ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಸಭೆಯಲ್ಲಿ ಪರಸ್ಪರ ವಾಗ್ವಾದ

Srinivasa Murthy VN
Updated On : 10 Jul 2014, 1:14 am

ಕ. ಪ್ರ. ವಾರ್ತೆ, ನಂಜನಗೂಡು,ಜು.9  
ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದರೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ತಾಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿತು.
ತಾಲೂಕು ಬಿಜೆಪಿ ಅಧ್ಯಕ್ಷ ಕುರಹಟ್ಟಿ ಮಹೇಶ್ ಅಧ್ಯಕ್ಷತೆಯಲ್ಲಿ ಕೆಎಚ್‌ಬಿ ಕಾಲೊನಿಯ ಪಕ್ಷದ ಕಚೇರಿಯಲ್ಲಿ ನಡೆದ ತಾಲೂಕು ಬಿಜೆಪಿ ಪ್ರಮುಖರ ಸಭೆಯಲ್ಲಿ ವಾಗ್ವಾದ ನಡೆಯಿತು.
ತಾಲೂಕು ಉಸ್ತುವಾರಿ ವಹಿಸಿರುವ ಬಾಲಸುಬ್ರಹ್ಮಣ್ಯ ಮಾತನಾಡಿ, ತಾಪಂ ಚುನಾವಣೆ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಈ ಬಗ್ಗೆ ಜಿಲ್ಲಾ ಬಿಜೆಪಿ ಮುಖಂಡರಿಗೆ ವರದಿ ಸಲ್ಲಿಸಬೇಕಿದೆ. ಅಭಿಪ್ರಾಯ ಸಂಗ್ರಹಿಸಿ ವರದಿ ಕಳುಹಿಸಲು ಬಂದಿದ್ದೇನೆ. ತಮ್ಮ ಅಭಿಪ್ರಾಯ ತಿಳಿಸಿ ಎಂದಾಗ ಸಭೆಯಲ್ಲಿದ್ದ ಬಿಜೆಪಿ ಮುಖಂಡರು ತಾಪಂ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕೋರ್ ಕಮಿಟಿಯಲ್ಲಿದ್ದ ಕೆಲವರು ಒಮ್ಮತದ ತೀರ್ಮಾನ ತೆಗೆದುಕೊಳ್ಳದಿರುವುದೇ ಗೊಂದಲಕ್ಕೆ ಕಾರಣವಾಯಿತು ಎಂದರು.
ಜಿಪಂ ಸದಸ್ಯರೊಬ್ಬರು ತಾವು ಸೂಚಿಸಿದ ಸದಸ್ಯರಿಗೆ ತಾಪಂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ. ಇಲ್ಲದಿದ್ದರೆ ಕಾಂಗ್ರೆಸ್ ಬೆಂಬಲಿಸಿ ಎಂದು ಸದಸ್ಯರಿಗೆ ಹೇಳಿದ ಮಾತೆ ಚರ್ಚೆಗೆ ಗ್ರಾಸವಾಯಿತು. ಮುಖಂಡ ಕೆಂಡಗಣ್ಣಪ್ಪ, ಶಿವಪ್ಪದೇವರು, ಆಕಳ ಮಹದೇವಪ್ಪ ಮಾತನಾಡಿ ತಾಲೂಕು ಬಿಜೆಪಿ ಅಧ್ಯಕ್ಷರು ಬಿಜೆಪಿಯವರೆ ಎಂದು ಘೋಷಿಸಿ ಪಕ್ಷದ ಮಾನ, ಗೌರವ ಕಾಪಾಡಿಕೊಳ್ಳಿ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಬೆರಳೆಣಿಕೆ ಮುಖಂಡರ ಮಾತು ಕೇಳಿ ಯಾರ ಮೇಲಾದರು ಶಿಸ್ತು ಕ್ರಮ ಜರುಗಿಸಿದರೆ ಪಕ್ಷದಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯ ಉಲ್ಬಣಗೊಂಡು ಪಕ್ಷದ ಬೆಳವಣಿಗೆಗೆ ಅಡ್ಡಿ ಆಗಲಿದೆ ಎಂದು ಸಲಹೆ ನೀಡಿದರು.
ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ ಮಾತನಾಡಿ, ಯಾರ ಮೇಲೂ ಕ್ರಮ ಕೈಗೊಳ್ಳಲು ಸಭೆಯನ್ನು ಕರೆದಿಲ್ಲ, ತಾಪಂ ಚುನಾವಣೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಜಿಲ್ಲೆಗೆ ಜಿಲ್ಲಾ ಸಮಿತಿಗೆ ವರದಿಯನ್ನು ನೀಡಲು ಕರೆಸಲಾಗಿದೆ ಎಂದರು.
ತಾಲೂಕು ಉಸ್ತುವಾರಿ ಬಾಲಸುಬ್ರಹ್ಮಣ್ಯಂ ಮಾತನಾಡಿ, ಪಕ್ಷ ಸಂಘಟನೆ ದೃಷ್ಟಿಯಿಂದ ಈ ಸಭೆ ಕರೆಯಲಾಗಿದೆ. ಇದು ಯಾವೊಬ್ಬ ಮುಖಂಡರ ವಿರುದ್ಧವೂ ಕ್ರಮ ಕೈಗೊಳ್ಳಲು ಅಲ್ಲ. ತಾಪಂ ಅಧ್ಯಕ್ಷರಾಗಿರುವ ರತ್ನಮ್ಮ ಕೆಂಪಲಿಂಗಪ್ಪ ಅವರೇ ಅಧಿಕೃತ ಬಿಜೆಪಿ ಅಭ್ಯರ್ಥಿ ಎಂದ ಅವರು ಪಕ್ಷದ ಹಿನ್ನಡೆ ಬಗ್ಗೆ ವರದಿ ಕಳುಹಿಸಲಾಗುವುದು ಎಂದರು.
ತಾಪಂ ಸದಸ್ಯರಾದ ಕಪ್ಪಸೋಗೆ ರವೀಂದ್ರ, ಮಲ್ಲೇಶ್, ಮಂಜುನಾಥ್, ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಕೃಷ್ಣಪ್ಪ ಗೌಡ, ವಿನಯ್ ಕುಮಾರ್, ಎನ್.ಸಿ. ಬಸವಣ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜು, ಸ್ಲಂ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಪುರಸಭ ಸದಸ್ಯ ಆನಂದ, ಪ್ರೇಮಾ ಶಂಭಯ್ಯ, ಮುಳ್ಳೂರು ಶೇಖರ್, ಗಿರಿ ಪ್ರಸಾದ್, ಜವರಯ್ಯ, ರಂಗಸ್ವಾಮಿ, ಮರಿಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement