ತಂತ್ರಜ್ಞಾನ ಬೆಳೆಯಲು ವಿಜ್ಞಾನ ಕಾರಣ
ಮೈಸೂರು: ಪ್ರಸ್ತುತ ತಂತ್ರಜ್ಞಾನವು ಈ ಮಟ್ಟಕ್ಕೆ ಬೆಳೆಯಲು ವಿಜ್ಞಾನ ಮೂಲಕ ಕಾರಣ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ದಕ್ಷಿಣ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ದಕ್ಷಿಣ ಕೇಸರಿ ಎಸ್ಸೆಸ್ಸೆಲ್ಸಿ ಶ್ರೇಣಿತರು- 2014 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್ ಆಗಲು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಜೊತೆಗೆ ವಿವಿಧ ವಿಜ್ಞಾನ ವಿಷಯಗಳನ್ನು ಓದುವ ಮೂಲಕ ವಿಜ್ಞಾನಿಯಾಗಲು ಸಹ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಹಿಂದೆ 15-20 ಮಂದಿ ಮಾತ್ರ ಜಿಲ್ಲೆಯಲ್ಲಿ ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳು ಇರುತ್ತಿದ್ದರು. ಆದರೆ, ಈಗ ಪ್ರತಿ ಶಾಲೆಯಲ್ಲೂ ಹತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮೈಸೂರು ದಕ್ಷಿಣ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಾಸೀರ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂಧ್ಯಾ ಶ್ರೀನಿವಾಸ್, ಖಜಾಂಚಿ ಕೆ.ಪಿ. ಕುಮಾರ್, ನಿರ್ದೇಶಕ ರಾಜನ್ ಇದ್ದರು.