ಕರುಣೆ ತೋರಿದ ವರುಣ
ಎಚ್.ಡಿ. ಕೋಟೆ: ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.
ಒಂದು ತಿಂಗಳಿನ ಹಿಂದೆ ಮುಂಗಾರು ತಾಲೂಕಿಗೆ ಆಗಮಿಸಿದ್ದರೂ ಮಳೆರಾಯ ಮುನಿಸಿಕೊಂಡಂತೆ ಭಾಸವಾಗಿತ್ತು. ಬೆಳೆಗಳೆಲ್ಲ ಒಣಗುವ ಸ್ಥಿತಿ ಎದುರಾಗಿತ್ತು. ರೈತರು ಮಳೆ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದರು. ತಾಲೂಕಿನ ಹಲವಾರು ಗ್ರಾಮಗಳಲ್ಲಿ ವಿವಿಧ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಅಲ್ಲದೇ ಕಪ್ಪೆಗಳ ಮದುವೆಗಳನ್ನು ಮಾಡಿಸಲಾಗಿತ್ತು.
ಪಟ್ಟಣದ ವರ್ತಕರು ಸಹ ಮೊದಲನೇ ಮುಖ್ಯ ರಸ್ತೆಯಲ್ಲಿರುವ ವಾರಾಹಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಅಲ್ಲದೇ ಪಟ್ಟಣ ಸಂತೇಮಾಳದಲ್ಲಿ ಸರ್ಕಸ್ ನಡೆಸುತ್ತಿದ್ದವರನ್ನು ಕೆಲ ರೈತರು ನಿಮ್ಮ ಸರ್ಕಸ್ನಿಂದ ನಮ್ಮ ತಾಲೂಕಿಗೆ ಮಳೆಯಾಗುತ್ತಿಲ್ಲ ಎಂದು ಸರ್ಕಸ್ ನಡೆಸುತ್ತಿದ್ದವರಿಗೆ ದಮ್ಕಿ ಹಾಕಿದ ಘಟನೆಯು ನಡೆದಿತ್ತು. ರೈತರ ಮಾತಿನಂತೆ ಸರ್ಕಸ್ನವರು ಗಂಟೂ ಮೂಟೆ ಕಟ್ಟಿದ್ದರು. ಕಾಕತಾಳಿಯ ಎಂಬಂತೆ ಅವರು ಗಂಟೂ ಮೂಟೆ ಕಟ್ಟಿದಾಗಿನಿಂದ ಮಳೆ ಯಡಬಿಡದೇ ಸುರಿಯುತ್ತಿದ್ದು, ರೈತರ ಮೂಢನಂಬಿಕೆಗೆ ಪುಷ್ಟಿ ನೀಡಿದಂತಿದೆ.
ಸಹಾಯಕ ಕೃಷಿ ನಿರ್ದೇಶಕ ಜಯರಾಮ್ ಮಾತನಾಡಿ, ಎಚ್.ಡಿ. ಕೋಟೆ ತಾಲೂಕಿನಾದ್ಯಂತ ಜೂನ್ ತಿಂಗಳ ಅಂತ್ಯಕ್ಕೆ 323 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕಳೆದ 15 ದಿನಗಳಿಂದ ಮುಂಗಾರು ಕೊಂಚ ದುರ್ಬಲವಾಗಿದ್ದರೂ ನಿಗದಿಗಿಂತ ಹೆಚ್ಚು ಅಂದರೆ 333.4 ಮಿ.ಮೀ. ಮಳೆಯಾಗಿದೆ. ಬೆಳೆಗಳು ಅಲ್ಲಲ್ಲಿ ಒಣಗಲು ಪ್ರಮುಖ ಕಾರಣ, ಮಳೆ ಕಾಲ ಕಾಲಕ್ಕೆ ಸರಿಯಾಗಿ ಆಗದಿರುವುದು, ಅಂದರೆ ಒಂದು ದಿನ ಹೆಚ್ಚು ಮಳೆ ಸುರಿದರೆ ಮತ್ತೆ ಹಲವು ದಿನ ಮಳೆಯೇ ಇಲ್ಲದಾಗಿರುವುದು. ಶನಿವಾರ ರಾತ್ರಿ ತಾಲೂಕಿನಾದ್ಯಂತ ಉತ್ತಮ ಮಳೆ ಬಂದಿದ್ದು, ಬೆಳೆಗಳು ಒಣಗುವ ಭೀತಿ ಇಲ್ಲ ಎಂದು ಹೇಳಿದ್ದಾರೆ.
ಉಕ್ಕಿ ಹರಿಯುತ್ತಿರುವ ಲಕ್ಷ್ಮಣತೀರ್ಥ
ಹುಣಸೂರು: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದೆ. ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆಯಲ್ಲಿ ಒಂದು ಅಡಿಯಷ್ಟು ನೀರು ಹೆಚ್ಚಿದ್ದು. 650 ಕ್ಯೂಸೆಕ್ ನೀರನ್ನು ನಾಲೆಗೆ ಹರಿಬಿಡಲಾಗುತ್ತಿದೆ. ಆ ಮೂಲಕ ತಾಲೂಕಿನ ವಿವಿಧ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ.
ತಾಲೂಕಿನಲ್ಲಿ ಬಿತ್ತನೆ ಕಾರ್ಯ ಜೋರು
ಟಿ. ನರಸೀಪುರ: ತಾಲೂಕಿನಾದ್ಯಂತ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆ, ಖುಷ್ಕಿ ಭೂ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಮುಂಗಾರು ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ ಕಡಿಮೆ ಪ್ರಮಾಣದಲ್ಲಾಗಿದೆ. ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಶ್ರಿತ ಜಮೀನಿನಲ್ಲಿ ರೈತರು ಉತ್ತು ಬಿತ್ತುವ ಕಾರ್ಯದಲ್ಲಿ ಬಿರುಸಿನಿಂದಲೇ ತೊಡಗಿದ್ದಾರೆ. 58,672 ಹೆಕ್ಟೇರ್ ವಿಸ್ತೀರ್ಣವಿರುವ ತಾಲೂಕಿನಲ್ಲಿ 46,785 ಹೆಕ್ಟೇರ್ ಸಾಗುವಳಿ ಪ್ರದೇಶವಿದ್ದು, 16,370 ಹೆಕ್ಟೇರ್ ಖುಷ್ಕಿ ಭೂಮಿ ಇದೆ. ಕಸಬಾ ಹೋಬಳಿ ವ್ಯಾಪ್ತಿಯ ಬನ್ನಹಳ್ಳಿಹುಂಡಿ, ಯರಗನಹಳ್ಳಿ, ವಾಟಾಳು ಸುತ್ತಮುತ್ತಲಿನ ಹೆಚ್ಚಿರುವ ಮಳೆಯಾಶ್ರಿತ ಜಮೀನಿನಲ್ಲಿ ನೆಲಗಡಲೆ (ಶೇಂಗಾ) ಬಿತ್ತನೆ ಕಾರ್ಯ ನಡೆಯುತ್ತಿದೆ. ಕೃಷಿ ಇಲಾಖೆಯಿಂದ 570 ಕ್ವಿಂಟಲ್ ನೆಲಗಡಲೆ ಬಿತ್ತನೆ ಬೀಜ ವಿತರಿಸಲಾಗಿದೆ.
ಸೋಸಲೆ ಹೋಬಳಿ ವ್ಯಾಪ್ತಿಯ ಚಿದರವಳ್ಳಿ, ರಾಮೇಗೌಡನಪುರ, ಮುಡುಕನಪುರ, ಹೊರಳಹಳ್ಳಿ ಹಾಗೂ ನೆರಗ್ಯಾತನಹಳ್ಳಿ ಗ್ರಾಮಗಳ ಹೊಲಗಳಲ್ಲಿ ನೆಲಗಡಲೆ ಸೇರಿದಂತೆ ಮುಸುಕಿನ ಜೋಳ, ಸೂರ್ಯಕಾಂತಿ, ಉದ್ದು, ರಾಗಿ ಹಾಗೂ ಅಲಸಂದೆ ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. 180 ಕ್ವಿಂಟಲ್ ಉದ್ದು, 815 ಕ್ವಿಂಟಲ್ ಅಲಸಂದೆ, 158 ಕ್ವಿಂಟಲ್ ಮುಸುಕಿನ ಜೋಳ, ಹದಿಮೂರು ಕ್ವಿಂಟಲ್ ರಾಗಿ ಹಾಗೂ ಅರ್ಧ ಕ್ವಿಂಟಲ್ ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ವಿತರಿಸಿದೆ.
ಶೇ.12 ರಷ್ಟು ಮಳೆ ಕೊರತೆ: ಕಳೆದ ವರ್ಷದ ವಾಡಿಕೆ ಮಳೆಯ ಹೋಲಿಸಿದರೆ ಪ್ರಸಕ್ತ ವರ್ಷ ಶೇ.12 ರಷ್ಟು ಮಳೆಯ ಕೊರತೆಯಾಗಿದೆ. ವಾಡಿಕೆ ಮಳೆ 321 ಮಿ.ಮೀ ಆಗಬೇಕಿತ್ತು. ಕಳೆದ ವರ್ಷ 247 ಮಿ.ಮೀ ಮಳೆಯಾಗಿತ್ತು. ಜುಲೈವರೆಗೆ 280 ಮಿ.ಮೀ ಮಳೆಯಾಗಿದೆ.
ತಾಂತ್ರಿಕತೆ ಅರಿವು ಮೂಡಿಸಲು ಬೆಳೆ ಪ್ರಾತ್ಯಕ್ಷಿತೆ ಹಮ್ಮಿಕೊಂಡು ರೈತರಿಗೆ ಹೋಬಳಿವಾರು ಎರಡೆರಡು ಕ್ಷೇತ್ರ ಪಾಠಶಾಲೆಗಳನ್ನು ತೆರೆಯಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ಜು.31ರವರೆಗೆ ಕಾಲಾವಕಾಶವಿದೆ. ಬಯಲು ಸೀಮೆಯ ಮುಂಗಾರು ಆರಂಭಕ್ಕೆ ಅಗತ್ಯ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ.
-ಡಾ.ಎನ್.ಕೃಷ್ಣಮೂರ್ತಿ, ಸಹಾಯಕ ಕೃಷಿ ನಿರ್ದೇಶಕ