ಸಂಚಾರ ಪೊಲೀಸರ ವಿರುದ್ಧ ದೊರೆಗೆ ದೂರು
ಕ.ಪ್ರ.ವಾರ್ತೆ ಮೈಸೂರು ಜೂ.1
ನಗರ ಸಂಚಾರ ಪೊಲೀಸರ ಕ್ರಮದಿಂದ ನೊಂದಿರುವ ಟೆಂಪೋ, ಮ್ಯಾಕ್ಸಿಕ್ಯಾಬ್ ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಸಲ್ಲಿಸಿ ತಮ್ಮ ಸಮಸ್ಯೆ ಪರಿಹರಿಸುವಂತೆ ಕೋರಿದರು.
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮುಖ್ಯಮಂತ್ರಿಯವರ ನಿವಾಸದ ಎದುರು ಭಾನುವಾರ ನಡೆದ ಜನತಾ ದರ್ಶನದಲ್ಲಿ ಸಂಚಾರ ಪೊಲೀಸರ ಕ್ರಮಕ್ಕೆ ಚಾಲಕರು ಮತ್ತು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ನಗರಕ್ಕೆ ಟೆಂಪೋ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ಪ್ರವೇಶ ನಿರ್ಬಂಧಿಸಲಾಗಿದೆ. ಸಂಚಾರ ಪೊಲೀಸರು ಸಾವಿರಾರು ರು. ದಂಡ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಟೆಂಪೋ ಮತ್ತು ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು, ಖಾಲಿಯಾಗಿ ಓಡಾಡುವ ಮ್ಯಾಕ್ಸಿಕ್ಯಾಬ್, ಟೆಂಪೋಗಳಿಗೆ ದಂಡ ವಿಧಿಸಬಾರದು. ಜೊತೆಗೆ ಈ ವಾಹನ ಸಂಚಾರವನ್ನು ವರ್ತುಲ ರಸ್ತೆವರೆಗೆ ಸೀಮಿತಗೊಳಿಸದೆ ನಗರದ ಸಮೀಪಕ್ಕೆ ಬರಲು ಅವಕಾಶ ಮಾಡಿಕೊಡುವಂತೆ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರಿಗೆ ಸೂಚಿಸಿದರು.
ಆಟೋ ಚಾಲಕರ ಗೋಳು: ನಗರದಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ನಾಲ್ಕಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಕರೆದೊಯ್ದರೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರಿಗೆ ಸಂಚಾರ ಪೊಲೀಸರ ತೊಂದರೆ ತಪ್ಪಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಕೋರಿದರು.
ನಾಲ್ಕು ಜನರನ್ನು ಕರೆದೊಯ್ದರೆ ಆಟೋ ಚಾಲಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಆಟೋ ಚಾಲಕರಿಗೆ ತೊಂದರೆ ನೀಡಬಾರದು. ಆಟೋ ಚಾಲಕರು ಸುರಕ್ಷತೆಯಿಂದ ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗುವತ್ತ ಗಮನ ಹರಿಸುವಂತೆ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.
ಜನರ ಸಮಸ್ಯೆ ಕೇಳಿದ ಸಿದ್ದರಾಮಯ್ಯ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸ ಎದುರು ಜಮಾಯಿಸಿದ್ದ ನೂರಾರು ಜನರಿಂದ ಭಾನುವಾರ ಮನವಿ ಸ್ವೀಕರಿಸಿದರು.
ತಮಗೆ ವರ್ಗಾವಣೆ ಮಾಡಿಸುವಂತೆ ಕೋರಿ ಹಲವಾರು ಸರ್ಕಾರಿ ನೌಕರರು ಮನವಿ ಸಲ್ಲಿಸಿದರು. ತಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸುವಂತೆ ಕೆಲವರು, ತಮಗೆ ಉದ್ಯೋಗ ಕೊಡಿಸುವಂತೆ ಹಲವರು ಅರ್ಜಿ ಸಲ್ಲಿಸಿದರು. ಇವರಲ್ಲಿ ಬಹುತೇಕರು ಸರ್ಕಾರಿ ನೌಕರಿ ಬಯಸಿ ಬಂದವರೇ ಹೆಚ್ಚಾಗಿದ್ದರು.
ವಿವಿಧ ಅನಾರೋಗ್ಯದಿಂದ ಬಳಲುತ್ತಿರುವವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಕೆಲವರು ಮನವಿ ಸಲ್ಲಿಸಿದರು. ಅನಾರೋಗ್ಯದಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಹಣ ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದರು.
ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಿಸಿ, ನಿಗಮ ಮಂಡಳಿಗಳಿಗೆ ನೇಮಿಸಿ, ಗುತ್ತಿಗೆ ನೌಕರರನ್ನು ಕಾಯಂಗೊಳಿಸಿ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.
ನಾಗವಾಲದಲ್ಲಿ ಘರ್ಷಣೆ: ಮೈಸೂರು ತಾಲೂಕಿನ ನಾಗವಾಲ ಗ್ರಾಮದಲ್ಲಿ ಕ್ಷುಲ್ಲಕ ಕಾರಣಗಳಿಂದ ಎರಡು ಕೋಮಿನ ನಡುವೆ ಘರ್ಷಣೆ ನಡೆದಿದೆ. ಗ್ರಾಮದ ಗ್ರಾಪಂ ಸದಸ್ಯರು ಇಬ್ಬರು ಸೇರಿದಂತೆ ಗುಂಪೊಂದು ಮತ್ತೊಂದು ಕೋಮಿನ ಜನರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.
ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಮಾಜಿ ಅಧ್ಯಕ್ಷ ಕೆ.ಮರಿಗೌಡ, ಎಂಡಿಎ ಆಯುಕ್ತ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಉಪ ವಿಭಾಗಾಧಿಕಾರಿ ಬಸವರಾಜು ಇದ್ದರು.
ಮ್ಯಾಕ್ಸಿಕ್ಯಾಬ್ ಸಂಚಾರಕ್ಕೆ ಅವಕಾಶ ನೀಡದಿದ್ದರೆ ಪ್ರತಿಭಟನೆ
ಮೈಸೂರು: ನಗರದಲ್ಲಿ ಮ್ಯಾಕ್ಸಿಕ್ಯಾಬ್ ಸಂಚಾರ ನಿರ್ಬಂಧಿಸಿರುವ ಪೊಲೀಸರ ಧೋರಣೆ ಬದಲಿಸದಿದ್ದರೆ ಪ್ರತಿಭಟಿಸುವುದಾಗಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಎಚ್ಚರಿಸಿದರು.
ಆರ್ಥಿಕವಾಗಿ ಹಿಂದುಳಿದವರು ಸಾಲ ಮಾಡಿ ವಾಹನ ಖರೀದಿಸಿ ಅದರಿಂದ ಬರುವ ಹಣದಲ್ಲಿ ಸಾಲ ತೀರಿಸಿಕೊಂಡು ಮತ್ತು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಪೊಲೀಸರು ನಗರ ವ್ಯಾಪ್ತಿಯಲ್ಲಿ ಮ್ಯಾಕ್ಸಿಕ್ಯಾಬ್ ಸಂಚಾರ ನಿರ್ಬಂಧಿಸಿದರೆ ಅವರ ಪಾಡೇನು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಸುಮಾರು 25 ವರ್ಷಗಳಿಂದ 300ಕ್ಕೂ ಹೆಚ್ಚು ಮ್ಯಾಕ್ಸಿಕ್ಯಾಬ್‌ಗಳು ಸಂಚರಿಸುತ್ತಿವೆ. ಇವುಗಳಿಂದ ಸರ್ಕಾರಕ್ಕೆ ಮೂರು ತಿಂಗಳಿಗೊಮ್ಮೆ 8 ರಿಂದ 10 ಸಾವಿರ ತೆರಿಗೆ ಸಂದಾಯವಾಗುತ್ತಿದೆ. ಆದ್ದರಿಂದ ಈ ಬಗ್ಗೆ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸುವುದಾಗಿ ತಿಳಿಸುತ್ತೇನೆ. ವಾರದೊಳಗೆ ಈ ಆದೇಶ ಹಿಂದಕ್ಕೆ ಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಮೈಸೂರು- ಮಂಡ್ಯ ಮ್ಯಾಕ್ಸಿಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ ಶಿವಪ್ರಕಾಶ್, ಸುಂದರೇಶ್, ಪುರುಷೋತ್ತಮ್, ಶ್ರೀನಿವಾಸ್ ಇದ್ದರು.