ಅಪರಾಧ ತಡೆಗೆ ಕೈಜೋಡಿಸಿ: ನ್ಯಾ. ಪದ್ಮರಾಜ್
ಮೈಸೂರು: ಸಮಾಜದಲ್ಲಿ ಕೆಲವು ವ್ಯಕ್ತಿಗಳಿಂದ ತಲೆದೊರುವ ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ನ್ಯಾಯಾಂಗದೊಂದಿಗೆ ಪೊಲೀಸ್ ಇಲಾಖೆಯು ಕೈಜೋಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ. ಪದ್ಮರಾಜ್ ಕರೆ ನೀಡಿದರು.
ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಗೂಂಡಾ ಕಾಯ್ದೆ ಕುರಿತ ಕಾರ್ಯಾಗಾರವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಅಪರಾಧ ನಿಯಂತ್ರಣ ಮಾಡುವಾಗ ಪೊಲೀಸರು ಕಾನೂನು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು. ಗೂಂಡಾ ಕಾಯ್ದೆ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಜಾಗೃತಿ ಮೂಡಿಸಬೇಕಾಗಿದೆ. ಅಪರಾಧ ನಿಯಂತ್ರಿಸಲು ಹೊಸ ಪ್ರವೃತ್ತಿಗಳ ಬಗ್ಗೆ ಪೊಲೀಸರಿಗೆ ತಿಳಿವಳಿಕೆ ಅಗತ್ಯ. ಕಾಲಕ್ಕೆ ತಕ್ಕಂತೆ ಪೊಲೀಸ್ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಪೊಲೀಸರು ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಡಿಜಿಪಿ ಎ.ಪಿ. ದೊರೆ ಮಾತನಾಡಿ, ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಬಂದು ನೀಡುವ ದೂರನ್ನು ಪಡೆದು ಎಫ್ಐಆರ್ ದಾಖಲಿಸಬೇಕು. ಎಫ್ಐಆರ್ ದಾಖಲಿಸಲು ನಿರಾಕರಿಸಿದರೆ ಅದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ.
ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಮಾನವ ಹಕ್ಕು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು. ದಕ್ಷಿಣ ವಲಯದ ಐಜಿಪಿ ಡಾ.ಕೆ.ರಾಮಚಂದ್ರರಾವ್ ಮಾತನಾಡಿ, ಗೂಂಡಾ ಕಾಯ್ದೆಯನ್ನು ಮಟ್ಕಾ, ಜೂಜಾಟ ನಿಯಂತ್ರಿಸಲು ಮಾತ್ರ ಹೆಚ್ಚಾಗಿ ಬಳಕೆ ಆಗುತ್ತಿದೆ ಅಪರಾಧಗಳನ್ನು ಹತ್ತಿಕ್ಕಲು ಗೂಂಡಾ ಕಾಯ್ದೆಯ ಸಮರ್ಪಕ ಬಳಕೆ ಆಗಬೇಕು ಎಂದು ತಿಳಿಸಿದರು.
ಕೆಪಿಎ ನಿರ್ದೇಶಕ ಎ.ಎಸ್.ಎನ್. ಮೂರ್ತಿ, ಹೈಕೋರ್ಟ್ ಸರ್ಕಾರಿ ವಕೀಲ ಇ.ಎಸ್. ಇಂದ್ರೇಶ್ ಇದ್ದರು.