ಸಂಗೀತ ವಿದ್ಯಾಲಯ ಉದ್ಘಾಟನೆ ಇಂದು
ಮೈಸೂರು: ಕುವೆಂಪುನಗರದಲ್ಲಿ ನಾದಾಮೃತ ಸಂಗೀತ ವಿದ್ಯಾಲಯವು ಜೂ.14 ರಂದು ಸಂಜೆ 6ಕ್ಕೆ ಉದ್ಘಾಟನೆಯಾಗಲಿದೆ. ವೀಣೆಶೇಷಣ್ಣ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಂತಾ ಅನಂತಸ್ವಾಮಿ ಅವರು ವಿದ್ಯಾಲಯವನ್ನು ಉದ್ಘಾಟಿಸುವರು. ಚಿತ್ರನಟ ಮಂಡ್ಯ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅಕಾಶವಾಣಿ ಉಪನಿರ್ದೇಶಕ ಡಾ.ಆನಂದ್ ವಿ.ಪಾಟೀಲ್ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆಯ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿ ಅವರ ನಂತರ ಅವರ ಸಂಗೀತ ಪರಂಪರೆಯನ್ನು ಅವರ ಪುತ್ರ ರಾಜು ಅನಂತಸ್ವಾಮಿ ಮುಂದುವರಿಸಿದರು ಎಂದರು. ಕರ್ನಾಟಕ, ಹಿಂದೂಸ್ತಾಮಿ ಹಾಗೂ ಸುಗಮ ಸಂಗೀತವವನ್ನು ಹೇಳಿ ಕೊಡಲಾಗುವುದು ಎಂದರು. ಅಮೃತ ಶಾಸ್ತ್ರಿ, ಗುರುರಾಜ್ ಇದ್ದರು.
ಮಂಡಿ ಜೋಡಣೆ ಶಸ್ತ್ರ ಚಿಕಿತ್ಸೆ
ಮೈಸೂರು: ಮಂಡಿ ನೋವಿನಿಂದ ಬಳಲುತ್ತಿದ್ದ ಇಬ್ಬರು ಮಹಿಳೆಯರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. 71 ವರ್ಷದ ವೃದ್ಧೆ ಹಾಗೂ 62 ವರ್ಷ ಮಹಿಳೆ ಮಂಡಿ ನೋವಿನಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆ ದಾಖಲಿಸಿಕೊಂಡು ಮಂಡಿ ವಿನ್ಯಾಸಕ್ಕೆ ತಕ್ಕಂತೆ ಅತ್ಯಾಧುನಿಕ ಸಲಕರಣೆಗಳನ್ನು ರೂಪಿಸಿ ಮಂಡಿ ಜೋಡಣೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಇದೀಗ ಮಹಿಳೆಯರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗದ ವೈದ್ಯ ಡಾ.ಜಿ.ವಿ. ಶ್ರೀನಿವಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ 7 ಕೋಟಿ ಮಂದಿ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಅವರಲ್ಲಿ 70 ವರ್ಷದವರು ಶೇ.40 ಇದ್ದಾರೆ. ಶೇ. 29 ಮಂದಿ ನಿತ್ಯ ಚಟುವಟಿಕೆಯಲ್ಲಿ ತೊಡಗದಂತಹ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಚಾಮುಂಡಿಬೆಟ್ಟದ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ. ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಜೂ.15 ರೊಳಗೆ ಅರ್ಜಿ ಸಲ್ಲಿಸಬಹುದು. ದ್ಯಾವಪ್ಪನಾಯಕ, ಮೊ. 9740166036 ಸಂಪರ್ಕಿಸಬಹುದು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಿಂದ ಮೇಲ್ಪಟ್ಟು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಜೂ.20ರ ಸಂಜೆ 6.30ಕ್ಕೆ ವಿಶ್ವೇಶ್ವರನಗರದ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ನಲ್ಲಿ ಪ್ರತಿಭಾ ಪುರಸ್ಕಾರ ಏರ್ಪಡಿಸಿದೆ. ಜೂ.15ರೊಳಗೆ ಅಂಕಪಟ್ಟಿ, ಭಾವಚಿತ್ರದೊಂದಿಗೆ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯನ್ನು ಬಿಎಐ ಕಚೇರಿಗೆ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ, ಕೆ. ಸತೀಶ್ ಮೋಹನ್, ಮೊ. 9900791777, ದೂ. 2483333 ಸಂಪರ್ಕಿಸಬಹುದು.
ಬಾಲಕ ನಾಪತ್ತೆ
ಮೈಸೂರು: ಶಾಲಾ ಶುಲ್ಕ ಪಾವತಿಸುವುದಾಗಿ ಮನೆಯಿಂದ ಹೋದ ಎಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿಯ ಕೆ.ಎಸ್. ಸಂಪತ್ ಕುಮಾರ್(17) ಕಾಣೆಯಾಗಿದ್ದಾನೆ. ನಗರದ ಗಂಗೋತ್ರಿ ಶಾಲೆಯಲ್ಲಿ 10ನೇ ಓದುತ್ತಿದ್ದ ಸಂಪತ್ ಕುಮಾರ್ ಅನುತ್ತೀರ್ಣನಾಗಿದ್ದ. ಆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಲ್ಕ ಪಾವತಿಸುವುದಾಗಿ ಹೇಳಿ ಮನೆಯಿಂದ ಹೋಗಿ ನಾಪತ್ತೆ ಆಗಿದ್ದಾನೆ. ಈ ಸಂಬಂಧ ಆತನ ತಂದೆ ಎಚ್.ಡಿ. ಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಧಾರಣ ಮೈಕಟ್ಟು, ಕೋಲು ಮುಖ, ಕೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾನೆ. ಈತನ ಸುಳಿವು ದೊರೆತರೆ ದೂ.08228- 255329 ಸಂಪರ್ಕಿಸಬಹುದು.
ಉಚಿತ ತಪಾಸಣೆ
ಕಾಳಿದಾಸ ರಸ್ತೆಯಲ್ಲಿರುವ ವಿಎಲ್ಸಿಸಿ ಕೇಂದ್ರದಲ್ಲಿ ಜೂ.15ರ ಬೆಳಗ್ಗೆ 11ಕ್ಕೆ ರಕ್ತದೊತ್ತಡದಿಂದಾಗುವ ತೊಂದರೆಗಳು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಉಚಿತ ಸಲಹಾ ಶಿಬಿರ ಏರ್ಪಡಿಸಿದ್ದು, ಮೊ. 97400 88538 ಸಂಪರ್ಕಿಸಬಹುದು.
ಗ್ರಾಪಂ ನೇಮಕದಲ್ಲಿ ದಲಿತರಿಗೆ ಮನ್ನಣೆ ಇಲ್ಲ
ಹುಣಸೂರು: ಗ್ರಾಪಂಗಳಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಪರಿಶಿಷ್ಟರನ್ನು ಪರಿಗಣಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು, ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕಡತಗಳು ತಾಲೂಕು ಕಚೇರಿಯಲ್ಲಿ ನಾಪತ್ತೆಯಾಗಿವೆ. ಕೇಳಿದರೆ ಲಭ್ಯವಿಲ್ಲವೆಂಬ ಉತ್ತರ ಬರುತ್ತಿದೆ. 15 ವರ್ಷವಾದರೂ ನಾಗಾಪುರ ಗಿರಿಜನರಿಗೆ ಭೂಮಿಯ ಹಕ್ಕುಪತ್ರ ನೀಡಿಲ್ಲ. ದಲಿತರ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿಲ್ಲವೆಂದು ಆರೋಪಿಸಿದರು. ಬಸವರಾಜ್ ಕಲ್ಕುಣಿಕೆ ಮಾತನಾಡಿ, ಗ್ರಾಪಂ ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ನೀಡುವ ಸಂಬಳವನ್ನು ಸರಿಯಾಗಿ ವಿತರಿಸುತ್ತಿಲ್ಲ. ಪೌರಕಾರ್ಮಿಕರಿಗೆ ಸವಲತ್ತು ಕಲ್ಪಿಸದೆ ನಿರ್ಲಕ್ಷ್ಯಿಸಿದ್ದಾರೆ. ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಗಿರಿಜನರಿಗೆ ಸಾಗುವಳಿ ಪತ್ರ ನೀಡದೇ ಕೇವಲ ಪಹಣಿ ನೀಡುತ್ತಿದ್ದು, ಯಾವುದೇ ಸೌಲಭ್ಯ ಪಡೆಯದಂತಾಗಿದೆ ಎಂದು ದೂರಿದರು.
ವಿದ್ಯುತ್ ಶಾಕ್ನಿಂದ ಮಗು ಅಸ್ವಸ್ಥ
ಹುಣಸೂರು: ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಗ್ರೌಂಡಿಂಗ್ ವೈರ್ ಬಳಿ ಆಕಸ್ಮಿಕ ವಿದ್ಯುತ್ ಶಾಖ ತಗುಲಿದ ಪರಿಣಾಮ ಮಗುವೊಂದು ಅಸ್ವಸ್ಥವಾಗಿರುವ ಘಟನೆ ಪಟ್ಟಣದ ಪೌರಕಾರ್ಮಿಕರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಪೌರಕಾರ್ಮಿಕ ಕಾಲೋನಿಯಲ್ಲಿರುವ ಆನಂದ್ ಮತ್ತು ಶೋಭಾ ದಂಪತಿಯ ಪುತ್ರಿ ಚಂದ್ರಿಕಾ (9) ಎಂಬ ಮಗುವೇ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಸಹ ಆಟಗಾರರೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ರಸ್ತೆ ಬದಿಯಲ್ಲಿದ್ದ ಟ್ರಾನ್ಸ್ಫಾರ್ಮರ್ ಗ್ರೌಂಡಿಂಗ್ವೈರ್ ಮುಟ್ಟಿದ್ದರಿಂದ ವಿದ್ಯುತ್ ಹರಿದಿದೆ. ತಕ್ಷಣ ಕಿರುಚಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಓಡಿ ಬಂದು ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪಿಂಚಣಿ ಅದಾಲತ್
ಎಚ್.ಡಿ. ಕೋಟೆ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶಾಸಕ ಎಸ್.ಚಿಕ್ಕಮಾದು ಅವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ನೆರವೇರಿತು. ಚಿಕ್ಕಮಾದು ಮಾತನಾಡಿ, ತಾಲೂಕಿನ 4 ಕಡೆಗಳಲ್ಲಿ ಅದಾಲತ್ ನಡೆಸಲಾಗಿದೆ. ಈ ಯೋಜನೆಗೆ ವೃದ್ಧಾಪ್ಯ, ಆಕಸ್ಮಿಕ ಅಂಗವಿಕಲತೆ, ವಿಧವಾ, ಸಂಧ್ಯಾ ಸುರಕ್ಷಾ ಮೈತ್ರಿ ಯೋಜನೆಗಳು ಬರಲಿದ್ದು ಸಾರ್ವಜನಿಕರು ಪಿಂಚಣಿ ಪಡೆದುಕೊಳ್ಳುವುದಕ್ಕಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು. ಅದಾಲತ್ನಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದರು. ತಾಪಂ ಅಧ್ಯಕ್ಷೆ ಮಲ್ಲೇಶ್ವರಿ, ಉಪಾಧ್ಯಕ್ಷೆ ಪುಟ್ಟಾಲಮ್ಮ, ಮಾಜಿ ಉಪಾಧ್ಯಕ್ಷ ಮಹೇಂದ್ರ, ಪಪಂ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ತಾಜ್, ಅನಿಲ್, ಮುಖಂಡರಾದ ಶಿವಮಲ್ಲು, ಗೋವಿಂದಾಚಾರ್, ನಾಗರಾಜು, ಶಿವಯ್ಯ ಇದ್ದರು.
ವಾಹನ ಚಾಲಕರಿಗೆ ಸುರಕ್ಷತಾ ತರಬೇತಿ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟವು ವೋಲ್ವೋ ಬಸಸ್ ಇಂಡಿಯಾ ಪ್ರೈ.ಲಿ. ಸಹಯೋಗದೊಂದಿಗೆ ನಗರದ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ಶಿಬಿರ ಏರ್ಪಡಿಸಿತ್ತು. ವೋಲ್ವೋ ಬಸಸ್ ಇಂಡಿಯಾದ ಕಾರ್ಯಕ್ರಮ ನಿರ್ವಹಣಾಧಿಕಾರಿ ವಿ.ನಾಗರಾಜ್ ಮಾತನಾಡಿ, ಬಹುತೇಕ ಅಪಘಾತಗಳು ನಡೆಯಲು ಪ್ರಮುಖ ಕಾರಣಗಳಿವೆ. ಲೇನ್ ಶಿಸ್ತು ಪಾಲಿಸದಿರುವುದು, ಓವರ್ ಟೇಕ್ ಮಾಡುವುದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಪ್ರಮುಖವಾದವು. ಜತೆಗೆ ಚಾಲಕರು ನಿದ್ರೆ ಮಾಡದಿರುವುದು, ಹೆಚ್ಚು ವೇಗವಾಗಿ ಓಡಿಸುವುದು ಅಪಘಾತಕ್ಕೆ ಕಾರಣವಾಗಿವೆ ಎಂದರು.
ಶಿಬಿರದಲ್ಲಿ ಚಾಲಕರ ಮೇಲಿರುವ ಜವಾಬ್ದಾರಿ, ರಸ್ತೆ ವಿಜ್ಞಾನ, ಸಾಮಾಜಿಕ ಮೌಲ್ಯಗಳು ಮತ್ತು ಕೌಟುಂಬಿಕ ಮೌಲ್ಯಗಳು, ವಾಹನ ಕೌಶಲ್ಯ, ವಿಶ್ವಾಸ, ರಕ್ಷಣಾತ್ಮಕ ಚಾಲನೆ, ಸುರಕ್ಷತಾ ಚಾಲನೆ, ಸಂಚಾರ ನಿಯಮಗಳನ್ನು ಗೌರವಿಸುವ ಬಗೆಗೆ ತಿಳಿಸಲಾಯಿತು.
ಎಸ್ಎಫ್ಐ ಸದಸ್ಯತ್ವ ಆಂದೋಲನ
ಮೈಸೂರು: ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿಯು 2014-15ನೇ ಸಾಲಿನ ಸದಸ್ಯತ್ವ ಆಂದೋಲನ ಪ್ರಾರಂಭಿಸುತ್ತಿದೆ ಎಂದು ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಮಹೇಶ್ಕುಮಾರ್ ಹೇಳಿದ್ದಾರೆ. ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಪ್ರಗತಿಪರ ಆಲೋಚನೆಗಳೊಂದಿಗೆ ಚಳವಳಿ ರೂಪಿಸುತ್ತಾ ಬಂದಿದ್ದು, ಈ ಚಳವಳಿಯನ್ನು ಬಲಿಷ್ಠಗೊಳಿಸಲು ಎಸ್ಎಫ್ಐ ಸದಸ್ಯತ್ವ ಪಡೆಯುವಂತೆ ಅವರು ಕೋರಿದ್ದಾರೆ.
ನಾನಾ ತರಬೇತಿ, ಶಿಬಿರ
ಮೈಸೂರು: ಪೊಲೀಸ್ ಇಲಾಖೆಯು ಆಗಸ್ಟ್ನಲ್ಲಿ ನಡೆಸುವ ಪೊಲೀಸ್ ಪೇದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ ಜೂ.15 ರಿಂದ ಎರಡು ತಿಂಗಳ ತರಬೇತಿ ಪ್ರಾರಂಭವಾಗಲಿದೆ. ಆಸಕ್ತರು ಮೊ. 9980639953 ಸಂಪರ್ಕಿಸಬಹುದು. ರಿವರ್ ವ್ಯೂ ಆಸ್ಪತ್ರೆಯಲ್ಲಿ ಜೂ.15 ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳ ತಪಾಸಣೆ ಮತ್ತು ಸಲಹಾ ಶಿಬಿರ ಆಯೋಜಿಸಿದೆ. ದೂ.2516251, ಮೊ.8884408000 ಸಂಪರ್ಕಿಸಬಹುದು. ಆಟಿಸಂ ಮಕ್ಕಳನ್ನು ಶಾಲೆಗಳಲ್ಲಿ ಮೊದಲ ಹಂತದಲ್ಲಿ ಗುರುತಿಸಲು ಸಹಾಯಕವಾಗುವಂತೆ ಅಶಿಯಾನ ಇನ್ನರ್ ವ್ಹೀಲ್, ಮೈಸೂರು ಸೆಂಟ್ರಲ್, ವಿಕ್ಯಾನ್ ವತಿಯಿಂದ ಪ್ರೈಮರಿ ಶಾಲಾ ಅಧ್ಯಾಪಕರಿಗೆ ಜೂ.15ರ ಬೆಳಗ್ಗೆ 9.30ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಮಕ್ಕಳ ಲೈಬ್ರರಿಯಲ್ಲಿ ವಿಚಾರ ಸಂಕಿರಣ ಆಯೋಜಿಸಿದೆ. ಸೌಜನ್ಯ ಅತ್ತಾವರ್, ಮೊ. 9343683889 ಸಂಪರ್ಕಿಸಬಹುದು. ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ಜೂ.15ರ ಸಂಜೆ 6.15ಕ್ಕೆ ಸಿದ್ಧ ಸಮಾಧಿ ಯೋಗ ಶಿಬಿರದ ಬಗ್ಗೆ ಉಚಿತ ಪರಿಚಯ ಕಾರ್ಯಕ್ರಮ ಏರ್ಪಡಿಸಿದೆ. ಜೂ.16ರ ರಿಂದ 29ರವರೆಗೆ 14 ದಿನಗಳ ಸಿದ್ಧ ಸಾಧಿ ಯೋಗ ಶಿಬಿರ ನಡೆಯಲಿದೆ. ನೋಂದಣಿಗೆ ಮತ್ತು ವಿವರಗಳಿಗೆ ಎಚ್.ಎಸ್. ರಮೇಶ್ಚಂದ್ರ, ಮೊ.94484-58050 ಸಂಪರ್ಕಿಸಬಹುದು. ಬೋಗಾದಿ ಉತ್ತರ 2ನೇ ಹಂತದ ಕಲ್ಪದ್ರುಮ ಸಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ 2013-14ರ ಶೈಕ್ಷಣಿಕ ವರ್ಷದಿಂದ ಜ್ಯೋತಿಷ್ಯ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೋಮಾ ಕೋರ್ಸ್ಗಳ ತರಗತಿಗಳನ್ನು ಆರಂಭಿಸಲಿದೆ. ಜೂ.15 ಕೋರ್ಸ್ಗೆ ಸೇರಲು ಕಡೆ ದಿನ. ಮೊ. 9740973224 ಸಂಪರ್ಕಿಸಬಹುದು.
ಉತ್ತರ ವಲಯ ತಂಡಕ್ಕೆ ಭರ್ಜರಿ ಜಯ
ಮೈಸೂರು: ಕೆಎಸ್ಸಿಎ ಆಯೋಜಿಸಿದ್ದ ಅಂತರ ವಲಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತರ ವಲಯ ತಂಡವು, ಪಶ್ಚಿಮ ವಲಯ ತಂಡವನ್ನು 47 ರನ್ಗಳಿಂದ ಪರಾಭವಗೊಳಿಸಿದೆ. ಜೆಎಸ್ಎಸ್ ಎಸ್ಜೆಸಿಇ ಮೈದಾನದಲ್ಲಿ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತರ ವಲಯ ತಂಡವು 46.5 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 244 ರನ್ ಕಲೆಹಾಕಿತು. ತಂಡದ ಪರ ಶರತ್ ರಂಜನ್ 32, ಪ್ರಿಯಾಂಶು ಖಂಡುರಿ 31, ರಾಜೇಶ್ ಶರ್ಮ 64, ಹಿಮ್ಮತ್ ಸಿಂಗ್ 31 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಪಶ್ಚಿಮ ವಲಯ ತಂಡವು 44.4 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 197 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಕಥನ್ ಪಟೇಲ್ 32, ಅಕ್ಷಯ್ 43, ಅರ್ಮನ್ ಜಾಫರ್ 30, ಸರ್ಫಾಜ್ ಖಾನ್ 30 ರನ್ ಗಳಿಸಿದರು. ಉತ್ತರ ವಲಯ ತಂಡದ ಅಜಿತ್ ಚಾಹಲ್ 43 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಪಶ್ಚಿಮ ವಲಯ ತಂಡದ ರಿಶಿ ಅರೋತೆ 46 ರನ್ ನೀಡಿ ಐದು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಗಂಗೋತ್ರಿ ಗ್ಲೇಡ್ಸ್ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಪೂರ್ವ ವಲಯ ತಂಡವನ್ನು, ದಕ್ಷಿಣ ವಲಯವು 3 ವಿಕೆಟ್ಗಳಿಂದ ಮಣಿಸಿದೆ.
ತಲಕಾಡಿನಲ್ಲಿ ಸರ್ಕಾರಿ ಐಟಿಐ ಆರಂಭ
ತಲಕಾಡು: ಟಿ. ನರಸೀಪುರ ತಾಲೂಕು ತಲಕಾಡಿಗೆ ಸರ್ಕಾರಿ ಐಟಿಐ ಕಾಲೇಜು ಮಂಜೂರು ಮಾಡಿಸಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಹಸ್ತಿಕೇರಿ ಮಠದ ಪೀಠಾಧ್ಯಕ್ಷ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಯದರ್ಶಿ ಟಿ.ಎನ್. ದಾಸೇಗೌಡ, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಟಿ.ಸಿ. ಶಿವಶಂಕರಮೂರ್ತಿ, ಗ್ರಾಪಂ ಅಧ್ಯಕ್ಷ ಚಿಕ್ಕಮಾದ ನಾಯಕ, ಮಾಜಿ ಉಪಾಧ್ಯಕ್ಷ ತಿಪ್ಪೇಕಾಳಿ ರಂಗನಾಥ್ ಹಾಗೂ ನರಸಿಂಹ ಮಾದನಾಯಕ ಅಭಿನಂದಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಐಟಿಐ ವಿವಿಧ ಕೋರ್ಸ್ಗಳು ಆರಂಭವಾಗಲಿದ್ದು, ಇನ್ನು ಕೆಲವೇ ದಿನಗಳ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ. ಹೋಬಳಿಯ ಗ್ರಾಮಸ್ಥರು ಎಸ್ಸೆಸ್ಸೆಲ್ಸಿ ಪಾಸಾದ ತಮ್ಮ ಮಕ್ಕಳನ್ನು ಐಟಿಐಗೆ ಸೇರಿಸುವಂತೆ ಮಠದ ಕಾರ್ಯದರ್ಶಿ ಟಿ.ಎನ್. ದಾಸೇಗೌಡ ಮನವಿ ಮಾಡಿದ್ದಾರೆ.
ಪ್ರತಿಭಾ ಪುರಸ್ಕಾರ 21ರಂದು
ಕೆ.ಆರ್. ನಗರ: ಪಟ್ಟಣದ ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 21ರ ಶನಿವಾರ ಬೆಳಗ್ಗೆ 11ಕ್ಕೆ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ನಡೆಯಲಿದೆ. ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಪ್ರತಿಭಾವಂತರ ಕುರಿತು ಉಪನ್ಯಾಸ ನೀಡುವರು. ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ ಖಾನ್, ಸದಸ್ಯರಾದ ಶಶಿಕಲಾ ರಮೇಶ್, ಕೃಷ್ಣೇಗೌಡ, ಆರ್.ಸೀತಾರಾಮು, ಪುರಸಭಾ ಸದಸ್ಯ ಉಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಪಿ. ಮಧುರದಾಸ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ವಿ. ಪ್ರಕಾಶ್, ತಾಪಂ ಲೆಕ್ಕಾಧಿಕಾರಿ ಕೃಷ್ಣನಾಯಕ ಭಾಗವಹಿಸುವರು ಎಂದು ಬಳಗದ ಅಧ್ಯಕ್ಷ ರಾ. ಸುರೇಶ್ ತಿಳಿಸಿದ್ದಾರೆ.
ಸಿಎಂ ನಿವಾಸದೆದುರು ಧರಣಿ
ಕೆ.ಆರ್. ನಗರ: ರಾಜ್ಯಾದ್ಯಂತ ಗ್ರೀನ್ ಬಡ್ಸ್ ಶಾಖೆಗಳನ್ನು ತೆರೆದು ಗ್ರಾಹಕರ ಕೋಟ್ಯಂತರ ಹಣವನ್ನು ಗುಳುಂ ಮಾಡಿ ತಲೆ ಮರೆಸಿಕೊಂಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ ಅವರನ್ನು ಕೂಡಲೇ ಬಂಧಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜೂ.21ರಂದು ತಾಲೂಕು ಗ್ರೀನ್ ಬಡ್ಸ್ ಠೇವಣಿದಾರರು ಮತ್ತು ಪ್ರತಿನಿಧಿಗಳು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜೂ.16ರ ಬೆಳಗ್ಗೆ 11ಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಠೇವಣಿದಾರರ ಸಂಘದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಗ್ರೀನ್ ಬಡ್ಸ್ ಠೇವಣಿದಾರರು ಹಾಗೂ ಪ್ರತಿನಿಧಿಗಳ ಸಂಘದ ತಾಲೂಕು ಉಪಾಧ್ಯಕ್ಷ ಎಚ್.ಬಿ. ದಿವಾಕರ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ ನಾಳೆ
ಟಿ. ನರಸೀಪುರ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಜೂ.15ರ ಬೆಳಗ್ಗೆ 10ಕ್ಕೆ ಮಕ್ಕಳ ಆರೋಗ್ಯ ಉಚಿತ ತಪಾಸಣೆ ಹಾಗೂ ಔಷಧ ವಿತರಣಾ ಶಿಬಿರ ನಡೆಯಲಿದೆ. ಕಾಲೋನಿಯ ಆದಿಚುಂಚನಗಿರಿ ಬಾಲಜಗತ್ ಸಮೀಪ ನೂತನ ಮಕ್ಕಳ ವಿಶೇಷ ಚಿಕಿತ್ಸಾಲಯ (ಮಗು ಕ್ಲಿನಿಕ್) ಪ್ರಾರಂಭೋತ್ಸವ ಪ್ರಯುಕ್ತ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನವಜಾತ ಶಿಶು ಮತ್ತು ಮಕ್ಕಳ ತಜ್ಞ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಸಿ. ಶಿವಪ್ರಕಾಶ್ ಸೋಸಲೆ ಅವರು ಮಕ್ಕಳ ಆರೋಗ್ಯ ತಪಾಸಣೆ ಮಾಡಿ, ಉಚಿತವಾಗಿ ಔಷಧ ವಿತರಣೆ ಮಾಡಲಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್.ಪಿ. ಚಂದ್ರಶೇಖರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಡಿಕ್ಕಿ: ಮಹಿಳೆ ಸಾವು
ಕೆ.ಆರ್. ನಗರ: ಮನೆ ಮುಂದೆ ಕುಳಿತಿದ್ದ ಮಹಿಳೆಯರಿಬ್ಬರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಬ್ಬರು ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ತಿಪ್ಪೂರಿನಲ್ಲಿ ಜರುಗಿದೆ. ಮಣಿಯಮ್ಮ (40) ಮೃತಪಟ್ಟವರು. ಹಂಸವೇಣಿ (38) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿರುವ ಮನೆಯ ಮುಂದೆ ಮಣಿಯಮ್ಮ ಮತ್ತು ಹಂಸವೇಣಿ ಕುಳಿತಿದ್ದ ವೇಳೆ, ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಏಕಾಏಕಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ.