ಶಾಲೆಗೆ ಬೀಗ ಹಾಕಿ ಪ್ರತಿಭಟನೆ
ಕ.ಪ್ರ.ವಾರ್ತೆ ಸುತ್ತೂರು ಜೂ.4
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯ ನೆಪ ಹೇಳಿ ವರ್ಗಾವಣೆ ಪತ್ರ ಕೊಟ್ಟು ಬೇರೆ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟಿಸಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ವರ್ಷದಿಂದ 8ನೇ ತರಗತಿ ನಡೆಯುತ್ತಿದೆ. ಈ ಬಾರಿ 8ನೇ ತರಗತಿಗೆ ಶಿಕ್ಷಕರಿಲ್ಲ ಎಂದು ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಬೇರೆ ಶಾಲೆಗೆ ಸೇರಿ ಎಂದು ಶಿಕ್ಷಕರು ತಿಳಿಸಿದ್ದಾರೆ. ಈಗ ನಮ್ಮ ಊರಿನಲ್ಲೆ ಶಾಲೆ ಇರುವಾಗ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುವುದಿಲ್ಲ. ದುಬಾರಿ ಹಣ ನೀಡಿ ಬೇರೆ ಶಾಲೆಗೆ ಸೇರಿಸಲೂ ನಮ್ಮಿಂದ ಆಗದು. ನಮ್ಮ ಮಕ್ಕಳು ಇದೆ ಶಾಲೆಯಲ್ಲಿಯೇ ಓದಬೇಕು ಎಂದು ಆಗ್ರಹಿಸಿ ಶಾಲೆಗೆ ಬೀಗ ಹಾಕಿ ಧರಣಿ ನಡೆಸಿದರು.
ವಿಷಯ ತಿಳಿದು ಬಿಇಒ ಪುರುಷೋತಮ್ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ, ನಾಳೆಯಿಂದಲೆ 8ನೇ ತರಗತಿಗೆ ಶಿಕ್ಷಕರನ್ನು ನೇಮಿಸುತ್ತೇವೆ ಮತ್ತು 10ನೇ ತರಗತಿವರೆಗೂ ಶಾಲೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದರು.
ಗ್ರಾಮಸ್ಥರಾದ ಅರಸಪ್ಪ, ಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ಶ್ರೀನಿವಾಸ್, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಗುರುಲಿಂಗೇಗೌಡ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಮಹದೇವನಾಯ್ಕ, ರಂಗಣ್ಣ, ರಾಮಣ್ಣ, ಚಿನ್ನಸ್ವಾಮಿ ಇದ್ದರು.