ಕಸ ಬೀದಿಗೆ ಸುರಿಯದಿರಿ
-ಮಾ. ವೆಂಕಟೇಶ್
ಮೈಸೂರು: ಸಾಮಾನ್ಯವಾಗಿ ಬಡಾವಣೆ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಸುರಿಯುವುದು ಸಹಜ. ಕೆಲವರು ಎಷ್ಟೇ ಹೇಳಿದರೂ ಕೇಳುವುದಿಲ್ಲ. ನಿಗದಿತ ಜಾಗದಲ್ಲಿ ಕಸ ಹಾಕುವುದಿಲ್ಲ. ಮತ್ತೆ ಮತ್ತೆ ಅದೇ ಜಾಗದಲ್ಲೆ ಕಸ ಸುರಿದು ಪರಿಸರವನ್ನು ಹಾಳು ಮಾಡುವುದನ್ನು ಇಲ್ಲವೆನ್ನುವಂತಿಲ್ಲ. ಇದು ಅರಿವಿನ ಕೊರತೆಯೇ, ಅಥವಾ ಸೋಮಾರಿತನವೋ ತಿಳಿಯದು. ಇಂತಹ ಸಂದರ್ಭದಲ್ಲಿ ಅವರ ಮನಪರಿವರ್ತನೆ ಮಾಡುವ ಕೆಲಸವಂತೂ ಆಗಲೇ ಬೇಕು.
ಅಂತಹ ಕೆಲಸ ಮಾಡುವಲ್ಲಿ ಮೈಸೂರು ನಗರದ 10ನೇ ವಾರ್ಡ್ನ ಪಾಲಿಕೆ ಸದಸ್ಯ ಸುನಿಲ್ ಮುಂದಾಗಿದ್ದಾರೆ. ಯಾರಾದರೂ ಬೀದಿ ಬದಿಯಲ್ಲಿ ಕಸ ಸುರಿದರೆ ಮೊದಲು ಅವರಿಗೆ ತಿಳಿ ಹೇಳುತ್ತಾರೆ. ಕೇಳದೆ ಹೋದರೆ, ಮುಂಜಾನೆ ಎದ್ದು ಬಂದು ಆ ಕಸ ಹಾಕುವ ಸ್ಥಳದಲ್ಲಿಯೇ ಠಿಕಾಣಿ ಹೂಡುತ್ತಾರೆ. ಆಗ ನಿವಾಸಿಗಳು ಕಸ ಸುರಿಯಲು ಮುಂದಾಗುವುದಿಲ್ಲ.
ಮನೆ ಮನೆಗೆ ಆಟೋ ಟಿಪ್ಪರ್ ಮೂಲಕ ಪ್ರತಿದಿನ ಬಂದು ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ. ಒಂದು ವೇಳೆ ಆ ದಿನ ವಾಹನ ಬಾರದ ಸಂದರ್ಭದಲ್ಲಿ ಕಸವನ್ನು ಮನೆಯಲ್ಲಿಯೇ ಇಟ್ಟು, ನಂತರ ಬಂದಾಗ ನೀಡಬೇಕು. ಅದನ್ನು ಬಿಟ್ಟು ಆ ಕಸವನ್ನು ತಂದು ರಸ್ತೆ ಬದಿಯಲ್ಲಿಯೋ, ಖಾಲಿ ಜಾಗದ ಆವರಣದಲ್ಲಿಯೋ ಸುರಿಯುವುದು ತಪ್ಪು ಎನ್ನುತ್ತಾರೆ ಸುನಿಲ್.
ಸ್ವಚ್ಛತೆಗೆ ಆದ್ಯತೆ: ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿರುವ ನಾನು ಮೊದಲು ಬಡಾವಣೆಯ ಸ್ವಚ್ಛತೆಗೆ ಆದ್ಯತೆ ವಹಿಸುತ್ತೇನೆ. ಏಕೆಂದರೆ ಜನರ ಆರೋಗ್ಯ ಬಹುಮುಖ್ಯ. ಅದಕ್ಕಾಗಿ ಬಡಾವಣೆಯಲ್ಲಿ ಕಸ ಹಾಕದಂತೆ ತಡೆಗಟ್ಟುವಲ್ಲಿ ಶ್ರಮ ವಹಿಸುತ್ತೇನೆ. ಹಾಗೂ ಮಳೆ ನೀರು ಬಂದಾಗ ಹಳ್ಳಕೊಳ್ಳಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಹಳ್ಳ ಗುಂಡಿಗಳನ್ನು ಮುಚ್ಚಿಸಲಾಗಿದೆ. ಆದರೆ ಇಲ್ಲಿನ ದೊಡ್ಡ ಮೋರಿಯದ್ದೆ ಒಂದು ದೊಡ್ಡಸಮಸ್ಯೆ ಎಂದು ಸುನಿಲ್ ಹೇಳಿದರು.
ವಿದ್ಯಾರಣ್ಯಪುರಂ ಹೆಸರಿನ ಈ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ಮೈಸೂರು ಮಾನಂದವಾಡಿ, ಸಾರ್ವಜನಿಕ ಹಾಸ್ಟಲ್ ರಸ್ತೆ, ಬಸವಲಿಂಗಪ್ಪ ವೃತ್ತ, ವಿದ್ಯಾರಣ್ಯಪುರಂ ಮುಖ್ಯರಸ್ತೆ ಮುಖಾಂತರ ಸೂಯೇಜ್ಫಾರಂ, ಪೂರ್ವಕ್ಕೆ ವಿದ್ಯಾರಣ್ಯಪುರಂ 4ನೇ ಮುಖ್ಯ ರಸ್ತೆಯಿಂದ 6ನೇ ಕ್ರಾಸ್, ಸೂಯೇಜ್ ಫಾರಂನ ಬಿಂದುವಿನಿಂದ ವಿದ್ಯಾರಣ್ಯಪುರಂ 16ನೇ ಕ್ರಾಸ್, ದಕ್ಷಿಣಕ್ಕೆ ಸೂಯೇಜ್ಫಾರಂನಿಂದ ಮುಖ್ಯರಸ್ತೆಯಿಂದ ವಿದ್ಯಾರಣ್ಯಪುರಂ 15 ನೇ ಕ್ರಾಸ್, ಮೈಸೂರು ಮಾನಂದವಾಡಿ ಮುಖ್ಯರಸ್ತೆ, ಪಶ್ಚಿಮಕ್ಕೆ ವಿದ್ಯಾರಣ್ಯಪುರಂ 16ನೇ ಕ್ರಾಸ್ನಿಂದ ಮಾನಂದವಾಡಿ ರಸ್ತೆ ಸೇರುವ ಬಿಂದುವಿನಿಂದ ಬಸವಲಿಂಗಪ್ಪ ವೃತ್ತದ ಬಿಂದುವರೆಗೆ ಒಳಗೊಂಡಿದೆ. ಇಲ್ಲಿ 12 ಸಾವಿರಕ್ಕೂ ಅಧಿಕ ಜನಸಂಖ್ಯೆ, 2500 ಕ್ಕೂ ಅಧಿಕ ಮನೆ, 120 ಕ್ಕೂ ಹೆಚ್ಚಿನ ಉದ್ದಿಮೆಗಳಿವೆ.
ಈ ಭಾಗದಲ್ಲಿ ಇಲ್ಲಿನ ಶಿವಾ ಗ್ಯಾಸ್ನ ಬಳಿ ಆದು ಹೋಗಿರುವ ದೊಡ್ಡಮೋರಿಯು ಸಾರ್ವಜನಿಕ ಹಾಸ್ಟೆಲ್ವರೆಗೆ ಮುಂದುವರಿದಿದೆ. ಕೆಲವರು ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟ್ಲಿಗಳು ಮುಂತಾದ ತ್ಯಾಜವನ್ನು ತಂದು ಸುರಿಯುತ್ತಿದ್ದಾರೆ. ಹಾಗೂ ಗಿಡಗೆಂಟಿಗಳು ಬೆಳೆದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಇಡೀ ಬಡಾವಣೆಗೆ ಒಂದೇ ಒಂದು ಕಸದ ತೋಟ್ಟಿಯನ್ನು ಹಾಕಿರುವ ಕಾರಣ, ಕೆಲವರಿಗೆ ಈ ಮೋರಿಯೇ ಕಸದ ತೊಟ್ಟಿಯಾಗಿದೆ. ಇದನ್ನು ತಪ್ಪಿಸಬೇಕಾದರೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯಕ.
ಈ ವಾರ್ಡ್ನ ವ್ಯಾಪ್ತಿಯಲ್ಲಿ ಮೊದಲು ಮೂರು ಕಸದ ತೊಟ್ಟಿಗಳನ್ನು ಹಾಕಲಾಗಿತ್ತು. ಅಲ್ಲಿ ಕಸದ ರಾಶಿ ಬಿದ್ದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿತ್ತು. ಈಗ ಎರಡು ಕಡೆ ತೆಗೆದು ಹಾಕಲಾಗಿದೆ. ಕ್ರಮೇಣ ಶಿವ ಗ್ಯಾಸ್ ಬಳಿ ಇರುವ ತೊಟ್ಟಿಯನ್ನು ಎತ್ತಂಗಡಿ ಮಾಡಲಾಗುವುದು. ಬಡಾವಣೆಯಲ್ಲಿ ಇಂತಹ ತೊಟ್ಟಿಯಿದ್ದರೆ ಕಸದ ಸಮಸ್ಯೆ ಹೆಚ್ಚಾಗಲಿದೆ. ನೇರವಾಗಿ ಎಕ್ಸೆಲ್ ಪ್ಲಾಂಟ್ಗೆ ರವಾನಿಸಬೇಕು. ಇಲ್ಲಿನ ದೋಡ್ಡಮೋರಿಯದು ದೊಡ್ಡ ಸಮಸ್ಯಯಾಗಿದೆ. ಆಗಾಗ ಶುಚಿಗೊಳಿಸುವ ಕೆಲಸ ನಡೆದಿದೆ. ಮನೆ ಮನೆಯಿಂದ ಸಂಗ್ರಹಿಸುವ ಕಸವನ್ನು ವಿಂಗಡಣೆ ಮಾಡಿ ಕೊಡುವ ಸಲುವಾಗಿ 1 ಸಾವಿರ ಮನೆಗೆ ಬುಟ್ಟಿಗಳನ್ನು ವಿತರಿಸಲಾಗಿದೆ. ಉಳಿದ ಮನೆಗಳಿಗೂ ಮುಂದಿನ ವಾರ ವಿತರಿಸಲಾಗುವುದು.
ಸುನಿಲ್, ವಾರ್ಡ್ 10, ನಗರ ಪಾಲಿಕೆ ಸದಸ್ಯರು.