ಕಲಿಕೆ ವೀಕ್ಷಿಸುವ ಕ್ರೀಡೆಯಲ್ಲ
ನಂಜನಗೂಡು: ಕಲಿಕೆಯು ವೀಕ್ಷಿಸುವ ಕ್ರೀಡೆಯಲ್ಲ. ಆದ್ದರಿಂದ ಕಲಿಕೆಯ ಉದ್ದೇಶ ಮತ್ತು ಗುರಿ ಈಡೇರಬೇಕಾದರೆ ಕಲಿಕಾ ವಾತಾವರಣವೂ ಪೂರಕವಾಗಿರಬೇಕು ಎಂದು ಎನ್ಸಿಇಆರ್ಟಿಯ ಎನ್ಇಎಲ್ಪಿ ಸಮಾಲೋಚಕ ಡಾ.ಎನ್.ಎನ್. ಪ್ರಹ್ಲಾದ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್ಎಸ್ ಪಾಲಿಟೆಕ್ನಿಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಣಾಮಕಾರಿಯಾದ ಬೋಧನಾ ವಿಧಾನವು ವಿದ್ಯಾರ್ಥಿಯಲ್ಲಿ ಆಸಕ್ತಿ ಕೆರಳಿ ಸಂವಾದದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ತರಗತಿಯಲ್ಲಿ ವಿದ್ಯಾರ್ಥಿ ತನ್ನದೇ ಆದ ಧಾಟಿಯಲ್ಲಿ ಚಿಂತನೆಗಳನ್ನು ಹರಿಯಬಿಡಬೇಕು. ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಶಿಕ್ಷಕರು ತರಗತಿಯಲ್ಲಿ ನೀಡುವ ಉತ್ತೇಜನವು ವಿದ್ಯಾರ್ಥಿಗಳು ತರಗತಿಯಲ್ಲಿ ಅತ್ಯಂತ ಉತ್ಸಾಹದಿಂದ ಚರ್ಚೆಯಲ್ಲಿ ಪಾಲ್ಗೊಳ್ಳಲು ಪೂರಕವಾದ ಕ್ರಿಯೆಯಾಗಿದೆ. ಪರಿಣಾಮಕಾರಿ ಬೋಧನೆಯು ನಮ್ಯತೆ ಹಾಗೂ ಸೃಜನಶೀಲತೆಯಿಂದ ಕೂಡಿರುತ್ತದೆ. ಉತ್ತಮ ಬೋಧನೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ನಿರಾಶೆ ತರುವುದಿಲ್ಲ. ಜತೆಗೆ ಕ್ಷೇತ್ರ ಪ್ರವಾಸದ ಮೂಲಕವೇ ವಿದ್ಯಾರ್ಥಿಗಳಿಗೆ ಜ್ಞಾನ ತುಂಬಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆಗೆ 4 ಪ್ರಶಸ್ತಿ
ಕೆ.ಆರ್. ನಗರ: ಪಟ್ಟಣದ ರೋಟರಿ ಸಂಸ್ಥೆ ಸದಸ್ಯರ ತಂಡಕ್ಕೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯು 2013-14ನೇ ಸಾಲಿನಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ಸಮಾಜ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ನಾಲ್ಕು ಪ್ರಶಸ್ತಿಗಳನ್ನು ನೀಡಿದೆ ಎಂದು ಅಧ್ಯಕ್ಷ ಸಿ.ಆರ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಕಾರ್ಯದರ್ಶಿ ರವಿಶಂಕರ್, ನಿಯೋಜಿತ ಅಧ್ಯಕ್ಷ ಡಾ.ಎಲ್.ಅಮರನಾಥ್, ಸದಸ್ಯರಾದ ಸತೀಶ್, ರಮೇಶ್ಬಾಬು, ಪಂಡಿತ್ ನಾಟೀಕರ್, ಇನ್ನರ್ ವ್ಹೀಲ್ ಅಧ್ಯಕ್ಷೆ ಜ್ಯೋತಿಮಲ್ಲಿಕಾರ್ಜುನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.