ಪರಿಸರ ಸ್ವಚ್ಛವಾಗಿಟ್ಟು, ಆರೋಗ್ಯ ಕಾಪಾಡಿ
ರಾವಂದೂರು: ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದ್ದು, ನಮ್ಮ ಸುತ್ತಲಿನ ಪರಿಸರವನ್ನು ನಾವು ಶುಚಿಯಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ವೈದ್ಯಾಧಿಕಾರಿ ಡಾ.ಸಿ.ಎಂ. ಪುನೀತ್ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೇರಿಯಾ ರೋಗ ಹರಡುವ ರೋಗವಾಗಿದ್ದು, ಈ ರೋಗ ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳದೆ ಅನೈರ್ಮಲ್ಯ ಮಾಡುವುದರಿಂದ ಹರಡುತ್ತದೆ ಎಂದ ಅವರು, ಈ ರೋಗದ ಲಕ್ಷಣ ಹಾಗೂ ಈ ಕಾಯಿಲೆ ಹೇಗೆ ಬರುತ್ತದೆ? ಚಿಕಿತ್ಸೆ ಹೇಗೆ? ಇದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ವಿವರವಾಗಿ ತಿಳಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಆರ್.ಟಿ. ಸತೀಶ್ ಮಾತನಾಡಿ, ಹಣ ಐಶ್ವರ್ಯ ಸಂಪಾದನೆ ಮಾಡುವುದರ ಜೊತೆಗೆ ವಿದ್ಯೆ ಹಾಗೂ ಆರೋಗ್ಯ ಸಂಪಾದನೆ ಮಾಡಬೇಕು. ಇವೆರಡು ಇದ್ದರೆ ಎಲ್ಲಿ ಬೇಕಾದರೂ ಸಹ ಬದುಕಬಹುದು ಎಂದು ಹೇಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ರಾವಂದೂರಿನ ಪ್ರಮುಖ ಬೀದಿಗಳಲ್ಲಿ ಮಲೇರಿಯಾ ರೋಗದ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಯಿತು. ಆರೋಗ್ಯ ಸಹಾಯಕ ಮಹೇಂದ್ರ, ಶಾಲಾ ಮುಖ್ಯಶಿಕ್ಷಕ ಲಕ್ಕಯ್ಯ, ಪಿ.ಹೇಮಾವತಿ, ಕೃಷ್ಣಮೂರ್ತಿ ಇದ್ದರು.