ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜನರ ಸಮಸ್ಯೆ ಆಲಿಸಿದ ಸಿಎಂ

Srinivasa Murthy VN
Updated On : 13 Jul 2014, 11:20 am

ಮೈಸೂರು: ನಗರಕ್ಕೆ ಭಾನುವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನೆ ಎದುರು ಜಮಾಯಿಸಿದ್ದ ನೂರಾರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದ ಎದುರು ಕಾದು ನಿಂತಿದ್ದ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ ಸಿದ್ದರಾಮಯ್ಯ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಗಳನ್ನು ನೀಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ಬೆಳಗ್ಗೆಯಿಂದ ಕಾದಿದ್ದೀನಿ, ಮೊದಲು ನನ್ನನ್ನು ಮುಖ್ಯಮಂತ್ರಿಯವರ ಬಳಿ ಬಿಡಿ ಎಂದು ವಯೋ ವೃದ್ಧರೊಬ್ಬರು ಪೊಲೀಸರನ್ನು ಕೇಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಅವರು, ಬಿಡಿ ಅವರನ್ನು ಎಂದು ಹೇಳಿ ಅವರಿಂದ ಅರ್ಜಿ ಸ್ವೀಕರಿಸಿ, ಪರಿಶೀಲಿಸಿ ಕ್ರಮ ವಹಿಸುವ ಆಶ್ವಾಸನೆ ನೀಡಿದರು. ಕೆಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಹಲವರು ತಮ್ಮ ಸಮಸ್ಯೆ ಕುರಿತ ಮನವಿ ಪತ್ರಗಳನ್ನು ನೀಡಿದರು. ಪರಿಚಿತರನ್ನು ಎಂದಿನಂತೆ ಸಿದ್ದರಾಮಯ್ಯ ಅವರು ಹೆಸರು ಹಿಡಿದು ಮಾತನಾಡಿಸಿದರು.
ಶಾಲಾ ವಾಹನಗಳು, ಆಟೋ ಚಾಲಕರು ಮತ್ತು ಮಾಲೀಕರ ಪರವಾಗಿ ನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಈ ಸಂಬಂಧ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು. ರೀಡ್ ಆ್ಯಂಡ್ ಟೈಲರ್ ಕಂಪನಿಯವರು 50 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮನವಿ ಸಲ್ಲಿಸಿದರು. ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ನೇತೃತ್ವ ವಹಿಸಿದ್ದರು.
ಮಲೆ ಮಹದೇಶ್ವರ ಪ್ರಾಧಿಕಾರ: ಬಳಿಕ ನಿವಾಸದಲ್ಲಿ ಮಲೆಮಹದೇಶ್ವರ ಜಯಂತಿ ಸಮಿತಿ ಪದಾಧಿಕಾರಿಗಳಾದ ಮಾಜಿ ಶಾಸಕರಾದ ಎಚ್.ಗಂಗಾಧರನ್, ಡಿ.ಮಾದೇಗೌಡ, ಪ್ರಭು, ಕೃಷ್ಣೇಗೌಡ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಈ ವೇಳೆ ರಾಜ್ಯ ಸರ್ಕಾರ ಘೋಷಿಸಿರುವ ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ಸೋಮವಾರ ಆದೇಶ ಹೊರಡಿಸಲಾಗುವುದು. ಪ್ರಾಧಿಕಾರದ ಮೊದಲ ಸಭೆಯನ್ನು ಮಲೆ ಮಹದೇಶ್ವರಬೆಟ್ಟದಲ್ಲೇ ನಡೆಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಇದಕ್ಕೂ ಮುನ್ನ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತ ವತಿಯಿಂದ ಗೌರವ ರಕ್ಷೆಯೊಂದಿಗೆ ಸ್ವಾಗತಿಸಲಾಯಿತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರಿಗೌಡ, ಕೆ.ಸಿ.ಬಲರಾಂ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಸಿ.ಬಸವೇಗೌಡ, ದೇವನೂರು ಶಿವಮಲ್ಲು, ಡಾ.ಬಿ.ಜೆ. ವಿಜಯಕುಮಾರ್, ನಂಜಯ್ಯನ ಮಠ, ಮಂಜುಳಾ ಮಂಜುನಾಥ್, ಆರ್. ಪ್ರಕಾಶ್‌ಕುಮಾರ್,  ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಜಿಪಂ ಸಿಇಒ ಪಿ.ಎ.ಗೋಪಾಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಎಸ್ಪಿ ಅಭಿನವ್ ಅಶೋಕ್ ಖರೆ, ತಹಸೀಲ್ದಾರ್ ನವೀನ್ ಜೋಸೆಫ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement