ಅಲೆಮಾರಿ ಜನಾಂಗದವರ ಸಾಧನೆ
ಮೈಸೂರು: ಒಂದು ಕಡೆ ನೆಲೆ ನಿಲ್ಲದ ಅಲೆಮಾರಿ ಜನಾಂಗಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿನಿಯರು ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆಯ ವಿದ್ಯಾವಾರಿಧಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಜಿ.ನವ್ಯಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.84.32 ಅಂಕ ಗಳಿಸಿದ್ದಾಳೆ. ಈಕೆ ಕನ್ನಡದಲ್ಲಿ 118, ಇಂಗ್ಲಿಷ್‌ನಲ್ಲಿ 75, ಹಿಂದಿಯಲ್ಲಿ 90, ಗಣಿತದಲ್ಲಿ 74, ವಿಜ್ಞಾನದಲ್ಲಿ 82, ಸಮಾಜದಲ್ಲಿ 88 ಒಟ್ಟು 625ಕ್ಕೆ 527 ಅಂಕ ಗಳಿಸಿದ್ದಾರೆ. ಉನ್ನತ ಶ್ರೇಣಿಗೆ 5 ಅಂಕಗಳು ಕಡಿಮೆ. ನನಗೆ ಉನ್ನತ ಶ್ರೇಣಿ ಬರಬೇಕಿತ್ತು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎನ್ನುವ ನವ್ಯಾ ಈಗ ಮಹಾರಾಣಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ. ಮುಂದೆ ಎಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದಾರೆ. ಇವರ ತಂದೆ ಮೈಸೂರು ತಾಲೂಕಿನ ಯಾಚೇನಹಳ್ಳಿಯ ವಿ.ಗುರುಮೂರ್ತಿ, ತಾಯಿ ಎಂ.ಕೆ. ರೇಣುಕಾ. ತಂದೆ ಹಳೆಬೀಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮೈಸೂರಿನ ಸದ್ವಿದ್ಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಶೋದಾ ಶೇ.81.66 ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. ಈಕೆ ಕನ್ನಡದಲ್ಲಿ 80, ಇಂಗ್ಲಿಷ್‌ನಲ್ಲಿ 84, ಭೌತಶಾಸ್ತ್ರದಲ್ಲಿ 72, ರಸಾಯನಶಾಸ್ತ್ರದಲ್ಲಿ 77, ಗಣಿತದಲ್ಲಿ 86, ಜೀವಶಾಸ್ತ್ರದಲ್ಲಿ 91 ಒಟ್ಟು 600ಕ್ಕೆ 490 ಅಂಕಗಳಿಸಿದ್ದಾರೆ. ಪ್ರಸ್ತುತ ಸಿಇಟಿ ಪರೀಕ್ಷೆ ಬರೆದಿದ್ದು, ಮುಂದೆ ಎಂಬಿಬಿಎಸ್ ಓದುವ ಗುರಿ ಇದೆ. ಈಕೆ ಏಕಲವ್ಯ ನಗರದ ಕೆ.ವಿ. ರಾಜು ಹಾಗೂ ಪ್ರೇಮಾ ಅವರ ಪುತ್ರಿ. ಕೆ.ವಿ. ರಾಜು ಗಾರೆ ಕೆಲಸಗಾರ.
ರೋಗಗ್ರಸ್ತ ಕೈಗಾರಿಕೆಗಳ ಪುನಶ್ಚೇತನ ಯೋಜನೆ ಬಳಸಿ
ಮೈಸೂರು: ಜಿಲ್ಲೆಯಲ್ಲಿ 26 ಸಾವಿರ ಸಣ್ಣ ಕೈಗಾರಿಕೆಗಳಿದ್ದು, ಶೇ.30 ರಷ್ಟು ಕೈಗಾರಿಕೆಗಳು ರೋಗಗ್ರಸ್ತವಾಗಿವೆ. ಇವುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಿದೆ.
ಇವುಗಳ ಸದ್ಬಳಕೆಯಿಂದ ಸದೃಢ ಕೈಗಾರಿಕೆಗಳನ್ನಾಗಿಸಲು ಉದ್ಯಮಿಗಳು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರ ಜೊತೆಗೂಡಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಶಂಕರ್ ಕರೆ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಮೈಸೂರು ಜಿಲ್ಲಾ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರೋಗಗ್ರಸ್ಥ ಕೈಗಾರಿಕೆಗಳ ಪುನಶ್ಚೇತನಾ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೈಸೂರು ಜಿಲ್ಲಾ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಮಾತನಾಡಿ, ರೋಗಗ್ರಸ್ಥ ಕೈಗಾರಿಕೆಗಳ ಪುನಶ್ಚೇತನ ಯೋಜನೆಯ ಜಾರಿ ಬ್ಯಾಂಕ್‌ಗಳ ನಿರಾಸಕ್ತಿಯಿಂದಾಗಿ ಹಿನ್ನಡೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗದರ್ಶಿ ಸೂತ್ರಗಳು, ನೀತಿಗಳು, ಯೋಜನೆಗಳನ್ನು ಬ್ಯಾಂಕ್‌ಗಳು ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು. ಕಾರ್ಪೊರೇಷನ್ ಬ್ಯಾಂಕ್ ಲಕ್ಷ್ಮೀಪುರಂ ಶಾಖೆಯ ಹಿರಿಯ ವ್ಯವಸ್ಥಾಪಕ ಸಿ.ಕನಕರಾಜ್ ಮಾತನಾಡಿ, ಕೈಗಾರಿಕೆ ಮುನ್ನಡೆಸಲು ಅಗತ್ಯ ಮಾಹಿತಿ, ತರಬೇತಿ ಮತ್ತು ಅಗತ್ಯತೆ ಆಧಾರಿತ ಸಾಲ ನಿಗದಿತ ಅವಧಿಯಲ್ಲಿ ದೊರೆತಾಗ ಮಾತ್ರ ಸಣ್ಣ ಕೈಗಾರಿಕೆಗಳು ರೋಗಗ್ರಸ್ಥವಾಗುವುದನ್ನು ತಪ್ಪಿಸಬಹುದು. ಇದಕ್ಕೆ ಪೂರಕವಾಗಿ ಕಾರ್ಪೊರೇಶನ್ ಬ್ಯಾಂಕ್ ಲಕ್ಷ್ಮೀಪುರಂ ಶಾಖೆಯು ಸಂಕಲ್ಪ ಎಸ್.ಎಂ.ಇ ಕ್ಲಬ್ ಪ್ರಾರಂಭಿಸಿ, ಕ್ಲಬ್‌ನ ಸಭೆಯಲ್ಲಿ ಕೈಗಾರಿಕಾ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಈ ಕಾರಣ ಕೈಗಾರಿಕಾ ಸಮಸ್ಯೆಗಳನ್ನು ಸವಾಲನ್ನಾಗಿಸಿ ಮುನ್ನಡೆದು ಉದ್ಯಮಿಗಳು ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ರೋಗಗ್ರಸ್ಥ ಕೈಗಾರಿಕೆಗಳ ಖಾತೆ ಇಲ್ಲದಂತಾಗಿದೆ ಎಂದು ತಿಳಿಸಿದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸದಸ್ಯ ಸದಾಶಿವ, ಆರ್.ಕೆ. ವೀಟಾ ಆಹಾರೋತ್ಪನ್ನ ಕೈಗಾರಿಕೆಯ ಪ್ರಕಾಶ್ ಮತ್ತು ಪ್ರಿಸಮ್ ಡೈಮಂಡ್ ಟೂಲ್ಸ್‌ನ ರಾಧಾಕೃಷ್ಣ ಮಾತಾಡಿದರು. ಫಣೀಂದ್ರರ ಸ್ವಾಗತಿಸಿದರು ಶ್ರೀನಿವಾಸ್ ವಂದಿಸಿದರು.