ಕೃಷಿ ಇಲಾಖೆ ಸಿಬ್ಬಂದಿಗೆ ತರಾಟೆ
ಕೆ.ಆರ್. ನಗರ: ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು ಅನಗತ್ಯವಾಗಿ ಅಲೆಸುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ತಾಪಂ ಮಾಜಿ ಉಪಾಧ್ಯಕ್ಷ, ಸದಸ್ಯ ಹಾಡ್ಯ ಮಹದೇವಸ್ವಾಮಿ ಆರೋಪಿಸಿದರು.
ಸಹಾಯಕ ನಿರ್ದೇಶಕರ ಕಚೇರಿಗೆ ಬುಧವಾರ ರೈತರೊಂದಿಗೆ ಭೇಟಿ ನೀಡಿ ಸವಲತ್ತು ನೀಡಲು ವಿಳಂಬ ಮಾಡುವ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಮುಂದೆ ಈ ರೀತಿ ತೊಂದರೆಯಾದರೆ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಒಂದು ತಿಂಗಳಿನಿಂದ ರೈತರಿಗೆ ರಿಯಾಯಿತಿ ದರದಲ್ಲಿ ಪೈಪ್ ನೀಡುತ್ತಿದ್ದು, ಇದಕ್ಕೆ ದಾಖಲು ನೀಡಲು ಬರುವವರೊಂದಿಗೆ ಸರಿಯಾಗಿ ವರ್ತಿಸದೆ ಒಂದು ಸವಲತ್ತು ಪಡೆಯಲು ಹತ್ತಾರು ಬಾರಿ ಅಲೆಸುತ್ತಿದ್ದಾರೆ ಇದನ್ನು ಮೇಲಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತರುವುದಾಗಿ ಹೇಳಿದರು.ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಯಾವುದೇ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗುತ್ತಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಂಡು, ಇಲಾಖೆಯ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ ಎಂದು ಒತ್ತಾಯಿಸಿದರು.
ಕಾಡು ಹಂದಿಗಳ ದಾಳಿ ಬೆಳೆ ನಾಶ
ಅಂತರಸಂತೆ: ಎಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ವೆಂಕಟಲಕ್ಷ್ಮಮ್ಮ ಕೋಂ ತಿಮ್ಮೇಗೌಡ ಅವರಿಗೆ ಸೇರಿದ ಕಬ್ಬಿನ ಗದ್ದೆಗೆ ಕಾಡು ಹಂದಿಗಳು ದಾಳಿ ನಡೆಸಿ ಕಬ್ಬಿನ ಫಸಲನ್ನು ನಾಶ ಪಡಿಸಿದೆ.
ಈ ಜಮೀನುಗಳು ಕಾಡಂಚಿನ ಪ್ರದೇಶದಲ್ಲಿದ್ದು, ಹೆಚ್ಚಾಗಿ ರಾತ್ರಿಯ ವೇಳೆ ಕಾಡು ಹಂದಿಗಳು ಬರುವುದರಿಂದ ರೈತರು ಮರದ ಮೇಲೆ ಅಟ್ಟಣಿ ನಿರ್ಮಿಸಿ ಕಾವಲು ಕಾಯುತ್ತಿದ್ದು, ಆದರೂ ಕಾಡು ಹಂದಿಗಳು ಕಣ್ತಪ್ಪಿಸಿ ಕಬ್ಬಿನ ಗದ್ದೆಯೊಳಗೆ ನುಸುಳಿ ಬೆಳೆ ನಾಶ ಪಡಿಸುತ್ತಿವೆ. ಇದರಿಂದ ಹೆಚ್ಚಿನ ರೈತರು ನಷ್ಟ ಅನುಭವಿಸುತ್ತಿದ್ದು, ಹಿಂದೆ ಕಾಡಾನೆಗಳ ದಾಳಿಯಿಂದ ಬಸವಳಿದ ರೈತರು ಈಗ ಕಾಡು ಹಂದಿಗಳ ದಾಳಿಯಿಂದ ಕಂಗಾಲಾಗಿದ್ದಾರೆ.
ಅಂತರಸಂತೆ ವಲಯ ಅರಣ್ಯಾಧಿಕಾರಿಗಳಾದ ಪ್ರಸನ್ನಕುಮಾರ್ ಪೈ ಹಾಗೂ ಅವರ ಸಿಬ್ಬಂದಿ, ಹೊಸಹೊಳಲು ಗ್ರಾಮದ ವೆಂಕಟಲಕ್ಷ್ಮಮ್ಮ ಕೋಂ ತಿಮ್ಮೆಗೌಡ, ಎಚ್.ಎಸ್. ಶಿವಣ್ಣೇಗೌಡ, ನಿಂಗರಾಜು ಮತ್ತು ಮುಂತಾದ ರೈತರ ಜಮೀನನ್ನು ಪರಿಶೀಲಿಸಿದರು. ಕಾಡು ಹಂದಿಗಳು ಜಮೀನಿಗೆ ಬಾರದ ರೀತಿಯಲ್ಲಿ ಕ್ರಮ ವಹಿಸಬೇಕೆಂದು ರೈತರು ಅರಣ್ಯಾಧಿಕಾರಿಗಳ ಬಳಿ ನಿವೇದಿಸಿಕೊಂಡಿದ್ದಾರೆ.