ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

20 ನಿಮಿಷ 20 ಸುದ್ದಿ

Srinivasa Murthy VN
Updated On : 15 Feb 2014, 10:27 am

ಮೈಸೂರು: ರಾಮ್ಸನ್ಸ್ ಕಲಾ ಪ್ರತಿಷ್ಠಾನವು ಕಲಾಧಾರಾ ಹೆಸರಿನಲ್ಲಿ ಫೆ.16ರಿಂದ ಮೇ 4ರವರೆಗೆ ಸಮಕಾಲೀನ ಚಿತ್ರಕಲೆಯ ಬೃಹತ್ ಪ್ರದರ್ಶನವನ್ನು ನಜರ್ಬಾದ್ನ ಪ್ರತಿಮಾ ಗ್ಯಾಲರಿಯಲ್ಲಿ ಆಯೋಜಿಸಿದೆ. ಫೆ. 16ರ ಮಧ್ಯಾಹ್ನ 12ಕ್ಕೆ ಸಿಐಐ ಮೈಸೂರು ವಲಯ ಅಧ್ಯಕ್ಷ ಎಸ್.ನಾಗರಾಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ ಮುಖ್ಯ ಅತಿಥಿಯಾಗಿರುವರು. ಮಾರ್ಚ್ನ ಪ್ರತಿ ಭಾನುವಾರ ವಿವಿಧ ಸಂಗೀತ ಕಾರ್ಯಕ್ರಮ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಪ್ರತಿ ಉಪನ್ಯಾಸದ ಜೊತೆಗೆ ಪ್ರದರ್ಶನಕ್ಕೆ 15 ಹೊಸ ಕಲಾವಿದರ ಕಲಾಕೃತಿಗಳು ಸೇರ್ಪಡೆ ಆಗಲಿದೆ. ಜಲವರ್ಣ, ತೈಲವರ್ಣ, ಅಕ್ರೆಲಿಕ್ ಕ್ಯಾನ್ವಾಸ್, ಸಾಂಪ್ರದಾಯಿಕ ಚಿತ್ರಪಟ, ಮೈಸೂರು ಶೈಲಿ, ಸುರಪುರ ಶೈಲಿ, ನಿಸರ್ಗಚಿತ್ರ, ನವ್ಯಕಲೆ, ಆಬ್ಸ್ಟ್ಯಾಕ್ಟ್ ಚಿತ್ರ, ಹೀಗೆ ಹಲವು ಶೈಲಿಯ 150ಕ್ಕೂ ಹೆಚ್ಚು ವಿಶೇಷ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಇಂದು ಗ್ರಾಜ್ಯುಯೇಟ್ಸ್ ಬ್ಯಾಂಕ್ ನಿರ್ದೇಶಕರ ಚುನಾವಣೆ
ಮೈಸೂರು: ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ದಿ ಗ್ರಾಜ್ಯುಯೇಟ್ಸ್ ಕೋ- ಆಪರೇಟಿವ್ ಬ್ಯಾಂಕ್ನ ನಿರ್ದೇಶಕರ ಚುನಾವಣೆಯು ಫೆ.16ರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಜೆಎಲ್ಬಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ 11 ಅಭ್ಯರ್ಥಿಗಳನ್ನು ನಿರ್ದೇಶಕರಾಗಿ ಆಯ್ಕೆ ಮಾಡಬೇಕಾಗಿದ್ದು, 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಬ್ಯಾಂಕಿನ ಹಾಲಿ ಅಧ್ಯಕ್ಷ ಎನ್.ಶ್ರೀನಿವಾಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಚುನಾವಣೆಗೆ ಸ್ಪರ್ಧಿಸಿರುವ ನನ್ನನ್ನು ಸೇರಿದಂತೆ ಆರ್.ಅನಂತರಾಮು, ಸಿ. ಕಮಲಮ್ಮ, ಎಸ್.ಎನ್. ಜಗದೀಶ್, ಡಾ.ಎಂ. ದೇಜಮ್ಮ, ಪ್ರೊ.ಪಿ.ವಿ. ನರಹರಿ, ಟಿ.ಎಸ್. ರವಿಶಂಕರ್, ಡಾ.ಕೆ.ವಿ. ಲಕ್ಷ್ಮಿದೇವಿ, ಕೆ.ಜಿ. ಸತೀಶ್, ಸುಜಾತಾ ವೆಂಕಟರಾಜು ಮತ್ತು ಎಂ.ಎ. ಹೇಮಲತಾ ಅವರಿಗೆ ಸದಸ್ಯರು ಮತ ನೀಡಬೇಕು ಎಂದು ಅವರು ಕೋರಿದರು. ಬ್ಯಾಂಕಿನ ಹಾಲಿ ಉಪಾಧ್ಯಕ್ಷ ಕೆ.ಜಿ. ಸತೀಶ್, ಹಾಲಿ ನಿರ್ದೇಶಕರಾದ ಡಾ.ಎಂ. ದೇಜಮ್ಮ, ಪ್ರೊ.ಪಿ.ವಿ. ನರಹರಿ ಇದ್ದರು.

ಒಕ್ಕಲಿಗರಿಗೆ ದೇವೇಗೌಡರಕೊಡುಗೆ ಏನು?
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ಮತ್ತು ಕುರುಬರರಿಗೆ ಏನು ಮಾಡಿದ್ದಾರೆ ಎನ್ನುವ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಾವೇ ಒಕ್ಕಲಿಗರಿಗೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ತಿಳಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎಚ್.ಸಿ. ಕೃಷ್ಣಕುಮಾರ್ ಸಾಗರ್ ಪ್ರಶ್ನಿಸಿದ್ದಾರೆ. ಮೂವತ್ತು ವರ್ಷ ಜೆಡಿಎಸ್ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದು ದೇವೇಗೌಡರನ್ನು ಮುಖ್ಯಮಂತ್ರಿ, ಪ್ರಧಾನಿಯಾಗಲು ಸಹಕರಿಸಿದ ಎಲ್ಲ ಮುಖಂಡರು ಪಕ್ಷ ಬಿಟ್ಟು ಹೋದರು. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಜತೆಯಲ್ಲಿದ್ದರು. ಅಂತಹವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸಿ, ಪಕ್ಷದಿಂದ ಉಚ್ಚಾಟಿಸಿದಿರಿ. ಅವರಲ್ಲದೆ ಒಕ್ಕಲಿಗರಾದ ಬೈರೇಗೌಡ, ಬಚ್ಚೇಗೌಡ, ನಾಗೇಗೌಡ, ವೈ.ಕೆ. ರಾಮಯ್ಯ, ಬಿ.ಎಲ್. ಶಂಕರ್ ಅವರಂತಹ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ದೇವೇಗೌಡರು ಮಗನನ್ನು ಮುಖ್ಯಮಂತ್ರಿ ಮಾಡಿದರು. ಈಗ ಸಿದ್ದರಾಮಯ್ಯ ವಿರುದ್ಧ ಜಾತಿ ಎತ್ತಿ ಕಟ್ಟುತ್ತಿದ್ದಾರೆ ಎಂದು ದೂರಿದರು.

ಸಂಸ್ಥಾಪಕರ ದಿನಾಚರಣೆ...
ಮತ್ತೂಟ್ ಫೈನಾನ್ಸ್ ಗಂಗೋತ್ರಿ ಲೇಔಟ್ ಶಾಖೆಯಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು. ರಂಗಕರ್ಮಿ ಶ್ರೀಕಂಠ ಗುಂಡಪ್ಪ, ಎಚ್.ಎಸ್. ಜ್ಯೋತಿ, ಆರ್. ನಾಗರಾಜು ಇದ್ದರು.

18 ರಂದು ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಮೈಸೂರು: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರೆಯ ಮೇರೆಗೆ ಫೆ.18 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಅಂದು ದೇಶಾದ್ಯಂತ ಇರುವ 2.7 ಲಕ್ಷ ಗ್ರಾಮೀಣ ಅಂಚೆ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳುವರು. ಗ್ರಾಮೀಣ ಅಂಚೆ ನೌಕರರಿಗೆ ಇಲಾಖೇತರರು ಎಂಬ ಹಣೆಪಟ್ಟಿಯನ್ನು ತೊಲಗಿಸಿ ಕೇಂದ್ರ ಸರ್ಕಾರಿ ನೌಕರರ ಸ್ಥಾನಮಾನ ನೀಡುವುದು, ಕೇಂದ್ರ ಸರ್ಕಾರ ನೇಮಿಸಿರುವ 7ನೇ ವೇತನ ಆಯೋಗದಲ್ಲಿ ಗ್ರಾಮೀಣ ಅಂಚೆ ನೌಕರರನ್ನು ಸೇರಿಸಿಕೊಂಡು ವೇತನ ಪರಾಮರ್ಶೆ ಮಾಡುವುದು, ಮೃತರಾದ ಅಂಚೆ ನೌಕರರ ಕುಟುಂಬಕ್ಕೆ ಅನುಕಂಪ ಆಧಾರಿತ ನೌಕರಿಯನ್ನು ಕಡ್ಡಾಯವಾಗಿ ನೀಡುವುದು, ಅಂಚೆ ಪೇದೆ, ಶೇ.50 ರಷ್ಟು ತುಟ್ಟಿ ಭತ್ಯೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರು ಮುಷ್ಕರ ನಡೆಸಲಿದ್ದಾರೆ. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಎಚ್.ಡಿ. ಕೋಟೆ, ಮೈಸೂರು ಭಾಗದ ಎಲ್ಲ ಗ್ರಾಮೀಣ ನೌಕರರು ಮುಷ್ಕರದಲ್ಲಿ ಭಾಗವಹಿಸುವಂತೆ ಪದಾಧಿಕಾರಿಗಳು ಕೋರಿದ್ದಾರೆ.

ರೇಷ್ಮೆ, ಕೋಳಿ ಸಾಕಣೆ ರೈತರಿಗೆ ಸಲಹೆ ಸೂಚನೆ
ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರ ಸಲಹೆ- ಸೂಚನೆ ನೀಡಿದ್ದಾರೆ. ಜಾನುವಾರು ಮತ್ತು ರೇಷ್ಮೆ, ಕೋಳಿ ಸಾಕಣೆ ಮಾಡುತ್ತಿರುವವರು ಸಾಕಣೆ ಕೊಠಡಿ ಉಷ್ಣಾಂಶದ ಸ್ಥಿರತೆ ಕಾಪಾಡಿಕೊಳ್ಳುವುದು. ಕರುಗಳಿಗೆ ಜಂತುನಾಶಕ ಔಷಧವನ್ನು ಪಶು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಡಿಸಬೇಕು. ಟೊಮೆಟೋ, ಮೆಣಸಿನಕಾಯಿ, ದೊಡ್ಡಮೆಣಸಿನಕಾಯಿ ಹೂ ಬಿಡುವ ಹಂತದಲ್ಲಿ ಸೊರಗು ರೋಗ ತಗುಲಿದ್ದರೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 500 ಮಿಲಿ ಗ್ರಾಂ ಸ್ಟ್ರೆಪ್ಟೊಮೈಸಿನ್ ಸಲ್ಫೇಟ್ ಔಷಧವನ್ನು 1 ಲೀಟರ್ ನೀರಲ್ಲಿ ಬೆರೆಸಿ ಸಿಂಪಡಿಸಬೇಕು. ಮಾವು ಬೆಳೆಗೆ ಜಿಗಿಹುಳು, ಬೂದಿ ರೋಗ ತಗುಲಿದ್ದರೆ 1.5 ಮಿ.ಲಿ. ರೋಗರ್ ಜತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವಂತೆ ತಿಳಿಸಿದ್ದಾರೆ. ದೂ.0821- 2591267.

ರಸ್ತೆ ಸುರಕ್ಷತೆಗಾಗಿಜಾಗೃತಿ ಜಾಥಾ
ಮೈಸೂರು: ಭಾರತೀಯ ಕಲಾ ವೇದಿಕೆ, ನಗರ ಸಂಚಾರ ಪೊಲೀಸ್ ಮತ್ತು ವಿಜಯನಗರ ರೋಟರಿ ಕ್ಲಬ್ ಸಂಯುಕ್ತವಾಗಿ ಫೆ.18ರ ಬೆಳಗ್ಗೆ 10ಕ್ಕೆ ರಸ್ತೆ ಸಂಚಾರ ನಿಯಮ ಪಾಲನೆ ಹಾಗೂ ಸುರಕ್ಷಿತ ಚಾಲನೆಗಾಗಿ ಜಾಗೃತಿ ಜಾಥಾ ಆಯೋಜಿಸಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರು ಈ ಜಾಥಾಗೆ ಚಾಲನೆ ನೀಡುವರು ಎಂದು ಭಾರತೀಯ ಕಲಾ ವೇದಿಕೆಯ ರಾಜ್ಯಾಧ್ಯಕ್ಷ ಆರ್.ಎಂ. ಮಧು ದೀಕ್ಷಿತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಾಥಾವು ಗಾಂಧಿ ಚೌಕ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಳ್ಳಲಿದೆ. ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರು ನೂರಾರು ಮಂದಿ ಭಾಗವಹಿಸಲಿದ್ದಾರೆ ಎಂದರು. ಉಪಾಧ್ಯಕ್ಷ ನಂಜುಂಡ ಆರಾಧ್ಯ, ಜಿಲ್ಲಾಧ್ಯಕ್ಷ ರಾಜು, ಖಜಾಂಚಿ ಹರೀಶ್, ವಿಜಯನಗರ ರೋಟರಿ ಕ್ಲಬ್ ಅಧ್ಯಕ್ಷ ಡಾ.ದಿಲೀಪ್ ಇದ್ದರು.

ಕೆಆರ್ಎಂಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ
ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರಿಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಕರ್ನಾಟಕ ವೀರಶೈವ ಲಿಂಗಾಯತ ಹಿತರಕ್ಷಣಾ ಯುವ ವೇದಿಕೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಸರಳ- ಸಜ್ಜನಿಕೆಯ, ಉತ್ತಮ ರಾಜಕೀಯ ಚಾರಿತ್ರ್ಯವುಳ್ಳ ಮಲ್ಲಿಕಾರ್ಜುನಪ್ಪ ಅವರಿಗೆ ಟಿಕೆಟ್ ನೀಡಿದರೆ ಈ ಭಾಗದ ಪ್ರತಿಷ್ಠಿತ ಶಕ್ತಿಯಾಗಿರುವ ವೀರಶೈವ ಜನಾಂಗದವರಿಗೆ ಒಂದು ಗೌರವ ಸಲ್ಲಿಸಿದಂತಾಗುತ್ತದೆ. ಕೆಆರ್ಎಂ ಜಂಗಲ್ ರೆಸಾರ್ಟ್ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸಮಾಜ ಮೆಚ್ಚುವಂತ ಸೇವೆ ಮಾಡಿಕೊಂಡು ಬಂದಿದ್ದಾರೆ. ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಇವರು ಮಾಡಿದ ಸೇವೆಯನ್ನು ವರಿಷ್ಠರೆ ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ಈ ಬಾರಿ ಟಿಕೆಟ್ ನೀಡುವಂತೆ ವೇದಿಕೆಯ ಅಧ್ಯಕ್ಷ ಎಲ್. ರುದ್ರಮೂರ್ತಿ ಆಗ್ರಹಿಸಿದ್ದಾರೆ.

ಎಟಿಎಂಗಳಲ್ಲಿ ಸೌರಶಕ್ತಿ ಬಳಸಲು ಸಲಹೆ
ಮೈಸೂರು: ಎಟಿಎಂಗಳಲ್ಲಿ ಸೌರಶಕ್ತಿ ಬಳಸಲು ಬ್ಯಾಂಕ್ಗಳು ಮುಂದಾಗಬೇಕು ಎಂದು ನೇಚರ್ ವಾಟ್ಸ್ ಕಂಪನಿಯ ಸಂಸ್ಥಾಪಕ ಎಸ್. ರಘು ಸಲಹೆ ನೀಡಿದರು. ಎಟಿಎಂಗಳಲ್ಲಿ 24 ಗಂಟೆ ವಿದ್ಯುತ್ ಬಳಕೆ ಬದಲು ಸೌರಶಕ್ತಿ ಬಳಸಿದರೆ ಸಾಕಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಎಟಿಎಂ ಕೇಂದ್ರಗಳಿಗೆ ವಿದ್ಯುತ್ ಅಳವಡಿಸುವ ಸಾಧನಗಳು ತಮ್ಮ ಬಳಿ ದೊರೆಯುತ್ತವೆ. ಇದಕ್ಕೆ 3.50 ಲಕ್ಷ ವೆಚ್ಚವಾಗುತ್ತದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ವಿಭಜಕಗಳಲ್ಲಿ ಕಂಬಗಳನ್ನು ಅಳವಡಿಸಿ ಸೌರಶಕ್ತಿ ಉತ್ಪಾದಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಇದು ಕಾರ್ಯಗತವಾದರೆ ಪ್ರತಿ 100 ಕಿ.ಮೀ. ಹೆದ್ದಾರಿಯಲ್ಲಿ 4 ರಿಂದ 5 ಮೆಗಾ ವ್ಯಾಟ್ ವಿದ್ಯುತ್ ಪ್ರತಿದಿನ ಉತ್ಪಾದಿಸಬಹುದು. ಇದಕ್ಕೆ 7.50 ಕೋಟಿ ವೆಚ್ಚವಾಗುತ್ತದೆ ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ. 98441 64419, 90192 53390 ಸಂಪರ್ಕಿಸಿ.

ಉದ್ಘಾಟನೆ...
ಮೈಸೂರಿನ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಉದ್ಘಾಟಿಸಿದರು. ಪ್ರೊ.ಕೆ.ವಿ. ದಾಮೋದರಗೌಡ, ಪ್ರೊ.ಎಂ.ವಿ. ಆಶಾ ಇದ್ದಾರೆ.

ಅಪ್ರವರಂಬೆ 6ನೇ ರಂಗಸಂಭ್ರಮ, ನಾಟಕೋತ್ಸವ
ಮೈಸೂರು: ಅಪ್ರವರಂಬೆ (ಅಭಿನಯ, ಪ್ರಸಾಧನ, ವಸ್ತ್ರಾಲಂಕಾರ, ರಂಗಸಜ್ಜಿಕೆ, ಬೆಳಕು) ಸಂಸ್ಥೆಯು ರಂಗಸಂಭ್ರಮ- ಆರು ಎಂಬ ನಾಟಕೋತ್ಸವವನ್ನು ಫೆ.18, 21 ಮತ್ತು 22 ರಂದು ರಂಗಾಯಣದ ವನರಂಗದಲ್ಲಿ ಆಯೋಜಿಸಿದೆ. ಫೆ.18ರ ಸಂಜೆ 6.15ಕ್ಕೆ ಡಾ.ವಿಷ್ಣುವರ್ಧನ್ ನೆನಪು ಕಾರ್ಯಕ್ರಮವನ್ನು ಸಮಾಜವಾದಿ ಪ.ಮಲ್ಲೇಶ್ ಉದ್ಘಾಟಿಸುವರು. ರಂಗಸಂಭ್ರಮ ಆರು ಸಂಚಿಕೆಯನ್ನು ರಂಗಾಯಣ ನಿರ್ದೇಶಕ  ಎಚ್. ಜನಾರ್ದನ್  ಬಿಡುಗಡೆಗೊಳಿಸುವರು. ನಂತರ ಶ್ರೀಕಾಂತರ ಕಥೆ ಕೀಚಕರು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅಪ್ರವರಂಬೆ ಸಂಸ್ಥೆ ಅಧ್ಯಕ್ಷ ಎಚ್.ವಿ. ರಾಜೀವ್, ಕಾರ್ಯದರ್ಶಿ ನಾ. ನಾಗಚಂದ್ರ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫೆ.21ರ ಸಂಜೆ 6.15ಕ್ಕೆ ಹಾಸ್ಯ ರತ್ನಾಕರ ನೆನಪು ಕಾರ್ಯಕ್ರಮವನ್ನು ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸುವರು. ಫೆ.22ರ ಸಂಜೆ 6.15ಕ್ಕೆ ಡಾ. ಚಂದ್ರಶೇಖರ ಕಂಬಾರರ ಹುಲಿಯ ನೆರಳು ನಾಟಕ ಪ್ರದರ್ಶನ (ನಿರ್ದೇಶನ- ಡಾ.ನ. ರತ್ನ) ಏರ್ಪಡಿಸಲಾಗಿದೆ.

ಮೈಗ್ರಾಪ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆ ವಜಾ
ಮೈಸೂರು: ಇತ್ತೀಚಿನ ಒಂದು ತೀರ್ಪಿಗೆ ಸಂಬಂಧಪಟ್ಟಂತೆ ಮೈಸೂರು ಗ್ರಾಹಕರ ಪರಿಷತ್ತಿನ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮೈಸೂರು ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಯು ವಜಾ ಮಾಡಿದೆ. ನಗರದ ನಿವಾಸಿಯೊಬ್ಬರು ಮಾಹಿತಿ ಕೋರಿ ಡಿಡಿಪಿಐಗೆ ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ, ಡಿಡಿಪಿಐ ನಿಗದಿತ ಸಮಯದೊಳಗೆ ಮಾಹಿತಿ ನೀಡದ್ದರಿಂದ ದೂರುದಾರರು ತಾವು 10 ಖರ್ಚು ಮಾಡಿ ಅರ್ಜಿ ಸಲ್ಲಿಸಿದ್ದೇವೆ. ಹಾಗಾಗಿ ತಾನೂ ಗ್ರಾಹಕನಾಗಿದ್ದು, ಡಿಡಿಪಿಐ ಮಾಹಿತಿ ಕೊಡದಿರುವುದು ಗ್ರಾಹಕ ಅಧಿನಿಯಮದ ಕೆಳಗೆ ಸೇವಾ ನ್ಯೂನ್ಯತೆಯಾಗಿದೆ ಎಂದು ಆಪಾದಿಸಿ ಮೈಗ್ರಾಪಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ನಡೆಸಿದ್ದ ಮೈಗ್ರಾಪ ಡಿಡಿಪಿಐಗೆ 6000 ದಂಡ ವಿಧಿಸಿತ್ತು. ಈ ಬಗ್ಗೆ ತನ್ನ ಮಾಸ ಪತ್ರಿಕೆಯಾದ ಗ್ರಾಹಕ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ತೀರ್ಪು, ವರದಿಯನ್ನು ಆಧಾರವಾಗಿಟ್ಟುಕೊಂಡು ಡಾ.ಎಸ್.ಪಿ. ತಿರುಮಲರಾವ್ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಗೆ ಮೈಗ್ರಾಪ ವಿರುದ್ಧ ದೂರು ಸಲ್ಲಿಸಿ ನ್ಯಾಯಾಂಗ ನಿಂದನೆ ಆಪಾದನೆ ಹೊರಿಸಿದ್ದರು.

ಕೆಲಸದವನೊಂದಿಗೆ ಮಹಿಳೆ ನಾಪತ್ತೆ
ಮೈಸೂರು: ಮಂಡಿ ಠಾಣೆ ವ್ಯಾಪ್ತಿಯ ನಿವಾಸಿ ಸೈಯದ್ ಮುಜಾಯಿದ್ ಎಂಬವರ ಪತ್ನಿ ವಶೀಂ ಶಬ್ಬೀನ್ (33) ಮಂಗಳವಾರದಿಂದ ನಾಪತ್ತೆಯಾಗಿದ್ದಾರೆ. ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುವ ಹಬೀಬ್ ಎಂಬಾತನೊಂದಿಗೆ ವಶೀಂ ಶಬ್ಬೀನ್ ಅಶೋಕ ರಸ್ತೆಗೆ ಚಿನ್ನ ಖರೀದಿಸಲು ಹೋದವರು ಕಾಣೆಯಾಗಿದ್ದಾರೆ.ಚಹರೆ- 5.2 ಅಡಿ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಶರೀರ, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418313, 513 ಸಂಪರ್ಕಿಸಲು ಮಂಡಿ ಠಾಣೆಯ ಎಎಸ್ಐ ಕೆ. ಪಟ್ಟಾಭಿರಾಮ್ ಕೋರಿದ್ದಾರೆ. ವಾರಸುದಾರರ ಪತ್ತೆಗೆ ಮನವಿ: ಮಂಡಿ ಠಾಣೆ ಪೊಲೀಸರು ಆರೋಪಿಯೊಬ್ಬನಿಂದ ಕಪ್ಪು ಬಣ್ಣದ ಸುಜುಕಿ ಸಮುರಾಯ್ ಮತ್ತು ಸಿಲ್ವರ್ ಬಣ್ಣಯ ಯಮಹ ಆರ್ಎಕ್ಸ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಬೈಕ್ಗಳ ವಾರಸುದಾರರು ಪತ್ತೆಯಾಗಿಲ್ಲ.

ಅರಣ್ಯ ಉಳಿಸಲು ಎಲ್ಲರೂ ಮುಂದಾಗಿ: ಜಿಟಿಡಿ
ಮೈಸೂರು: ಅರಣ್ಯ ನಾಶವಾಗುತ್ತಿರುವ ಈ ಸಂದರ್ಭದಲ್ಲೇ ನಮ್ಮ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿಯುತ್ತಿದ್ದೇವೆ. ಇದರಿಂದ ಮಳೆ ಇಲ್ಲದೆ ಕುಡಿಯಲು ನೀರು ಸಹ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯವನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ಎಲ್ಲರೂ ತೊಡಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಅಭಿಪ್ರಾಯಪಟ್ಟರು. ಜಯಪುರ ಹೋಬಳಿ ಮಾದಹಳ್ಳಿಯಲ್ಲಿ ಏರ್ಪಡಿಸಿದ್ದ ಗ್ರಾಮ ಅರಣ್ಯ ಸಂರಕ್ಷಣ ಸಮಿತಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಗ್ರಾಮ ಅರಣ್ಯ ಸಮಿತಿಗಳ ಸದಸ್ಯರಿಗೆ ಸರಳ ಒಲೆ ಹಾಗೂ ಅನಿಲ ಸಂಪರ್ಕ ವಿತರಿಸಿ ಮಾತನಾಡಿದರು. ನಂತರ ಮಾದಹಳ್ಳಿ ಗ್ರಾಮದಲ್ಲಿ ಸುಮಾರು 4.5 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ಕುಮಾರ ಬೀಡು ಗ್ರಾಮದಲ್ಲಿ ಟಿಎಸ್ಪಿಯಡಿ 9 ಲಕ್ಷ ವೆಚ್ಚದಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕುಡಿಯುವ ನೀರು ಕೊಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು: ತಾಲೂಕಿನ ಇಲವಾಲ ಗ್ರಾಮದಲ್ಲಿರುವ ಕಲಾಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಕೊಡಲು ಆಗ್ರಹಿಸಿ ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣ ವೇದಿಕೆಯವರು ಹಾಗೂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಕಲಾಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕದಿಂದ ಪಿಯುಸಿವರೆಗೆ 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಸಂಸ್ಥೆಗೆ ಇಲವಾಲ ಗ್ರಾಮ ಪಂಚಾಯಿತಿನವರು ನೀರು ಕೊಡುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಕುಡಿಯಲು ನೀರು ಕೊಡಿ ಅಥವಾ ವಿಷ ಕೊಡಿ ಎಂದು ಘೋಷಣೆ ಕೂಗಿದರು. ವೇದಿಕೆಯ ರಾಜ್ಯ ಸಂಚಾಲಕ ಹಂ. ಲಕ್ಕೇಗೌಡ, ಮುಖಂಡರಾದ ಬಿ.ಎಚ್. ಗೋವಿಂದೇಗೌಡ, ಮರಿದಂಡಯ್ಯ ಬುದ್ಧ ಇದ್ದರು.

ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು: ರಾಜ್ಯದ ಸರ್ಕಾರಿ ಪದವಿ ಮತ್ತು ಪಿಯು ಕಾಲೇಜುಗಳಿಗೆ ಮೂಲ ಸೌಲಭ್ಯ ಒದಗಿಸಬೇಕು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರ ವೇತನವನ್ನು ಹೆಚ್ಚಿಸಿ, ಪ್ರತಿ ತಿಂಗಳು ವೇತನ ನೀಡಬೇಕು. ತಕ್ಷಣವೇ ಪಿಯುಸಿ ಮತ್ತು ಪದವಿ ಕಾಲೇಜುಗಳ ಖಾಲಿ ಇರುವ ಕಾಯಂ ಉಪನ್ಯಾಸಕರ ಹುದ್ದೆಗೆ ನೇಮಕಾತಿ ಮಾಡಬೇಕು. ಹೊಸ ವಿಶ್ವವಿದ್ಯಾಲಯಗಳಿಗೆ ಮೂಲ ಸೌಲಭ್ಯಕ್ಕಾಗಿ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರಾಕೇಶ್, ಮುಖಂಡರಾದ ಮಹದೇವಪ್ರಸಾದ್, ಮಂಜುನಾಥ್, ಚಂದನಕುಮಾರ್, ಆರ್. ಚಂದನ್ ಇದ್ದರು.

ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ನಗರ ಸಾರಿಗೆ ವಿಭಾಗದ ವತಿಯಿಂದ ತಾಂತ್ರಿಕ ಮತ್ತು ಇತರೆ ವೃತ್ತಿಯಲ್ಲಿ ಪೂರ್ಣ ಅವಧಿಯ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಆಟೋ ಎಲೆಕ್ಟ್ರಿಶಿಯನ್, ಡೀಸೆಲ್ ಮೆಕ್ಯಾನಿಕ್, ವೆಲ್ಡರ್, ಪೇಂಟರ್, ಮೆಷಿನಿಸ್ಟ್, ಮೋಟಾರ್ ವಾಹನ ಬಾಡಿ ಬಿಲ್ಡರ್ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ ಕಂಪ್ಯೂಟರ್ ಆಪರೇಟರ್ನಲ್ಲಿ ತೇರ್ಗಡೆಯಾಗಿರುವ ಅಥವಾ ಐಟಿಐ ಜೊತೆಗೆ ಕೋಪ (ಈಕಕಿಆ) ವಿದ್ಯಾರ್ಹತೆ ಹೊಂದಿರುವವರಿಗೆ ಪಾಸಾ ವೃತ್ತಿಯಲ್ಲಿ ತರಬೇತಿ ನೀಡಲಾಗುವುದು. ಆಸಕ್ತರು ಫೆ.26ರ ಬೆಳಗ್ಗೆ 9.30 ರೊಳಗೆ ಬನ್ನಿಮಂಟಪದ ನಗರ ಸಾರಿಗೆ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.

ಸಮಾಜದ ಬದಲಾವಣೆಗಾಗಿ ನಾಯಕತ್ವ ಬೆಳವಣಿಗೆ ಬೇಕು
ಮೈಸೂರು: ಸಮಾಜ ಸುಧಾರಣೆಯು ಶಿಕ್ಷಕರ ಬೋಧನಾ ಲಹರಿಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕನು ತಾನು ಮಾಡುವ ಕೆಲಸವನ್ನು ಪ್ರೀತಿ- ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಂ. ರಾಜಶೇಖರ ಹೇಳಿದರು. ಜೆಎಸ್ಎಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗವು ಅಜೀಂ ಪ್ರೇಮ್ಜಿ ಫೌಂಡೇಷನ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಮಾಜದ ಬದಲಾವಣೆಗಾಗಿ ನಾಯಕತ್ವದ ಬೆಳವಣಿಗೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಗುಣ ಬೆಳೆಸುವಲ್ಲಿ ಹಾಗೂ ಅವರಲ್ಲಿ ಅರಿವು ಮೂಡಿಸುವಲ್ಲಿ ಈ ಕಾರ್ಯಾಗಾರ ಬಹಳ ಉಪಯುಕ್ತವಾಗಿದೆ ಎಂದರು.  ಫೌಂಡೇಷನ್ ಮುಖ್ಯಸ್ಥ ಡಾ.ಎಂ.ಪಿ. ಕಾಮತ್, ಪ್ರೊ.ಕೆ.ಎಸ್. ಸುರೇಸ್, ಡೀನ್ ಡಾ.ಎಚ್.ಸಿ. ಹೊನ್ನಪ್ಪ, ಪ್ರೊ.ಜಿ.ಸಿ. ರಾಜಣ್ಣ ಇದ್ದರು.

ಮೊರಾರ್ಜಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ, ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವವರು ಫೆ.24 ರೊಳಗೆ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಮಾ.23ರ ಬೆಳಗ್ಗೆ 11ಕ್ಕೆ ನಡೆಯಲಿದೆ. ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಸಾಕು. ಎಸ್ಸಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ 2 ಲಕ್ಷ, ಎಸ್ಟಿ- 2 ಲಕ್ಷ, ಹಾಗೂ ಹಿಂದುಳಿದ ವರ್ಗದ ಪ್ರವರ್ಗ- 1ಕ್ಕೆ 1 ಲಕ್ಷ ರು., ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ರವರಿಗೆ 44,500 ರು. ಆದಾಯ ಮಿತಿ ಇರಬೇಕು. ಹೆಚ್ಚಿನ ಮಾಹಿತಿಗೆ ದೂ. 0821- 2344661 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement