ಕಲೆಗಳ ಆಸಕ್ತಿ ಬೆಳೆಸಿಕೊಳ್ಳಿ
ಮೈಸೂರು: ಯಾವುದಾದರೂ ಕಲೆಗಳ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಹೇಳಿದರು.
ಅಪ್ರವರಂಬೆ ಸಂಸ್ಥೆಯು ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ಬೇಂದ್ರೆ ಬಯಲು ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ರವಿರಂಗ ಮಕ್ಕಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಯಾವುದಾದರೂ ಒಂದು ಕಲೆಯ ಆಸಕ್ತಿ ಬೆಳೆಸಿಕೊಂಡಾಗ ಅದು ಮುಂದಿನ ಭವಿಷ್ಯಕ್ಕೆ ತುಂಬ ಸಹಕಾರಿಯಾಗಲಿದೆ. ಅಲ್ಲದೆ ಕ್ರಿಯಾಶೀಲರಾಗಿ ವ್ಯಕ್ತಿತ್ವ ವಿಕಾಸಕ್ಕೆ ಕಾರಣವಾಗಲಿದೆ. ಆದ್ದರಿಂದ ಮಕ್ಕಳು ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಮುಂತಾದ ಕಲಾಸಕ್ತಿ ಹೊಂದುವುದು ಅವಶ್ಯಕ ಎಂದರು. ನಾನು ಸಹ ಸಣ್ಣ ವಯಸ್ಸಿನಲ್ಲಿ ನಾಟಕ ಅಭಿನಯಿಸಿದ್ದೆ. ಆ ರೀತಿ ಬಾಲ್ಯದಲ್ಲಿಯೇ ಕಲೆಯ ಒಲವು ಇಟ್ಟುಕೊಂಡಿದ್ದ ಕಾರಣ, ಇಂದು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಜೀವನದಲ್ಲಿ ಶ್ರಮ ಹಾಗೂ ತನ್ಮಯತೆ ಇರಿಸಿಕೊಂಡು ಗುರಿ ಮುಟ್ಟುವತ್ತ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಆಶಿಸಿದರು. ಪ್ರಾಸ್ತಾವಿಕ ಮಾತುಗಳಾಡಿದ ಸಂಸ್ಥೆ ಕಾರ್ಯದರ್ಶಿ ನಾ.ನಾಗಚಂದ್ರ, ನಾಟಕ, ಮೂಕಾಭಿನಯ, ಭಾಷಣ ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕ ತರಬೇತಿಯನ್ನು ಮಕ್ಕಳಿಗೆ ನೀಡಲಾಗುವುದು. 16 ವಾರಗಳ ಕಾಲ ಪ್ರತಿ ಭಾನುವಾರ ಶಿಬಿರ ನಡೆಯಲಿದೆ ಎಂದರು.
ಕನ್ನಡ ವಿಕಾಸ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಮಂಡ್ಯ ಪ್ರಕಾಶ್ ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ಪಿ.ವೆಂಕಟರಾಮಯ್ಯ ಮುಖ್ಯ ಅತಿಥಿಗಳಾಗಿದ್ದರು. ಶಿಬಿರದ ಸಂಚಾಲಕ ಎನ್. ಧನಂಜಯ, ಎಚ್.ಎಸ್. ಕವಿತಾ ಇದ್ದರು.