ಬೆಂಗಳೂರಿನಲ್ಲಿ ರಾಜ್ಯ ಪೌರ ಕಾರ್ಮಿಕರ ಸಮಾವೇಶ 12ಕ್ಕೆ
ಮೈಸೂರು : ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘವು ಜು.12ರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಮಲ್ಲೇಶ್ವರ ಆಟದ ಮೈದಾನದಲ್ಲಿ ರಾಜ್ಯ ಮಟ್ಟದ ಪೌರ ಕಾರ್ಮಿಕರ ಸಮಾವೇಶ ಆಯೋಜಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆ ವಹಿಸುವರು. ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಎಚ್.ಸಿ. ಮಹದೇವಪ್ಪ, ಎಚ್. ಆಂಜನೇಯ, ವಿನಯಕುಮಾರ್ ಸೊರಕೆ, ಪರಮೇಶ್ವರ ನಾಯಕ್, ಕೆ.ಜೆ. ಜಾರ್ಜ್ ಮತ್ತು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಜಿ ಮೇಯರ್ ನಾರಾಯಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಮಾವೇಶವದಲ್ಲಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಸುಮಾರು 25 ಸಾವಿರ ಪೌರ ಕಾರ್ಮಿಕರು ಭಾಗವಹಿಸುವರು. ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು ಹಾಗೂ ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರನ್ನು ಕಾಯಂ ಮಾಡಬೇಕು, ಬಿಬಿಎಂಪಿಯಲ್ಲಿ ನಾಲ್ಕು ಸಾವಿರ ಕಾಯಂ ಪೌರ ಕಾರ್ಮಿಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆ ರದ್ದುಗೊಳಿಸಿ, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಅವರು ಆಗ್ರಹಿಸಿದರು.
ತಲ, ತಲಾಂತರದಿಂದ ಒಂದೆ ಸಮಾಜ ಈ ಸ್ವಚ್ಛತೆ ಕೆಲಸ ಮುಂದುವರಿಸಿಕೊಂಡು ಬರುತ್ತಿದೆ. ಇದನ್ನು ತಪ್ಪಿಸಲು ಮುಂದಿನ ಪೀಳಿಗೆಯನ್ನು ಈ ವೃತ್ತಿಯಿಂದ ಬಿಡುಗಡೆಗೊಳಿಸಲು ಪೌರ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಪದವಿ ಪಡೆವ ತನಕ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಉಚಿತ ಶಿಕ್ಷಣ ನೀಡಬೇಕು, ವಿದ್ಯಾವಂತ ಪೌರ ಕಾರ್ಮಿಕರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ತರಬೇತಿ ನೀಡಬೇಕು ಹಾಗೂ ಇವರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಎಂ. ಮಾರಾ, ಆರ್. ದಾಸು, ಜಿ. ಮಹದೇವು ಇದ್ದರು.