ಅನಿಲ ಸಾಗಣೆ ಕಾಮಗಾರಿ ತಡೆಯಿರಿ
ಕೆ.ಆರ್. ನಗರ: ತಾಲೂಕು ವ್ಯಾಪ್ತಿಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅವರು ಕೈಗೊಂಡಿರುವ ಅನಿಲ ಸಾಗಣೆ ಕೊಳವೆ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸಭೆ ಕರೆದು, ಸೂಕ್ತ ಭೂ ಪರಿಹಾರ ನಿಗದಿ ಮಾಡುವವರೆಗೂ ಸ್ಥಗಿತಗೊಳಿಸಬೇಕೆಂದು ಶಾಸಕ ಸಾ.ರಾ.ಮಹೇಶ್ ಆದೇಶಿಸಿದರು.
ಸಾಲಿಗ್ರಾಮದ ಪ್ರವಾಸಿ ಮಂದಿರದಲ್ಲಿ ಸೋಮವಾರ ಭೂ ಮಾಲೀಕರು, ರೈತರು ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಭೂಮಿ ಕಳೆದುಕೊಳ್ಳುವ ರೈತರಿಗೆ ಭೂ ಪರಿಹಾರದ ಜತೆಗೆ ಬೆಳೆ ಪರಿಹಾರವನ್ನು ಕೊಡಬೇಕೆಂದು ಸೂಚಿಸಿದ ಶಾಸಕರು, ಯೋಜನೆಗೆ ಒಳಪಡುವ ಭೂಮಿ ಶಾಶ್ವತವಾಗಿ ರೈತರಿಗೆ ಸೇರಿದ್ದು ಎಂದು ಪತ್ರ ನೀಡಬೇಕೆಂದು ತಾಕೀತು ಮಾಡಿದರು.
ಸಾರ್ವಜನಿಕ ಉದ್ದೇಶಕ್ಕೆ ಭೂಮಿ ನೀಡಲು ಮತ್ತು ಪಡೆದುಕೊಳ್ಳಲು ವೈಯಕ್ತಿಕವಾಗಿ ನನ್ನ ತಕರಾರಿಲ್ಲ. ಆದರೆ ಸೂಕ್ತ ಪರಿಹಾರ ನೀಡದೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿರುವುದಕ್ಕೆ ವಿರೋಧವಿದೆ. ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಹೇಳಿದರು.
ಅನಾಹುತಕ್ಕೆ ಕಂಪನಿಯೇ ಜವಾಬ್ದಾರಿ: ರೈತರಿಗೆ ಪರಿಹಾರ ನೀಡದೆ ಕಾಮಗಾರಿ ಮುಂದುವರಿಸಿದರೆ ಮುಂದಾಗುವ ಅನಾಹುತಕ್ಕೆ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಯ ಅಧಿಕಾರಿಗಳೆ ಹೊಣೆಗಾರರಾಬೇಕಾಗುತ್ತದೆ ಎಂದು ಎಚ್ಚರಿಸಿದ ಶಾಸಕರು, ಪರಿಹಾರವನ್ನೇ ನೀಡದೆ ಕಾಮಗಾರಿ ಆರಂಭಿಸಲು ನಿಮಗೆ ಅಧಿಕಾರ ನೀಡಿದ್ದು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಾ.ರಾ. ಮಹೇಶ್, ಅನಿಲ ಸಾಗಣೆ ಕೊಳವೆ ಮಾರ್ಗದ ನಿರ್ಮಾಣ ಕಾಮಗಾರಿಗೆ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಲು ಸಭೆ ಕರೆದು, ಕಂಪನಿಯ ಅಧಿಕಾರಿಗಳು ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ರೈತರಿಗೆ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಬೇಕೆಂದು ಸೂಚಿಸಿದರು.
ತಾಲೂಕಿನ ಚಿಕ್ಕನಾಯಕನಹಳ್ಳಿ, ಮಳಲಿ, ಬೆಟ್ಟಹಳ್ಳಿ, ಬಳ್ಳೂರು, ಮನುಗನಹಳ್ಳಿ, ಮುಂಡೂರು, ಲಕ್ಷ್ಮೀಪುರ, ಹಳಿಯೂರು, ಹೊಸೂರು, ಕೆಸ್ತೂರು, ಸಾಲೆಕೊಪ್ಪಲು ಮತ್ತು ಸಾಲಿಗ್ರಾಮದ ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಕೃಷ್ಣೆಗೌಡ, ಕಂದಾಯಾಧಿಕಾರಿ ಪ್ರಭಾಕರ್, ಮುಖಂಡರಾದ ಎಸ್.ಪಿ.ತಮ್ಮಯ್ಯ, ಗೋಪಾಲ್, ಮಹೇಶ್, ಆನಂದ್, ಜಗದೀಶ್ ಇದ್ದರು.