ಡಾಂಬರೀಕರಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು: ವಾಲ್ಮೀಕಿ ಹಾಗೂ ಆದಿ ಪಂಪ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದವರು ಹುಣಸೂರು ರಸ್ತೆಯಲ್ಲಿರುವ ವಾಲ್ಮೀಕಿ ರಸ್ತೆ ಜಂಕ್ಷನ್ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಡುವಾರಹಳ್ಳಿ ಭಾಗದಿಂದ ಕುಕ್ಕರಹಳ್ಳಿ ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರನ್ನು ತಡೆಯಲು ನಾರಾಯಣಸ್ವಾಮಿ ಬ್ಲಾಕ್ ಬಸ್ ತಂಗುದಾಣದಿಂದ ಹುಣಸೂರು ಮುಖ್ಯರಸ್ತೆ ಸೇರುವ ವಾಲ್ಮೀಕಿ ರಸ್ತೆಯಲ್ಲಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದಿದೆ. ಈ ರಸ್ತೆಗಳಿಗೆ ಇನ್ನೂ ಡಾಂಬರೀಕರಣ ಮಾಡದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿದೆ ಎಂದರು. ಮುಖ್ಯಮಂತ್ರಿಯವರ ವಿಶೇಷ ಅನುದಾನದ ರು. 2 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಈ ಪ್ರದೇಶವು ಮೇಯರ್ ಪ್ರತಿನಿಧಿಸುತ್ತಿರುವ ವಾರ್ಡ್ಗೆ ಸೇರಿದೆಯಾದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಸರಿಯಲ್ಲ ಎಂದರು.
ಪಡುವಾರಹಳ್ಳಿ ತ್ಯಾಜ್ಯ ವೀರನ್ನು ಆದಿಪಂಪ ರಸ್ತೆ- ವಾಲ್ಮೀಕಿ ರಸ್ತೆ- ಹುಣಸೂರು ರಸ್ತೆ- ಕುಕ್ಕರಹಳ್ಳಿ ಕೆರೆ ಮೂಲಕ ರಾಯನಕೆರೆಗೆ ಹರಿಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಇಂದು ಸೆಸ್ಕ್ನಲ್ಲಿ ಜನಜಾಗೃತಿ ಸಭೆ
ಮೈಸೂರು: ಸೆಸ್ಕ್ನ ಕುವೆಂಪುನಗರ ಉಪವಿಭಾಗ ವ್ಯಾಪ್ತಿಯಲ್ಲಿನ ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಜು. 15ರ ಬೆಳಗ್ಗೆ 10.30ಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಏರ್ಪಡಿಸಿದೆ. ಕುವೆಂಪುನಗರ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಭಾಗವಹಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
20 ರಂದು ಸಂಸ್ಕೃತ ಪುಸ್ತಕ ಮೇಳ
ಮೈಸೂರು: ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ 45ನೇ ವಾರ್ಷಿಕೋತ್ಸವ ಸಮಾರಂಭ ಜು. 20ರ ಬೆಳಗ್ಗೆ 10ಕ್ಕೆ ಅಭಿನವ ಶಂಕರಾಲಯ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಡಾ. ಭಾಷ್ಯಂಸ್ವಾಮಿ ಆಶೀರ್ವಚನ ನೀಡುವರು. ಬನ್ನಂಜೆ ಗೋವಿಂದಾಚಾರ್ಯ ಅಧ್ಯಕ್ಷತೆ ವಹಿಸುವರು. ಡಾ.ಕೆ.ಬಿ.ಎಸ್. ರಾಜನ್ ಶಾಸಕ ಎಂ.ಕೆ. ಸೋಮಸೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿದ್ವಾನ್ ಎಚ್.ಎಂ. ಶಿಂಗಪ್ಪ, ವಿದ್ವಾನ್ ಶೇಷಾದ್ರಿ ಅವರನ್ನು ಸನ್ಮಾನಿಸಲಾಗುವುದು. ಸಮಾರಂಭದ ಅಂಗವಾಗಿ ಅಂದು ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಸಂಸ್ಕೃತ ಪುಸ್ತಕ ಮೇಳೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆಗಾಗಿ ದೂ. 2442835 ಸಂಪರ್ಕಿಸಬಹುದು.