ಸಂಸ್ಥೆಗಳು ಸಿಎಸ್‌ಆರ್ ಮಹತ್ವ ಅರಿಯಲಿ
ಕ.ಪ್ರ.ವಾರ್ತೆ ಮೈಸೂರು ಜೂ.4
ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಮಹತ್ವ ಅರಿಯಬೇಕಾಗಿದೆ ಎಂದು ಎಂಸಿಎಚ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಮೈಕಲ್ ಹಾಪ್‌ಕಿನ್ಸ್ ಅಭಿಪ್ರಾಯಪಟ್ಟರು.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮೈಸೂರು ಶಾಖೆಯು ಇತ್ತೀಚೆಗೆ ಏರ್ಪಡಿಸಿದ್ದ ವ್ಯವಹಾರದ ಆಯಾಮದಿಂದ ಸಿಎಸ್‌ಆರ್- ಅಂತಾರಾಷ್ಟ್ರೀಯ ಪುನಶ್ಚೇತನ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರ್ಕಾರ, ಎನ್‌ಜಿಒಗಳು ತಮ್ಮ ದೇಶವನ್ನು ಉನ್ನತೀಕರಿಸುವ ದೃಷ್ಟಿಯಿಂದ ಸಿಎಸ್‌ಆರ್ ಅಳವಡಿಸಿಕೊಳ್ಳಬೇಕು. ಸಿಎಸ್‌ಆರ್ ಮೌಲ್ಯಗಳನ್ನು ಅಳವಡಿಸಿಕೊಂಡರೆ ಶಿಕ್ಷಣ, ಸುಸ್ಥಿರ ಪ್ರವಾಸೋದ್ಯಮ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬಹುದಾಗಿದೆ ಎಂದರು.
ಭಾರತ ಸಂಪತ್ಭರಿತ, ಸೂಕ್ಷ್ಮ ಸ್ವಭಾವದ ಹಾಗೂ ಬುದ್ಧಿವಂತ ದೇಶ ಎಂಬ ಹೆಸರು ಪಡೆದಿದೆ. ಇದನ್ನು ಅರ್ಥ ಮಾಡಿಕೊಂಡು ಕಂಪನಿಗಳು ಹೇಗೆ ಜಾಗತಿಕ ಮಟ್ಟದಲ್ಲಿ ಬೆಳೆಯಬಹುದು ಎಂಬುದರ ಕುರಿತು ಚಿಂತಿಸುವ ಅಗತ್ಯವಿದೆ. ಕಂಪನಿಗಳು ಮಧ್ಯಸ್ಥಿಗಾರರಿಗೆ ಸಿಎಸ್‌ಆರ್ ಬಗ್ಗೆ ತರಬೇತಿ ನೀಡಬೇಕು. ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸುವ ತತ್ವ ಮಧ್ಯಸ್ಥಿಗಾರರು ಪಾಲಿಸಬೇಕು. ಸಾಮಾಜಿಕ ಅಂಶದೊಂದಿಗೆ ಆರ್ಥಿಕ ಹಾಗೂ ಪರಿಸರದ ಬಗೆಗೂ ಕಾಳಜಿ ಬೆಳೆಸಿಕೊಳ್ಳಬೇಕು. ಸಿಎಸ್‌ಆರ್ ಉನ್ನತ ದರ್ಜೆಯ ಜೀವನ ಶೈಲಿಯನ್ನು ಕಲಿಸುತ್ತದೆ. ಕಾರ್ಪೊರೇಟ್ ವಲಯದಲ್ಲಿ ಗುಣಮಟ್ಟದ ಉತ್ಪಾದನೆ ಹೆಚ್ಚಿಸಲು ಹಾಗೂ ಸಮಾಜದೊಂದಿಗೆ ಹೆಜ್ಜೆ ಹಾಕಲು ಮಧ್ಯವರ್ತಿಯಾಗಲಿದೆ ಎಂದು ಹೇಳಿದರು.
ಸಿಐಐ ಮೈಸೂರು ಶಾಖೆ ಅಧ್ಯಕ್ಷ ಆರ್.ಸಿ.ಜಗದೀಶ್, ಎರಿನ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಾಯಿ ಪ್ರಕಾಶ್, ಸಿಐಐ ಸಂಚಾಲಕ ಕೆ.ಅನಂತಗೌಡ ಇದ್ದರು.