ಜಿಗಜಿಣಗಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಮೈಸೂರು: ಕೇಂದ್ರ ಸಚಿವ ಸಂಪುಟದಲ್ಲಿ ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಡಾ.ಬಾಬು ಜಗಜೀವನರಾಮ್ ಚರ್ಮ ಕುಶಲ ಕಾರ್ಮಿಕರ ಸಂಘ ಆಗ್ರಹಿಸಿದೆ.
ಮಾದಿಗ ಸಮುದಾಯಕ್ಕೆ ಸೇರಿದ ರಮೇಶ್ ಜಿಗಜಿಣಗಿ ಅವರು ಹಲವು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂದು ಸಂಘದ ಅಧ್ಯಕ್ಷ ಟಿ.ನಾರಾಯಣ ಒತ್ತಾಯಿಸಿದ್ದಾರೆ.
ಅಭಿನಂದನೆ: ಮೈಸೂರು ನಗರ ಶ್ರೀ ತಿಲಕ್ ಯುವಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಂಚೆ ಪಿಂಚಣಿ ಅದಾಲತ್
ಮೈಸೂರು: ಯಾದವಗಿರಿಯಲ್ಲಿರುವ ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸೋಮವಾರ ಪಿಂಚಣಿ ಆದಾಲತ್ ಏರ್ಪಡಿಸಲಾಗಿತ್ತು. ಆದಾಲತ್ ನಿಗದಿತ ಸಮಯಕ್ಕೆ ಆರಂಭ ಮಾಡಲಾಯಿತು. ಯಾವುದೇ ಪಿಂಚಣಿದಾರರು ದೂರು ಸಲ್ಲಿಸದ ಕಾರಣ ಹಾಗೂ ಖುದ್ದಾಗಿ ಅಹವಾಲು ಸಲ್ಲಿಸಲು ಭಾಗವಹಿಸದಿರುವ ಕಾರಣ ಅದಾಲತ್ ಮುಕ್ತಾಯಗೊಳಿಸಲಾಯಿತು. ಸೇವೆಯನ್ನು ಸಮರ್ಪಕವಾಗಿ ನೀಡುತ್ತಿರುವ ಕಾರಣ ಯಾವುದೇ ದೂರುಗಳ ಅರ್ಜಿ ಬಂದಿಲ್ಲ. ಪಿಂಚಣಿದಾರರು ಭಾಗವಹಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.