ಸೆ. 1 ರಿಂದ ಮೈಸೂರಿಗೆ ವಿಮಾನ ಸೇವೆ ಸ್ಥಗಿತ
ಮೈಸೂರು: ಮೈಸೂರಿಗೆ ವಿಮಾನ ಸಂಪರ್ಕ ಮುಂದುವರೆಯಲು ಮತ್ತೊಂದು ವಿಘ್ನ ಎದುರಾಗಿದೆ. ಇದುವರೆಗೆ ದಿನಕ್ಕೊಮ್ಮೆ ಮೈಸೂರಿಗೆ ಆಗಮಿಸುತ್ತಿದ್ದ ಸ್ಪೈಸ್ ಜೆಟ್ ಸೆ. 1 ರಿಂದ ತನ್ನ ಸೇವೆ ನಿಲ್ಲಿಸಲಿದೆ. ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವಾಗಲೆ ಸ್ಪೈಸ್ ಜೆಟ್ ತನ್ನ ಸೇವೆ ನಿಲ್ಲಿಸುವ ಸೂಚನೆ ನೀಡಿರುವುದು ನಗರ ಪ್ರವಾಸೋದ್ಯಮ ಮತ್ತು ಉದ್ಯಮ ಕ್ಷೇತ್ರಕ್ಕೆ ತೀವ್ರ ಹಿನ್ನೆಡೆಯನ್ನುಂಟು ಮಾಡಿದೆ. ಈಗಾಗಲೆ ಸಂಸ್ಥೆಯ ಸ್ಥಳೀಯ ಪ್ರತಿನಿಧಿಗಳು ವಿಮಾನ ಸೇವೆ ಸ್ಥಗಿತಗೊಳಿಸುವ ಸಂದೇಶ ನೀಡಿದ್ದಾರೆ. ಪ್ರಯಾಣಿಕರ ಕೊರತೆಯನ್ನು ಮುಂದಿಟ್ಟುಕೊಂಡು ಸ್ಪೈಸ್ ಜೆಟ್ ತನ್ನ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿದುಬಂದಿದೆ. ಈ ಹಿಂದೆ ಕಿಂಗ್ಫಿಶರ್ ಸಹ ತನ್ನ ಸೇವೆ ನಿಲ್ಲಿಸಿತ್ತು. ಪ್ರತಿ ವರ್ಷ ದಸರಾ ವೇಳೆ ಸಂಸದರು ವಿಮಾನ ನಿಲ್ದಾಣಕ್ಕೆ ತೆರಳಿ ವಿಮಾನ ಸೌಲಭ್ಯ ಪುನರ್ ಆರಂಭಕ್ಕೆ ಚಾಲನೆ ನೀಡುವುದು ಸಾಮಾನ್ಯವಾಗಿದೆ. ಅಂತೆಯೆ ಈ ಬಾರಿಯೂ ಆಗಬಹುದಾದ ಸೂಚನೆ ಇದೆ. ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಅವರು ಆ. 2 ರಂದು ಮೈಸೂರಿಗೆ ಭೇಟಿ ನೀಡಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕುರಿತು ಚರ್ಚಿಸುವರು.