ಬಜೆಟ್ಗೆ ಸಿಕ್ಕಿತು ಅನುಮೋದನೆ
ಮೈಸೂರು: 2014-15ನೇ ಸಾಲಿನ ತಾಲೂಕು ಪಂಚಾಯಿತಿ ಇಲಾಖೆಗಳ ಯೋಜನಾವಾರು ಹಣ ಹಂಚಿಕೆ ಮಾಡಿ ತಯಾರಿಸಿರುವ ಬಜೆಟ್ಗೆ ಶುಕ್ರವಾರ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ನಗರ ಮಿನಿವಿಧಾನಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಉಪಾಧ್ಯಕ್ಷ ಸಿದ್ದಯ್ಯ ಅವರ ಸಮ್ಮುಖದಲ್ಲಿ ಇಒ ಅರುಳಕುಮಾರ್ ಸಭೆಯ ಅನುಮೋದನೆ ಪಡೆದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 17 ಇಲಾಖೆಗಳಿಗೆ ಹಣ ಹಂಚಿಕೆ ಮಾಡಿ 42.43 ಕೋಟಿ ಬಜೆಟ್ ರೂಪಿಸಲಾಗಿದೆ. ಇದರಲ್ಲಿನ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಇಒ ಸಭೆಗೆ ತಿಳಿಸಿದರು.
ಒಟ್ಟು 17 ಇಲಾಖೆಗಳಲ್ಲಿ ಅತಿ ಹೆಚ್ಚು ಅನುದಾನ ಪಡೆದ ಇಲಾಖೆಗಳಲ್ಲಿ ಶಿಕ್ಷಣ- 11.13 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 12.49 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5.77 ಕೋಟಿ ಪಶುಸಂಗೋಪನಾ ಇಲಾಖೆಗೆ 1.15 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಇಲಾಖೆಗೆ 1.4 ಕೋಟಿ ನೀಡಲಾಗಿದೆ. ಉಳಿದಂತೆ ಸಣ್ಣಪುಟ್ಟ ಇಲಾಖೆಗೆ ನಿಗದಿಯಂತೆ ಹಣ ಹಂಚಿಕೆ ಮಾಡಲಾಗಿದೆ. ಯೋಜನೇತರ ಕಾರ್ಯಕ್ರಮಗಳಿಗೆ 13.28 ಕೋಟಿ ವ್ಯಯಿಸಲು ನಿರ್ಧರಿಸಲಾಗಿದೆ.
ತಾಪಂ ಬಜೆಟ್ ಮಂಡಿಸುವ ಸಭೆಯು ಕಳೆದ ಮಾರ್ಚ್ನಲ್ಲಿಯೇ ನಡೆಯಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಇದೀಗ ಬಜೆಟ್ಗೆ ಅನುಮೋದನೆ ಪಡೆಯಲಾಗಿದೆ. ಇನ್ನು ಒಂದು ವರ್ಷದಲ್ಲಿ ತಾಲೂಕಿನ 29 ತಾಪಂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಾಪಂ ಸದಸ್ಯರು ಹಾಗೂ ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಿ ಜನಸೇವೆಗೆ ಅನುವು ಮಾಡಿಕೊಡುವಂತೆ ಅಧ್ಯಕ್ಷರು ಕೋರಿದರು.
ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಪ್ರತಿಪಕ್ಷದ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ಎಲ್ಲಾ ಇಲಾಖೆಗಳ ಸಹಾಯಕ ನಿರ್ದೇಶಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿ ಕ್ರಿಯಾ ಯೋಜನೆ ಬಗೆಗೆ ಮಾಹಿತಿ ನೀಡಿದರು.
ಪಿಡಬ್ಲ್ಯೂಡಿಜೆಇಗಳು ಕಮಿಷನ್ ಕೇಳುತ್ತಾರೆ
ನಮ್ಮ ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವಂತೆ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಅವರನ್ನು ಕೇಳಿದರೆ ಶೇ.3 ರಷ್ಟು ಕಮಿಷನ್ ಕೊಡಿ ಎನ್ನುತ್ತಾರೆ. ಯೋಜನೆಗೆ ಅನುಮತಿ ನೀಡುವಾಗ ಶೇ.8 ರಷ್ಟು ಕಮಿಷನ್ ಕೊಡಿ ಎನ್ನುತ್ತಾರೆ ಎಂದು ತಾಪಂ ಸದಸ್ಯರು ತಮ್ಮ ಅಳಲು ತೋಡಿಕೊಂಡರು.
ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಎಇಇ ಸೋಮಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ದಯವಿಟ್ಟು ನಿಮ್ಮ ಜೆಇಗಳಿಗೆ ಎಚ್ಚರಿಕೆ ನೀಡಿ. ನಾವು ಕಮಿಷನ್ ನೀಡಲ್ಲ ಎಂದರೆ ಯೋಜನೆಯ ಹಣವನ್ನು ಬಳಸದೆ ಸರ್ಕಾರಕ್ಕೆ ಪುನಃ ವಾಪಸ್ ಕಳುಹಿಸುತ್ತಾರೆ ಎಂದು ದೂರಿದಾಗ, ಸೋಮಶೇಖರ್ ಮಾತನಾಡಿ ಈ ಸಂಜೆಯೊಳಗೆ ಜೆಇಗಳ ಬಳಿ ಮಾತನಾಡಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಅಂತಹ ಯಾವುದೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತರುವಂತೆ ಸಮಾಧಾನಪಡಿಸಿದರು.
ಶಾಲೆ ಮುಚ್ಚಿಸುವಂತೆ ತಾಕೀತು: ಯಡಕೊಳ ತಾಪಂ ಸದಸ್ಯ ಮಹೇಂದ್ರ ಮಾತನಾಡಿ, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಆ ಶಾಲೆ ಮುಚ್ಚಿಸುವಂತೆ ಶಾಸಕರು ಸೂಚಿಸಿದ್ದರೂ ತಾವು ಏನು ಮಾಡುತ್ತಿದ್ದೀರಿ ಎಂದು ಬಿಇಒ ಬಿ.ಎನ್. ಶಿವರಾಮೇಗೌಡ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಬಿಇಒ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದೇನೆ. ಈಗಲೂ ಎಚ್ಚರಿಕೆ ನೀಡಿದ್ದು ಕೂಡಲೇ ಮುಚ್ಚಿಸುತ್ತೇನೆ ಎಂದರು.
ಸಿದ್ದಲಿಂಗಪುರ ಸದಸ್ಯ ಸೋಮಣ್ಣ, ಇಲವಾಲ ಸದಸ್ಯ ಗೋವಿಂದಸ್ವಾಮಿ ಮಾತನಾಡಿ, ಆರ್ಟಿಇನಡಿ ಸೀಟು ಕೇಳಲು ತಾವು ಅರ್ಹರನ್ನು ಕಳುಹಿಸಿದರೆ ಶಾಲೆಗಳು ಸೀಟು ನೀಡುತ್ತಿಲ್ಲ. ನಿಮ್ಮ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಾಂತರ ಬಿಇಒ ರಾಮಾರಾಧ್ಯ ಅವರನ್ನು ಕೇಳಿದಾಗ, ಅಂತಹ ಪ್ರಕರಣ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಆಲನಹಳ್ಳಿ ಸದಸ್ಯ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಆಲನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಖಾಸಗಿಯವರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನಹರಿಸಿ ಶಾಲೆಯ ಜಾಗವನ್ನು ಸರ್ವೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಅರುಳಕುಮಾರ್ ತಾವು ಈ ಬಗ್ಗೆ ತಹಸೀಲ್ದಾರ್ಗೆ ತಿಳಿಸಿ ಆರ್ಟಿಸಿ ಕೊಡಿಸುವುದಾಗಿ ಭರವಸೆ ನೀಡಿದರು.