ಯಾಚೇಗೌಡನಹಳ್ಳಿಯಲ್ಲಿ ಗುಂಪು ಘರ್ಷಣೆ: ಐವರಿಗೆ ಗಾಯ
ಮೈಸೂರು: ಡೇರಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಸಲ್ಲಿಸುವ ಜಾಗ ವಿವಾದ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಯಾಚೇಗೌಡನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿದೆ.
ಯಾಚೇಗೌಡನಹಳ್ಳಿಯಲ್ಲಿ ವಾಲ್ಮೀಕಿ ನಾಯಕರ ಸಂಘದವರು ಫಲಕ ಹಾಕಿದ್ದ ಜಾಗದಲ್ಲೇ ಹಾಲಿನ ಡೇರಿ ನಿರ್ಮಾಣಕ್ಕೆ ಶಾಸಕ ಜಿ.ಟಿ.ದೇವೇಗೌಡ ಅವರು ಗುದ್ದಲಿಪೂಜೆ ನೆರವೇರಿಸಲು ತೆರಳಿದ್ದರು. ಈ ವೇಳೆ ತಮ್ಮ ಜನಾಂಗಕ್ಕೆ ಮೀಸಲಿಟ್ಟಿರುವ ಜಾಗವನ್ನು ಬಿಟ್ಟು ಪಕ್ಕದ ಜಾಗದಲ್ಲಿ ಗುದ್ದಲಿಪೂಜೆ ನೆರವೇರಿಸುವಂತೆ ಕೆಲವರು ತಕಾರರು ತೆಗೆದರು. ಈ ವೇಳೆ ಮಾತಿನ ಚಕಮಕಿ ನಡೆದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಯಾಚೇಗೌಡನಹಳ್ಳಿಯ ಸೀನನಾಯಕ, ಉಮೇಶ್, ನಾಗರಾಜ್, ಕೆಂಪನಾಯಕ ಮತ್ತು ಚಿಕ್ಕತಾಯಮ್ಮ ಎಂಬವರು ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಾರೆ.ಅದೇ ಗ್ರಾಮದ ನಂಜುಂಡೇಗೌಡ, ಶಿವಣ್ಣ, ಲಕ್ಷ್ಮಣನಾಯಕ, ತಮ್ಮಣ್ಣ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗಾಯಗೊಂಡವರು ದೂರಿದ್ದಾರೆ. ಈ ಸಂಬಂಧ ಎರಡು ಗುಂಪಿನವರು ದೂರು ನೀಡಿದ್ದು, ಇಲವಾಲ ಠಾಣೆ ಎಸ್‌ಐ ಟಿ.ಎಂ. ಪುನೀತ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಷ್ಟೆಲ್ಲ ಗಲಾಟೆಯ ನಡುವೆಯು ಶಾಸಕ ಜಿ.ಟಿ. ದೇವೇಗೌಡ ಅವರು ಪೂರ್ವನಿಗದಿತ ಜಾಗದಲ್ಲೇ ಡೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಡಾ. ಪುಷ್ಪಾವತಿಗೆ ಜಿಪಂ ಅಧ್ಯಕ್ಷ ಸ್ಥಾನ ನೀಡಿ
ಮೈಸೂರು: ಧರ್ಮಾಪುರ ಜಿಪಂ ಕ್ಷೇತ್ರದ ಸದಸ್ಯೆ ಡಾ.ಪುಷ್ಪಾವತಿ ಅಮರನಾಥ್ ಅವರನ್ನು ಮೈಸೂರು ಜಿಪಂ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹರಿಹರ ಆನಂದಸ್ವಾಮಿ ಕೋರಿದ್ದಾರೆ. ಜಿಪಂ ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಡಾ.ಪುಷ್ಪಾವತಿ ಅವರಿಗೆ ಆ ಸ್ಥಾನ ನೀಡಬೇಕು. ಸಮರ್ಥರು, ವಿದ್ಯಾವಂತರೂ, ಪರಿಸರ ಪ್ರೇಮಿಯೂ ಆದ ಅವರು ಕ್ರೀಯಾಶೀಲರಾಗಿದ್ದಾರೆ. ಆದ್ದರಿಂದ ಅವರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಸಮರ್ಥರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎನ್‌ಟಿಎಂ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುವಂತೆ ಸರ್ಕಾರ ಕೈಗೊಂಡ ತೀರ್ಮಾನ ಸ್ವಾಗತಾರ್ಹ. ಇದರಿಂದ ಅನೇಕ ಬಡ ಮಕ್ಕಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಆಶ್ರಮದ ಪರ ಇರುವ ಸಾಹಿತಿಗಳು ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕು. ಅಲ್ಲದೆ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ದೂರಿದರು. ದೇವರಾಜು, ರಮೇಶ್ ಇದ್ದರು.