ಸಮರ್ಥವಾಗಿ ಟಿಇಟಿ ಎದುರಿಸಲು ಸಲಹೆ
ಕ.ಪ್ರ.ವಾರ್ತೆ ಮೈಸೂರು ಜೂ.4
ಸರ್ಕಾರ ನಡೆಸುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಬಿ.ಕೆ.ಬಸವರಾಜು ಸಲಹೆ ನೀಡಿದರು.
ನಗರದ ಡಯಟ್ ಸಂಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಾರಾಣಿ ಶಿಕ್ಷಕಿಯರ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಟಿಇಟಿ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಟಿಇಟಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ರಾಷ್ಟ್ರಮಟ್ಟದಲ್ಲಿ ಶಿಕ್ಷಕರ ಆಯ್ಕೆ ಸುಲಭವಾಗಿಸಲು ಏಕರೂಪ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲು ಸಹಕಾರ ಎಂದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಪರೀಕ್ಷೆ ನಡೆಸುತ್ತಿದ್ದು, ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸ ಬಯಸುವವರಿಗೆ ಟಿಇಟಿ ಕಡ್ಡಾಯವಾಗಿದೆ. ಯಾವುದೇ ಅನುದಾನವಿಲ್ಲದೆ ಉಚಿತವಾಗಿ ಟಿಇಟಿ ತರಬೇತಿ ಏರ್ಪಡಿಸಿದ್ದು ಅಭ್ಯರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಯಟ್‌ನ ಹಿರಿಯ ಉಪನ್ಯಾಸಕಿ ಮಂಜುಳಾ ಮಾತನಾಡಿ, ಇಂದು ಶಿಕ್ಷಕರು ಅನುಕೂಲಕರರಾಗಿ ವಿದ್ಯಾರ್ಥಿಗಳ ಜತೆ ತಾವೂ ಕಲಿಯಬೇಕಾಗಿದೆ. ಆರ್‌ಟಿಇ ಇಂದು ಕಾಯಿದೆಯಾಗಿರುವುದಿಂದ ಸಾರ್ವಜನಿಕ ಪ್ರಶ್ನೆಗಳಿಗೆ ನಮ್ಮ ಉತ್ತರದಾಯಿತ್ವ ಇರಬೇಕಾಗುತ್ತದೆ ಎಂದರು.
ಮಹಾರಾಣಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಾರಾಯಣ್ ನೇತೃತ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಂಕರ್, ರಮೇಶ್, ಅಕಿಲಾಂಡೇಶ್ವರಿ, ನಟೇಶ್, ಹೇಮಣ್ಣ ಉಪನ್ಯಾಸ ನೀಡಿದರು. ಸುಮಾರು 250ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.