ಪಾಲಿಕೆಗೆ 2 ಶವ ಸಾಗಿಸುವ ವಾಹನ ಹಸ್ತಾಂತರ
ಕ.ಪ್ರ. ವಾರ್ತೆ ಮೈಸೂರು ಜೂ.11
ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗೋ. ಮಧುಸೂದನ್ ಅವರು ನಗರ ಪಾಲಿಕೆಗೆ ಎರಡು ಶವಸಾಗಿಸುವ ವಾಹನ ನೀಡಿದರು.
ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರು ಶವ ಸಾಗಿಸುವ ವಾಹನಗಳ ಬೀಗಗಳನ್ನು ಮೇಯರ್ ಎನ್.ಎಂ. ರಾಜೇಶ್ವರಿ ಮತ್ತು ಉಪ ಮೇಯರ್ ಶೈಲೇಂದ್ರ ಅವರಿಗೆ ಹಸ್ತಾಂತರಿಸಿದರು.
ಬಳಿಕ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು. ಗೋ. ಮಧುಸೂದನ್ ಮತ್ತು ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಒಂದೊಂದು ವಾಹನವನ್ನೇರಿ ಸಂಕೇತಿಕವಾಗಿ ವಾಹನ ಚಲಾಯಿಸಿದರು.
ಬಳಿಕ ಮಾತನಾಡಿದ ಗೋ. ಮಧುಸೂದನ್ ಅವರು, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ 15.30 ಲಕ್ಷ ವೆಚ್ಚದಲ್ಲಿ ಈ ವಾಹನ ನೀಡಲಾಗಿದೆ. ನಗರ ಪಾಲಿಕೆಯಲ್ಲಿನ ಶವ ಸಾಗಿಸುವ ವಾಹನಗಳ ತೀರ ಹಳೆಯದಾಗಿವೆ. ಆದ್ದರಿಂದ ಹೊಸ ವಾಹನ ನೀಡಲಾಗಿದೆ. ಅಂತೆಯೆ ಜಿಲ್ಲೆಯ ಎಲ್ಲಾ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಶವಸಾಗಿಸುವ ವಾಹನ ನೀಡುವ ಉದ್ದೇಶ ಇದೆ ಎಂದರು.
ಪಾಲಿಕೆಯ ಬಿಜೆಪಿ ನಾಯಕ ಶಿವಕುಮಾರ್, ಸದಸ್ಯರಾದ ಮ.ವಿ. ರಾಮಪ್ರಸಾದ್, ಎಂ.ಕೆ. ಶಂಕರ್, ನಂದೀಶ್ ಪ್ರೀತಂ, ಕೆ.ವಿ. ಮಲ್ಲೇಶ್, ಎಂ.ಜೆ. ರವಿಕುಮಾರ್, ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.
5, 6ನೇ ವಾರ್ಡ್‌ನಲ್ಲಿ ಮೇಯರ್ ಪಾದಯಾತ್ರೆ
ಮೈಸೂರು: ಮೇಯರ್ ಎನ್.ಎಂ.ರಾಜೇಶ್ವರಿ ಅವರು ಬುಧವಾರ ನಗರ ಪಾಲಿಕೆಯ ವಾರ್ಡ್ ನಂ.5 ಮತ್ತು 6ರ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿದರು. ವಾರ್ಡ್ ನಂ.5ರ ವ್ಯಾಪ್ತಿಯ ವೃದ್ಧಾಶ್ರಮ, ಸ್ಮಶಾನ ಮತ್ತು ಒಳಚರಂಡಿ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದರು. ಪಾಲಿಕೆ ಸದಸ್ಯೆ ರತ್ನಮ್ಮ ಅವರು ಸ್ಥಳೀಯ ಸಮಸ್ಯೆ ಕುರಿತು ಮೇಯರ್‌ಗೆ ಮನವರಿಕೆ ಮಾಡಿಕೊಟ್ಟರು. ವೃದ್ಧಾಶ್ರಮದ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ, ನರ್ಮ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಮುಂದಿನ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈಗ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ನಂತರ ತುರ್ತು ಕಾರ್ಯದ ನಿಮಿತ್ತ ಮೇಯರ್ ಹಿಂದಿರುಗಿದರು. ಆದರೆ ಪಾಲಿಕೆ ಆಯುಕ್ತ ಪಿ.ಜಿ.ರಮೇಶ್ ಅವರು ವಾರ್ಡ್ ನಂ.6ಕ್ಕೆ ಭೇಟಿ ನೀಡಿ ಮಳೆ ನೀರು ಚರಂಡಿಗೆ ಯುಜಿಡಿ ನೀರು ಸೇರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಳಿದಂತೆ ಉದ್ಯಾನಗಳ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ಹೇಳಿದರು. ಪಾಲಿಕೆ ಸದಸ್ಯರಾದ ರತ್ನಮ್ಮ, ಮ.ವಿ. ರಾಮಪ್ರಸಾದ್ ಇದ್ದರು.
ಕಾರುಗಳ್ಳರಿಬ್ಬರ ಬಂಧನ: 3 ಲಕ್ಷ ಮೌಲ್ಯದ ಕಾರು ವಶ
ಮೈಸೂರು: ನಗರದ ಸಿಸಿಬಿ ಘಟಕದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 3 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೌಡ್ಲೆ ಕೊಪ್ಪಲು ನಿವಾಸಿ ಚಿಕ್ಕಹೊನ್ನಯ್ಯ ಎಂಬುವರ ಪುತ್ರ ಆನಂದ (27) ಮತ್ತು ದೊಡ್ಡ ಕೊತ್ತಗೆರೆ ನಿವಾಸಿ ಲೇ. ಜವರಪ್ಪ ಎಂಬವರ ಪುತ್ರ ನಾಗೇಶ (20) ಬಂಧಿತ ಆರೋಪಿಗಳು. ಬಂಧಿತರಿಂದ ಬೆಂಗಳೂರು ಗಿರಿನಗರದಲ್ಲಿ ಕಳವು ಮಾಡಿದ್ದ 3 ಲಕ್ಷ ಮೌಲ್ಯದ ಚವರ್‌ಲೆಟ್ ತವೇರಾ ಕಾರನ್ನು ವಶಪಡಿಸಿಕೊಂಡಿದ್ದಾರೆ.