ನೀರಲ್ಲಿ ಕೊಳೆಯುತ್ತಿದೆ ಕಸ
-ಮಾ. ವೆಂಕಟೇಶ್
ಮೈಸೂರು: ಇದು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 14. ಅರವಿಂದನಗರ ಹೆಸರಿನ ಈ ಬಡಾವಣೆಯಲ್ಲಿ ಮಳೆ ನೀರಿನ ದೊಡ್ಡ ಮೋರಿಯಿದೆ. ಆದರೆ ಈ ಮೋರಿ ಮುಂದಕ್ಕೆ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ನೀರು ನಿಂತು, ಕೊಳೆಯುತ್ತಿರುವ ಕಾರಣ, ಕಸ ಸೇರ್ಪಡೆಯಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.
ರಾಮಕೃಷ್ಣನಗರದಿಂದ ಹಾದು ಬಂದಿರುವ ಮೋರಿಯು ಮಹದೇಶ್ವರ ದೇವಸ್ಥಾನ ಲಿಂಕ್ ರಸ್ತೆ ಮೂಲಕ ಅರವಿಂದನಗರ ಎಂ ಬ್ಲಾಕ್ನಲ್ಲಿಯೂ ಒಂದೆಡೆ ಸಾಗಿದ್ದರೆ. ಮತ್ತೊಂದೆಡೆ ದೇವಯ್ಯನಹುಂಡಿಯ ಸೂರ್ಯ ಬಡಾವಣೆಯವರಿಗೆ ನಿರ್ಮಾಣವಾಗಿದೆ. ಆದರೆ ಅದಕ್ಕೂ ಮುಂದೆ ಖಾಸಗಿ ಬಡಾವಣೆಗಳು ಇರುವ ಕಾರಣ, ಮೋರಿಯ ವಿಸ್ತರಣೆಗೆ ಯೋಜನೆ ರೂಪಿಸದೆ ಇಂಥ ಪರಿಸ್ಥಿತಿ ಎದುರಿಸಬೇಕಿದೆ ಎನ್ನುವುದು ನಿವಾಸಿಗಳ ಅಳಲು. ಈ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ರಾಮಕೃಷ್ಣನಗರ ಜಿ ಬ್ಲಾಕ್ ಬಡಾವಣೆಯ ಮಳೆ ನೀರು ಚರಂಡಿ ಬಿಂದುವಿನಿಂದ ವಿವೇಕಾನಂದನಗರ 5ನೇ ಮುಖ್ಯರಸ್ತೆ ಮೂಲಕ ಶ್ರೀರಾಂಪುರ ರಸ್ತೆ, ಅಲ್ಲಿಂದ ವಿವೇಕಾನಂದ ವೃತ್ತದ ಬಿಂದುವರೆಗೆ. ಆದಿಚುಂಚನಗಿರಿ ರಸ್ತೆ, ಮಹದೇಶ್ವರ ದೇವಸ್ಥಾನ, ಅಲ್ಲಿಂದ ಉತ್ತರಕ್ಕೆ ತಿರುಗಿ ಚಿಕ್ಕಹರದನಹಳ್ಳಿ ಬೇಡರ ಕಣ್ಣಪ್ಪ ದೇವಸ್ಥಾನದವರೆಗೆ. ಪೂರ್ವಕ್ಕೆ ಚಿಕ್ಕಹರದನಹಳ್ಳಿ ಬೇಡರ ಕಣ್ಣಪ್ಪ ದೇವಸ್ಥಾನ ಬಿಂದುವಿನಿಂದ ರೈಲ್ವೆ ಬ್ರಿಡ್ಜ್ ಮುಖಾಂತರ ಮಾನಂದವಾಡಿ ರಸ್ತೆಯ ಟೋಲ್ಗೇಟ್ವರೆಗೆ. ದಕ್ಷಿಣಕ್ಕೆ ಮಾನಂದವಾಡಿ ರಸ್ತೆಯ ಟೇಲುಗೇಟ್ನಿಂದ ದೇವಯ್ಯನಹುಂಡಿ ಮುಖ್ಯ ರಸ್ತೆ, ಮಳೆನೀರು ಚರಂಡಿಯಿಂದ ಹೈಟನ್ಷನ್ ರಸ್ತೆಯವರೆಗೆ, ಶ್ರೀರಾಂಪುರ 2ನೇ ಹಂತದ 1ನೇ ಕ್ರಾಸ್ ಮತ್ತು ಎಸ್ಬಿಎಂ ಬಡಾವಣೆಯ ರಸ್ತೆ ಮೂಲಕ ಲಿಂಗಾಂಬುದಿಕೆರೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸರಹದ್ದು. ಪಶ್ಚಿಮಕ್ಕೆ ಲಿಂಗಾಂಬುದಿ ಕೆರೆಯ ನಗರ ಪಾಲಿಕೆ ಸರಹದ್ದಿನ ಬಿಂದುವಿನಿಂದ ರಾಮಕೃಷ್ಣನಗರ ಬಡಾವಣೆಯ ಜಿ ಬ್ಲಾಕ್ ಮಳೆನೀರು ಚರಂಡಿಯವರೆಗೆ ಒಳಗೊಂಡಿದೆ.
ಈ ಪ್ರದೇಶದಲ್ಲಿ 11 ಸಾವಿರ ಮಂದಿ ಜನಸಂಖ್ಯೆ, 2,500 ಮನೆಗಳು ಹಾಗೂ 75 ಉದ್ದಿಮೆಗಳಿವೆ. ಇಲ್ಲಿ 21 ಮಂದಿ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಪುರುಷ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ ಈ ಮೋರಿ ಸ್ವಚ್ಛತೆಗೆ ಅನಾನುಕೂಲವಾಗಿದೆ. ಈ ಭಾಗದ ಸಂಪೂರ್ಣ ಸ್ವಚ್ಛತೆಗಾಗಿ 40 ಮಂದಿಯಾದರೂ ಪೌರಕಾರ್ಮಿಕರ ಬೇಕಾಗಿದ್ದಾರೆ.
ವಾರ್ಡ್ನ ಚಿಕ್ಕಹರದನಹಳ್ಳಿ ಶಿವನ ದೇವಾಲಯದ ಬಳಿ ಒಂದು ಕಸದ ತೊಟ್ಟಿ ಹಾಗೂ ಅರವಿಂದನಗರದ ನಾಡಿಗರ್ ಭವನದ ಬಳಿ ಒಂದು ಕಸದ ತೊಟ್ಟಿಯಿದೆ. ಇನ್ನೂ ಮೂರು ತೊಟ್ಟಿಯಾದರು ಬೇಕು. ಇಲ್ಲವಾದರೆ ಕಸ ಎಲ್ಲೆಂದರಲ್ಲಿ ಸುರಿಯುತ್ತಾರೆ ಎನ್ನುತ್ತಾರೆ ಸ್ಥಳೀಯ ನಗರ ಪಾಲಿಕೆ ಸದಸ್ಯರು.
ಮನೆ ಮನೆಯಿಂದ ಕಸವನ್ನು ಪ್ರತಿದಿನ ಸಂಗ್ರಹಿಸಲು ಸಿಬ್ಬಂದಿಗೆ ತಿಳಿಸಲಾಗಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ಸಾಗಿಸಲು ಲಾರಿಯ ಕೊರತೆ ಎದುರಾಗಿದೆ. ಒಂದು ವಾರ್ಡ್ಗೆ ಒಂದು ಲಾರಿ ಬೇಕೆ ಬೇಕು. ಪೌರಕಾರ್ಮಿಕರ ಜತೆಗೆ ವಾಹನ ಸೌಲಭ್ಯ ಕಲ್ಪಿಸಿದಾಗ ಪರಿಸರದ ಸ್ವಚ್ಛತೆ ಹಾಗೂ ಕಸ ವಿಲೇವಾರಿ ನೀರಿಕ್ಷಿತ ಮಟ್ಟದಲ್ಲಿ ನಡೆಯಲಿದೆ.
ಈ ಭಾಗದಲ್ಲಿರುವ ದೊಡ್ಡಮೋರಿಯು ವಿಸ್ತರಣೆಯಾಗದ ಕಾರಣ, ಅದರಲ್ಲಿ ನೀರು ನಿಂತು ಕೊಳೆತು ನಾರುತ್ತಿದೆ. ಇದರಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ. ಇದರ ನೀರು ಸರಗವಾಗಿ ಮುಂದುವರಿಯಲು ಚರಂಡಿಯನ್ನು ವಿಸ್ತರಣೆ ಮಾಡಬೇಕು. ಈ ಬಗ್ಗೆ ನಗರ ಪಾಲಿಕೆ ಹಾಗೂ ಎಂಡಿಎ ಆಯುಕ್ತರಿಗೆ ಮನವಿ ಮಾಡಲಾಗಿದ್ದು, ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಸದ ವಿಲೇವಾರಿಗೆ ಅಗತ್ಯ ಪೌರಕಾರ್ಮಿಕರನ್ನು ಒದಗಿಸಬೇಕು. ಇಲ್ಲದೆ ಹೋದರೆ ಬಡಾವಣೆಗಳ ಸ್ವಚ್ಛತೆ ಅಸಾಧ್ಯ.
-ಎಂ.ಬಿ. ಜಗದೀಶ್, ವಾರ್ಡ್ 14, ನಗರ ಪಾಲಿಕೆ ಸದಸ್ಯ