ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ: ಸಚಿವ ಶ್ರೀನಿವಾಸಪ್ರಸಾದ್

Srinivasa Murthy VN
Updated On : 15 Feb 2014, 10:28 am

ಪಿರಿಯಾಪಟ್ಟಣ: ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಯಾವುದೇ ಯೋಜನೆ ತಂದರೂ ಸರಿಯಾಗಿ ನಿಜವಾದ ಫಲಾನುಭವಿಗಳಿಗೆ ತಲುಪದೆ ವಿಫಲವಾಗುತ್ತಿರುವುದು ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಪಟ್ಟಣದ ವಿಶ್ವಮಾನವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ- 2013 ಹಾಗೂ ಅನ್ನಭಾಗ್ಯ ಯೋಜನೆಯ ತಾಲೂಕು ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳ, ಸಿಬ್ಬಂದಿ ವರ್ಗದವರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಯಾದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ- 2013 ಅನ್ನು ರಾಜ್ಯದಲ್ಲಿ ಜಾರಿಗೆ ತಂದಿರುವ ಮುಖ್ಯ ಉದ್ದೇಶ ಅನ್ನಭಾಗ್ಯ ಯೋಜನೆಯಡಿಯಲ್ಲಿ 1 ರು.ಗೆ ಅಕ್ಕಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಬಡತನ ರೇಖೆಗಿಂತ ಕಡಿಮೆ ಇರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡುವುದರ ಜೊತೆಗೆ ಗೋಧಿ, ಸಕ್ಕರೆ, ರಾಗಿ, ಜೋಳ, ಟೀ, ಸೋಪು, ಉಪ್ಪು ಇನ್ನು ಮುಂತಾದ ದಿನನಿತ್ಯ ಬಳಕೆಯ ಪಡಿತರ ಪದಾರ್ಥಗಳನ್ನು ನೀಡಲು ತೀರ್ಮಾನಿಸಿದೆ ಎಂದರು. ಸಂಸದ ಎಚ್. ವಿಶ್ವನಾಥ್, ಶಾಸಕ ಕೆ. ವೆಂಕಟೇಶ್, ಜಿಪಂ ಅಧ್ಯಕ್ಷ ಮಹದೇವ್, ತಾಪಂ ಅಧ್ಯಕ್ಷೆ ಪವಿತ್ರ, ಜಿಪಂ ಸಿಇಒ ಪಿ.ಎ. ಗೋಪಾಲ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿದೇಶಕ ಡಾ.ಕಾ. ರಾಮೇಶ್ವರಪ್ಪ, ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್, ಇಒ ಎನ್.ಎಸ್. ಮಹದೇವಸ್ವಾಮಿ, ಬಿಇಒ ರಾಮಲಿಂಗು, ಸಣ್ಣಸ್ವಾಮಿ, ಗಜೇಂದ್ರ ಇದ್ದರು.

ಗುಣಮಟ್ಟದ ಶಿಕ್ಷಣ ನೀಡಿ
ಕೆ.ಆರ್. ನಗರ: ತಾಲೂಕಿನ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ಹೋಗಲಾಡಿಸಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಕರೆ ನೀಡಿದರು. ಪಟ್ಟಣದ ಗಾಯಿತ್ರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿರುವುದರಿಂದ ಖಾಸಗಿ ಶಾಲೆಗಳು ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ನೀಡಬೇಕಾಗಿದೆ ಎಂದರು. ಯಾದಗಿರಿ ಶಂಕರಾನಂದ ಸರಸ್ವತಿ ಮಹಾ ಸಂಸ್ಥಾನ ಮಠದ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎಸ್.ಟಿ. ಸತ್ಯನಾರಾಯಣ ಇದ್ದರು. ಶ್ವೇತಾ ಸೋಮಶೇಖರ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ. ದೊಡ್ಡೇಗೌಡ ಮಾತನಾಡಿದರು. ಪುರಸಭಾ ಸದಸ್ಯ ಉಮೇಶ್, ಶಿಕ್ಷಣ ಸಂಯೋಜಕ ಟಿ.ಕೆ. ನಾಗೇಶ್, ವಕೀಲ ಟಿ.ಜಿ. ತಿಮ್ಮೇಗೌಡ, ಮುಖ್ಯ ಶಿಕ್ಷಕ ಟಿ.ಎಂ. ಮನೋಹರ್ ಇದ್ದರು.

ಕರಡಿ ದಾಳಿ: ಇಬ್ಬರಿಗೆ ಗಾಯ
ಸರಗೂರು: ಎಚ್.ಡಿ. ಕೋಟೆ ತಾಲೂಕು ಸರಗೂರು ಹೋಬಳಿಯ ದಡದಹಳ್ಳಿ ಹಾಡಿಯಲ್ಲಿ ಕರಡಿಯೊಂದು ಸೌದೆ ತರಲು ಹೋಗಿದ್ದವರ ಮೇಲೆ ದಾಳಿ ಮಾಡಿರುವ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಮಧ್ಯಾಹ್ನದ ವೇಳೆ ದಡದಹಳ್ಳಿ ಹಾಡಿಯ ನಿವಾಸಿಗಳಾದ ಹತ್ತು ಮಂದಿ ಪಕ್ಕದ ಗೋಪಯ್ಯನಕಟ್ಟೆಯ ಕೆರೆಯ ಬಳಿ ಸೌದೆ ತರಲು ಹೋಗಿದ್ದರು. ಈ ವೇಳೆ ಅರಣ್ಯದಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಕರಡಿ ಏಕಾಏಕಿ ಈ ಗುಂಪಿನ ಮೇಲೆ ದಾಳಿ ನಡೆಸಿದೆ. ಮಾಸ್ತಿ (68) ಎಂಬವರ ಬಲಗೈಯನ್ನು ಸಂಪೂರ್ಣವಾಗಿ ತಿಂದು, ಚಿಕ್ಕಮ್ಮ (58) ಎಂಬವರ ತೊಡೆಗೆ ಗಾಯ ಮಾಡಿ ಪರಾರಿಯಾಗಿದೆ.ಇಬ್ಬರನ್ನು ತಕ್ಷಣ ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕ್ಕಮ್ಮ ಅವರನ್ನು ಹೊರ ರೋಗಿಯಾಗಿ ತಪಾಸಣೆ ಮಾಡಿ ಮನೆಗೆ ಕಳುಹಿಸಿದ್ದು, ಮಾಸ್ತಿ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ವರ್ಗಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement