ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವು
ಮೈಸೂರು: ವಿದ್ಯಾರ್ಥಿನಿಲಯದಲ್ಲಿ ಇದ್ದುಕೊಂಡು ಎಸ್ಸೆಸ್ಸೆಲ್ಸಿ ಓದಿ ಉತ್ತಮ ಅಂಕ ಗಳಿಸುವ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಭವಿಷ್ಯತ್ತಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದ ನಿರ್ದೇಶಕ ಕ್ಯಾಪ್ಟನ್ ಮಾಧವರಾವ್ ಹೇಳಿದರು.
ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗ್ರೂಪ್ ಡಿ ನೌಕರರ ಕೇಂದ್ರ ಸಂಘವು ಶನಿವಾರ ನಜರ್ಬಾದ್ನಲ್ಲಿರುವ ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗ ನೀಡಿರುವ ಭರವಸೆಯನ್ನು ಮುಂದಿನ ವರ್ಷದಿಂದ ಪೂರೈಸಲಾಗುವುದು. ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಬಿರ, ಟ್ಯೂಷನ್, ಇಂಗ್ಲಿಷ್ ತರಗತಿಗಳನ್ನು ನಡೆಸಿ ಅವರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಮ್ಮ ಘಟಕ ಕಟಿಬದ್ಧವಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಕಂಪ್ಯೂಟರ್ ನೀಡಲು ಚಿಂತಿಸಲಾಗಿದೆ. ಈಗಿರುವ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕೋರಿದರು.
ವಿದ್ಯೆಗೆ ಭೇದಭಾವವಿಲ್ಲ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಾಸು ಮಾತನಾಡಿ, ವಿದ್ಯೆ, ಬುದ್ಧಿ ಎಂಬುದು ಎಲ್ಲರ ಸ್ವತ್ತು. ಮೇಲು- ಕೀಳು ಎಂಬ ಭೇದ- ಭಾವ ಅದಕ್ಕಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ಬಡ ವಿದ್ಯಾರ್ಥಿಗಳು ಎದೆಗುಂದದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಿರಣ್, ನಿಖಿಲ್, ಮಂಜುಳಾ ಹಾಗೂ ಎಸ್. ಕೃಷ್ಣ ಅವರನ್ನು ಅಭಿನಂದಿಸಲಾಯಿತು.
ಮೈಸೂರು ವಿವಿ ಎಂಬಿಎ ವಿಭಾಗದ ಪ್ರಾದ್ಯಾಪಕ ಡಾ.ಡಿ. ಆನಂದ್, ರಾಷ್ಟ್ರೀಯ ಹೆದ್ದಾರಿ- 209ರ ವಿಶೇಷ ಭೂ ಸ್ವಾಧೀನಾಧಿಕಾರಿ ಕೆ.ಎಂ. ಸುರೇಶ್ಕುಮಾರ್, ಚಾಮರಾಜನಗರ ಜಿಲ್ಲೆ ಸಹಾಯಕ ಎಂಜಿನಿಯರ್ ಚಿಕ್ಕಲಿಂಗಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು, ಭಾರತೀಯ ನೋಟು ಮುದ್ರಣ ಘಟಕದ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎಂ. ಮಹದೇವಮೂರ್ತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ, ಭಾರತಿ, ನಾಗಚಂಪ, ಜಿ. ಮಂಟೇಲಿಂಗಯ್ಯ, ಪದಾಧಿಕಾರಿಗಳಾದ ರಾಜು, ಸತೀಶ್, ಇ. ಶಂಕರ್, ಡಿ.ಅಣ್ಣಯ್ಯ, ಮಂಜುಳಾ ಮಂಜುನಾಥ್ ಇದ್ದರು.
ನಾಲ್ಕು ಜನ ಕಿವುಡ, ಮೂಗ ಮಕ್ಕಳು ನಾಪತ್ತೆ
ಮೈಸೂರು: ತಿಲಕ್ ನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿದ್ದ ರಾಹುಲ್ಕುಮಾರ್, ನಾಗು, ಲೋಕೇಶ ಮತ್ತು ಕುಷನ್ ಎಂಬ ಕಿವುಡ ಮತ್ತು ಮೂಗ ಮಕ್ಕಳು ಫೆ.4 ರಿಂದ ನಾಪತ್ತೆಯಾಗಿದ್ದಾರೆ. ಈ ನಾಲ್ಕು ಫೆ.4 ರಂದು ಶಾಲೆ ಹೊರಗೆ ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ಅವರನ್ನು ಪತ್ತೆ ಮಾಡಿಕೊಡುವಂತೆ ಶಾಲೆಯ ಅಧೀಕ್ಷಕ ಎಚ್.ಎಸ್. ಶ್ರೀನಿವಾಸ ಪೊಲೀಸರಿಗೆ ದೂರು ನೀಡಿದ್ದಾರೆ. ರಾಹುಲ್ಕುಮಾರ್ ಚಹರೆ- 59 ಇಂಚು ಎತ್ತರ, 49 ಕೆ.ಜಿ. ತೂಕ, ಗೋದಿ ಮೈಬಣ್ಣ, ಬಲಗೈಯಲ್ಲಿ ಮಚ್ಚೆ ಇದೆ. ನಾಗು ಚಹರೆ- 62 ಇಂಚು ಎತ್ತರ, 42 ಕೆ.ಜಿ. ತೂಕ, ಗೋದಿ ಮೈಬಣ್ಣ, ಮೂಗಿನ ಮೇಲೆ ಕಲೆ ಇದೆ. ಲೋಕೇಶ ಚಹರೆ- 39 ಇಂಚು ಎತ್ತರ, 43 ಕೆ.ಜಿ. ತೂಕ, ಗೋದಿ ಮೈಬಣ್ಣ, ಬಲಮೂಗಿನ ಮೇಲೆ ಮಚ್ಚೆ ಇದೆ. ಕುಷನ್ ಚಹರೆ- 59 ಇಂಚು ಎತ್ತರ, 39 ಕೆ.ಜಿ. ತೂಕ, ಗೋದಿ ಮೈಬಣ್ಣ, ಉದ್ದ ಮುಖ, ಬಲ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಇದೆ. ಈ ನಾಲ್ವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418313, 513 ಸಂಪರ್ಕಿಸಲು ಎಎಸ್ಐ ಬಿ.ಪಿ. ನಾಗಮ್ಮ ಕೋರಿದ್ದಾರೆ.