ಬುದ್ಧಿಜೀವಿಗಳ ಅವಹೇಳನ ಮಾರಕ
ಕ.ಪ್ರ. ವಾರ್ತೆ ಮೈಸೂರು ಜೂ.15
ಚಿಂತಕರು ಹಾಗೂ ಬುದ್ಧಿಜೀವಿಗಳನ್ನು ಅವಹೇಳನ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು.
ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕರ್ನಾಟಕ ಜನಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಮಾನಸಗಂಗೋತ್ರಿಯ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ 2014ರ ಲೋಕಸಭಾ ಚುನಾವಣೆ, ಜನತಂತ್ರ ನಿರೀಕ್ಷೆಗಳು ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಸಿದ್ಧ ಚಿಂತಕರಾದ ಸುಧೀಂದ್ರ ಕುಲಕರ್ಣಿ ಹಾಗೂ ಚಂದ್ರಮಿತ್ರ ಅವರು ಸಿಪಿಎಂನಲ್ಲಿ ಇದ್ದವರು. ಆದರೆ ಲೋಕಸಭಾ ಚನಾವಣೆ ವೇಳೆ ನರೇಂದ್ರ ಮೋದಿ ಪರ ಚುನಾವಣಾ ಪ್ರಚಾರ ನಡೆಸಲು ಬಿಜೆಪಿ ಅವರನ್ನು ಸೆಳೆಯಿತು. ಹೀಗಿರುವಾಗ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ವಿರುದ್ಧ ಷಡ್ಯಂತ್ರ ನಡೆಸುವುದು ಸರಿಯಲ್ಲ. ಬುದ್ಧಿಜೀವಿಗಳು ಹಾಗೂ ಚಿಂತಕರ ವಿರುದ್ಧ ಗೇಲಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಪಚಾರ ಎಂದರು.
ಮನ ಗೆದ್ದವರಲ್ಲ: ಕರ್ನಾಟಕದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರು ಜನರ ಮನ ಗೆದ್ದವರಲ್ಲ. ಎರಡು ಪಕ್ಷಗಳ ಮತಗಳಿಕೆಯ ಅಂತರ ಹೆಚ್ಚಿಲ್ಲ ಎಂದು ಅವರು ವಿವರಿಸಿದರು.
ಮಾಧ್ಯಮಗಳು ಹೋರಾಟಗಾರರ ಪರ ಇದೆಯೆಂಬುದು ಮೂರ್ಖತನ. ಮೋದಿ ಚುನಾವಣೆಯ ಪ್ರಚಾರದಲ್ಲಿ ಟಿವಿ ಮಾಧ್ಯಮಗಳು ಹೆಚ್ಚು ಬೆಂಬಲ ನೀಡಿದವು. ಯುಪಿಎ ಸರ್ಕಾರ ಎರಡು ಬಾರಿ ಕೇಂದ್ರದಲ್ಲಿ ಆಡಳಿತ ನಡೆಸಿತು. ಮೂರನೇ ಬಾರಿ ನಡೆಸುವುದು ಬೇಡವೆಂದು ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದರು.
ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಜೈ ಶ್ರೀರಾಂ ಘೋಷಣೆಗಳು ಮೊಳಗಿದವು. ಆದರೆ ಯಾವ ಮಾಧ್ಯಮವು ಅದನ್ನು ಪ್ರಚಾರ ಮಾಡಲಿಲ್ಲ. ಲೋಕಸಭಾ ಚುನಾವಣೆ ವೇಳೆ ವೇದಾಂತಿಯಂತೆ ಭಾಷಣ ಮಾಡಿ ಮೋದಿ ಮತಯಾಚಿಸಿದರು. ಆದ್ದರಿಂದ ಜನರು ಅವರನ್ನು ಬೆಂಬಲಿಸಿದರು. ಒಟ್ಟಾರೆ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.
ಬಳ್ಳಾರಿ ವಿವಿಯ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಜೆ.ಸೋಮಶೇಖರ್ ಆಶಯ ನುಡಿಗಳಾಡಿದರು. ವಿಸ್ತರಣಾ ಕೇಂದ್ರದ ಸಂಯೋಜಕ ಡಾ.ನರೇಂದ್ರ ಕುಮಾರ್ ಹಾಗೂ ಜನ ಸಾಹಿತ್ಯ ಸಂಘಟನೆಯ ಅಧ್ಯಕ್ಷ ಡಾ.ಎಂ.ಡಿ.ಒಕ್ಕುಂದ ಇದ್ದರು.
ನಂತರ ನಡೆದ ಮೊದಲ ಗೋಷ್ಠಿಯಲ್ಲಿ ದಲಿತ ಪ್ರಶ್ನೆಗಳು ಎಂಬ ವಿಷಯ ಕುರಿತು ಬಿ.ಗೋಪಾಲ್, ಮಹಿಳಾ ಪ್ರಶ್ನೆಗಳು ಎಂಬ ವಿಷಯ ಕುರಿತು ಪ್ರೊ.ರತಿರಾವ್, ಅಲ್ಪಸಂಖ್ಯಾತರ ಪ್ರಶ್ನೆಗಳು ಎಂಬ ವಿಷಯ ಕುರಿತು ಪ್ರೊ.ಶಬೀರ್ ಮುಸ್ತಾಫ ಹಾಗೂ ರೈತ ಸಮುದಾಯದ ಪ್ರಶ್ನೆಗಳು ಎಂಬ ವಿಷಯ ಕುರಿತು ಕೆ.ಎಸ್. ನಂಜುಂಡೇಗೌಡ ಮಾತನಾಡಿದರು.
ಎರಡನೇ ಗೋಷ್ಠಿಯಲ್ಲಿ ಆರ್ಥಿಕ ನೀತಿಯ ಪ್ರಶ್ನೆಗಳು ಎಂಬ ವಿಷಯ ಕುರಿತು ಎನ್. ವಿಜಯಕುಮಾರ್ ಹಾಗೂ ಮಾಧ್ಯಮದ ಪ್ರಶ್ನೆಗಳು ಎಂಬ ವಿಷಯ ಕುರಿತು ಶ್ರೀಪಾದ ಭಟ್ ಮಾತನಾಡಿದರು. ಈ ಎರಡು ಗೋಷ್ಠಿಯಲ್ಲಿ ಪ್ರೊ.ಮೈಲಹಳ್ಳಿ ರೇವಣ್ಣ, ಡಾ.ಎನ್.ಕೆ.ಲೋಲಾಕ್ಷಿ, ಅಪೂರ್ವ ಡಿ. ಸಿಲ್ವ, ಡಾ. ಬಿಸ್ಲೇಹಳ್ಳಿ ಪ್ರಭು, ಎನ್. ಪ್ರಸನ್ನ ಹಾಗೂ ಕೆ. ಮುದ್ದುಕೃಷ್ಣ ಪ್ರತಿಕ್ರಿಯೆ ನೀಡಿದರು.