ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೃಗಾಲಯದ ಹುಲಿ ಮರಿಗಳಿಗೆ ನಾಮಕರಣ

Srinivasa Murthy VN
Updated On : 30 Jul 2014, 1:07 am

ಮೈಸೂರು:  ನಗರದ ಶ್ರೀ ಚಾಮರಾಜೇಂದ್ರ ಮೃಗಾಯಲದಲ್ಲಿ ಮಂಗಳವಾರ ವಿಶ್ವ ವ್ಯಾಘ್ರ ದಿನಾಚರಣೆ ಅಂಗವಾಗಿ ಬ್ರಹ್ಮ ಮತ್ತು ಮಾನ್ಯಗೆ ಜನಿಸಿದ ಮೂರು ಹುಲಿಗಳಿಗೆ ವಾಯುಪುತ್ರ, ಮೃತ್ಯುಂಜಯ ಮತ್ತು ಪೃಥ್ವಿ ಎಂದು ನಾಮಕರಣ ಮಾಡಲಾಯಿತು.
1 ವರ್ಷ 2 ತಿಂಗಳ ಈ ಮರಿಗಳಿಗೆ ನಾಮಕರಣ ಮಾಡಲು ಸೂಕ್ತ ಹೆಸರನ್ನು ಸೂಚಿಸಲು ಸಾರ್ವಜನಿಕರಿಗೆ ತಿಳಿಸಲಾಗಿತ್ತು. ಗಂಡು ಹುಲಿ ಬ್ರಹ್ಮ ಹಾಗೂ ಬಿಳಿ ಹುಲಿ ಮಾನ್ಯಗೆ 2013ರ ಜೂ.4 ರಂದು ಮೂರು ಗಂಡು ಮರಿಗಳು ಜನಿಸಿದ್ದವು. ಶಿವ, ಬ್ರಹ್ಮ, ಅನುಸೂಯ, ಕಾವೇರಿ, ಅಮೃತಾ, ಅಗಸ್ಥ್ಯ, ಮಾನ್ಯ, ಅಮೂಲ್ಯ, ಲಕ್ಷ್ಮಣ ಜೊತೆಗೆ ಈ ಮೂರು ಮರಿಗಳೂ ಸೇರಿ ಮೃಗಾಲಯದಲ್ಲಿ ಈಗ ಒಟ್ಟು 12 ಮರಿಗಳಿವೆ.
ಸಾರ್ವಜನಿಕರು ಸೂಚಿಸಿದ ಹೆಸರನ್ನು ಲಾಟರಿ ಮೂಲಕ ಎತ್ತಿ ವಾಯುಪುತ್ರ, ಮೃತ್ಯುಂಜಯ ಹಾಗೂ ಪೃಥ್ವಿ ಎಂದು ನಾಮಕರಣ ಮಾಡಲಾಯಿತು. ಮೂರೂ ಮರಿಗಳು ಆರೋಗ್ಯವಾಗಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಜಾಗೃತಿ ಕಾರ್ಯಕ್ರಮ: ಹುಲಿಗಳ ಸಂತತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ವ್ಯಾಘ್ರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯವು ಹಲವು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ.
ಅಳಿವಿನಂಚಿನಲ್ಲಿರುವ ಹುಲಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜುಲೈ 29 ರಂದು ವಿಶ್ವ ವ್ಯಾಘ್ರ ದಿನಾಚರಣೆ ಆಚರಿಸಲಾಗುತ್ತಿದೆ. ಹುಲಿಗಳ ವಾಸಸ್ಥಾನ, ಆಹಾರದ ಕ್ರಮ, ಕಳ್ಳಬೇಟೆ ತಡೆಗಟ್ಟಿ ಅವುಗಳನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವುದಾಗಿ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳಿದರು. ರಾಜ್ಯದಲ್ಲಿ ಹುಲಿಗಳ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ, ಅವುಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿವೆ. ಬಿಳಿಗಿರಿರಂಗನ ಬೆಟ್ಟ, ಬಂಡಿಪುರ, ನಾಗರಹೊಳೆ, ಭದ್ರ ಅಭಯಾರಣ್ಯ ಸೇರಿದಂತೆ ರಾಜ್ಯದ ಪ್ರಮುಖ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಸುಮಾರು 300 ಇದೆ ಎಂದರು.
ಹುಲಿ ಪಾಲಕರು ಏನಂತಾರೆ?: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 13 ವರ್ಷಗಳಿಂದ ಹುಲಿಗಳ ಪಾಲನೆ, ಪೋಷಣೆಯಲ್ಲಿ ತೊಡಗುವ ಪಾಲಕ ಗೋವಿಂದ ಮಾತನಾಡಿ, ಮೃಗಾಲಯದ ಎಲ್ಲ ಹುಲಿಗಳೊಂದಿಗೆ ನಿರ್ಭಯವಾಗಿ ಸ್ನೇಹದಿಂದ ವರ್ತಿಸುತ್ತೇನೆ. ಇದುವರೆಗೂ ಅವುಗಳಿಂದ ಯಾವುದೆ ತೊಂದರೆ ಆಗಿಲ್ಲ. ಮೃಗಾಲಯದಲ್ಲಿ ಹುಲಿಗಳ ಆಯಸ್ಸು ಹೆಚ್ಚಿರುತ್ತದೆ. ವಾರದಲ್ಲಿ ಒಂದು ದಿನ ಅವುಗಳಿಗೆ ಆಹಾರ ನೀಡುವುದಿಲ್ಲ. ಇದರಿಂದ ಮಾರನೇ ದಿನ ಅವು ಹೆಚ್ಚು ಆಹಾರ ಸೇವಿಸುತ್ತವೆ. ಸದಾ ಅವುಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತದೆ. ಹುಲಿ ಮತ್ತು ಅವುಗಳ ಮನೆಯನ್ನು ಸ್ವಚ್ಛವಾಗಿಡುವ ಮೂಲಕ ಯಾವುದೆ ಕಾಯಿಲೆ ಬಾರದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು.
ಮೃಗಾಲಯದಲ್ಲಿ ಹುಲಿಗಳ ಸಂತತಿ ಉತ್ತಮವಾಗಿದೆ. ಬೇರೆ ಮೃಗಾಲಯಗಳಿಗೆ ಕೆಲವು ಮರಿಗಳನ್ನು ನೀಡಲಾಗುತ್ತದೆ. ಮರಿಗಳು ಜನಿಸಿದ ಎರಡು ತಿಂಗಳವರೆಗೆ ಅವು ಮಾಂಸ ತಿನ್ನುವುದಿಲ್ಲ. ನಂತರ ತಾಯಿಯೊಂದಿಗೆ ಸೇರಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement