ. ಇವರಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸತೀಶ್ ತಮ್ಮ ಪಕ್ಷದ ಆಂತರಿಕ ಒಪ್ಪಂದದಂತೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರದಂದು ಚುನಾವಣೆ ನಡೆಯಿತು. ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಮೀರ್ ಮಹಮ್ಮದ್ ರಿಜ್ವಾನ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಇಇ ಮನೋಹರ್ ಘೋಷಿಸಿದರು. ಇದೇ ವೇಳೆ ಜಿಪಂ ಸದಸ್ಯ ಎಸ್.ಎ. ಶಿವಣ್ಣ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಇತರರಿದ್ದರು.

ಮಾಸಾಶನ ಪಡೆಯಲು ಮಧ್ಯವರ್ತಿಗಳ ಸಹಾಯ ಬೇಡ
ಭೇರ್ಯ: ಮಾಸಾಶನ ಪಡೆಯಲು ಮಧ್ಯವರ್ತಿಗಳ ಮುಖಾಂತರ ಯಾವುದೇ ಕಾರಣಕ್ಕೂ ಅರ್ಜಿ ನೀಡಬೇಡಿ ಎಂದು ಹೊಸಅಗ್ರಹಾರ ಹೋಬಳಿಯ ಉಪತಹಸೀಲ್ದಾರ್ ಯಧುಗಿರೀಶ್ ಹೇಳಿದರು. ಹೊಸಅಗ್ರಹಾರ ಹೋಬಳಿಯ ಗಂಧನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾಸಾಶನದ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಮಾಸಾಶನಕ್ಕಾಗಿ ಹೋಬಳಿಯಲ್ಲಿರುವ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ ಎಂದ ಅವರು, ವೃದ್ಧಾಪ್ಯ ಮತ್ತು ಸಂಧ್ಯಾ ಸುರಕ್ಷಾ ವೇತನ ಪಡೆಯಲು 65 ವರ್ಷ ಕಡ್ಡಾಯವಾಗಿರಬೇಕು ಎಂದು ತಿಳಿಸಿದರು. ಪಿಂಚಣಿ ಅದಾಲತ್ನಲ್ಲಿ ಸಂಧ್ಯಾಸುರಕ್ಷಾ- 18, ವೃದ್ಧಾಪ್ಯ- 4, ಮನಸ್ವಿನಿ- 3, ಅಂಗವಿಕಲರು- 2 ಸ್ಥಳದಲ್ಲಿ ಪ್ರಮಾಣ ಪತ್ರ ವಿತರಿಸಿದರು. ರಾಜಸ್ವನಿರೀಕ್ಷಕ ಜಯಪ್ಪ, ಗ್ರಾಮಲೆಕ್ಕಿಗ ರಾಮೇಗೌಡ, ಪಿಡಿಓ ಶಿವಣ್ಣ, ಬಲರಾಮ, ಜಿ.ಎನ್, ಶ್ರೀನಿವಾಸ್ ಇದ್ದರು.

ಅಡಕನಹಳ್ಳಿಹುಂಡಿ:ಆಯುರ್ವೇದಿಕ್ ವಸ್ತು ಪ್ರದರ್ಶನ
ನಂಜನಗೂಡು: ನಂಜನಗೂಡು ತಾಲೂಕು ಅಡಕನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಪಗಂಧಿ ಆಯುರ್ವೇದಿಕ್ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ವಸ್ತು ಪ್ರದರ್ಶನ ಉದ್ಘಾಟಿಸಿದ ಗ್ರಾಪಂ ಸದಸ್ಯ ಬಿ. ಶಿವಣ್ಣ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಆಯುರ್ವೇದ ಹೆಚ್ಚು ತಿಳಿದುಕೊಂಡು ಅದರ ಉಪಯೋಗ ಪಡೆಯುವಂತೆ ತಿಳಿಸಿದರು. ಗ್ರಾಪಂ ಸದಸ್ಯ ಸ್ವಾಮಿ, ಮುಖ್ಯ ಶಿಕ್ಷಕಿ ಲತಾ, ಶಿಕ್ಷಕರಾದ ಶರಾವತಿ, ಪೂರ್ಣಿಮಾ, ಎಸ್ಡಿಎಂಸಿ ಸದಸ್ಯ ಮಾದಪ್ಪ ಇದ್ದರು.

ವರುಣದಲ್ಲಿ ಒಂದೂವರೆ ಕೋಟಿ ರು. ಕಾಮಗಾರಿಗೆ ಚಾಲನೆ
ಸುತ್ತೂರು: ವರುಣ ಕ್ಷೇತ್ರದಲ್ಲಿ ಒಂದೂವರೆ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಂಸದ ಆರ್. ಧ್ರುವನಾರಾಯಣ್ ಚಾಲನೆ ನೀಡಿದರು. ತಾಲೂಕಿನ ವರುಣ, ವಾಜಮಂಗಲ, ಕಾಲೋನಿ, ಕುಪ್ಪೇಗಾಲ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಲು ಅವಕಾಶ ಮಾಡಿಕೊಟ್ಟ ವರುಣ ಕ್ಷೇತ್ರದ ಮತದಾರರನ್ನು ಅಭಿನಂದಿಸುತ್ತೇನೆ. ಟಿ. ನರಸೀಪುರ- ಮೈಸೂರು ರಸ್ತೆ ಅಭಿವೃದ್ಧಿಗೆ 76 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು. ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿದರು. ಜಿಪಂ ಸದಸ್ಯ ಎಂ.ಬಿ. ಸಿದ್ದೇಗೌಡ, ಕೆಂಪೀರಯ್ಯ, ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಮುಖಂಡರಾದ ವರುಣ ಮಹೇಶ್, ಶ್ರೀಧರ್, ಬೀರೇಗೌಡ, ಮುದ್ದೇಗೌಡ, ರಮೇಶ್, ಚಿಕ್ಕಳ್ಳಿ ಕೃಷ್ಣ, ಮಹೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement