ತಂಬಾಕು ಮಂಡಳಿ ನೀತಿಗೆ ರೈತ ಬಲಿ
ಹುಣಸೂರು: ತಂಬಾಕು ಮಂಡಳಿಯ ಲೈಸೆನ್ಸ್ ನವೀಕರಣ ಕುರಿತ ಅವೈಜ್ಞಾನಿಕ ನೀತಿಯಿಂದ ಮನನೊಂದ ತಂಬಾಕು ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮೋದೂರು ಪಿ.ಕೊಪ್ಪಲಿನಲ್ಲಿ ಸಂಭವಿಸಿದೆ. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸಿದರು.
ತಾಲೂಕಿನ ಗಾವಡಗೆರೆ ಹೋಬಳಿಯ ಮೊದೂರು ಪಿ.ಕೊಪ್ಪಲಿನ ಲೇಟ್. ಜವರೇಗೌಡರ ಪುತ್ರ ನಾಗರಾಜ್(38) ಆತ್ಮಹತ್ಯೆ ಮಾಡಿಕೊಂಡ ರೈತ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಮೃತ ರೈತ ತನ್ನ ತಾಯಿ ಕೆಂಪಮ್ಮನ ಹೆಸರಿನಲ್ಲಿ ಕಟ್ಟೆಮಳಲವಾಡಿಯ 6/4 ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಿಂಗಲ್ ಬ್ಯಾರನ್ ಲೈಸೆನ್ಸ್ ಹೊಂದಿದ್ದು, ಕಳೆದ ವರ್ಷ ಪ್ರಕೃತಿ ವಿಕೋಪದಿಂದಾಗಿ ಗುಣಮಟ್ಟದ ತಂಬಾಕು ಬೆಳೆಯಲು ಆಗಲಿಲ್ಲ. ಕಡಿಮೆ ಗುಣಮಟ್ಟದ ಹೊಗೆಸೊಪ್ಪನ್ನು ಮಾರಾಟಕ್ಕೆ ಮಂಡಳಿ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್‌ನಲ್ಲಿ ಪಡೆದಿದ್ದ 4 ಲಕ್ಷ ಮತ್ತು ಕೈ ಸಾಲ ತೀರಿಸಲಾಗದೆ ಮನೆಯಲ್ಲಿದ್ದ ದ್ವಿದಳ ಧಾನ್ಯಕ್ಕೆ ಹುಳುಬಾರದಂತೆ ಇಟ್ಟಿದ್ದ ನಾಲ್ಕು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮೊದಲು ತೀವ್ರ ಅಸ್ವಸ್ಥರಾದ ನಾಗರಾಜ್‌ಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಮಣತನ ಪತ್ನಿ ಸರೋಜಮ್ಮ ಪೊಲೀಸರಿಗೆ ಹಾಗೂ ತಂಬಾಕು ಮಂಡಳಿಗೆ ದೂರು ನೀಡಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ತಂಬಾಕು ಬೆಳೆಗಾರರು ತಾಲೂಕು ಕಚೇರಿ ಎದುರು ಶವ ಇಟ್ಟು ಪ್ರತಿಭಟಿಸಿ, ಮಂಡಳಿಯು ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರೇಗೌಡ, ಪದಾಧಿಕಾರಿಗಳಾದ ಪ್ರಭಾಕರ್, ಜಯಶೀಲ ರೆಡ್ಡಿ, ನಾಗರಾಜಪ್ಪ, ನಂಜುಂಡೇಗೌಡ, ಮುಖಂಡರಾದ ರಾಮೇಗೌಡ, ಜಯಶೀಲೇಗೌಡ, ಸ್ವಾಮಿಗೌಡ ಇದ್ದರು.