ಕೈ ವಿರುದ್ಧ ಬಿಜೆಪಿ ಪ್ರತಿಭಟನೆ 24ಕ್ಕೆ
ಪಿರಿಯಾಪಟ್ಟಣ: ಕಾಂಗ್ರೆಸ್ ಸರ್ಕಾರದ ದೀನ ದಲಿತರ, ಹಿಂದುಳಿದ ವರ್ಗಗಳ ವಿರೋಧಿ ನೀತಿ ಖಂಡಿಸಿ ಪಕ್ಷದ ವತಿಯಿಂದ ಜೂ.24 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಎಂ.ರಾಜೇಗೌಡ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೀನದಲಿತ ಹಿಂದುಳಿದ ವರ್ಗಗಳ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇವರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದರು. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಸವ ವಸತಿ ಯೋಜನೆ ಅಡಿಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಂಜೂರು ಮಾಡಿದ ಮನೆಗಳಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ. ಡಿ.ದೇವರಾಜ ಅರಸು ಅಭಿವೃದ್ಧಿ ಮಂಡಳಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸರಿಯಾಗಿ ಸೌಲಭ್ಯ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಾಲೂಕು ಅಧ್ಯಕ್ಷ ಆರ್.ಟಿ.ಸತೀಶ್, ಪಕ್ಷದ ವಿವಿಧ ಪದಾಧಿಕಾರಿಗಳಾದ ಪ್ರಸನ್ನ ಚೆನ್ನಿಗರಾಯ, ಪಾಪಣ್ಣ, ಕೃಷ್ಣೇಗೌಡ, ರಮೇಶ್, ಲೋಕಪಾಲಯ್ಯ, ಪ್ರಸನ್ನಕೇಶವ, ಎಸ್.ಟಿ. ಕೃಷ್ಣಪ್ರಸಾದ್, ರಾಜಿಕ್‌ಪಾಷ, ಸೋಹನ್‌ಕುಮಾರ್, ಪ್ರವೀಣ್, ರವಿ ಇದ್ದರು.
ಲಾರಿ ಮಾಲೀಕರ ಮುಷ್ಕರ ಮುಂದುವರಿಕೆ
ಟಿ. ನರಸೀಪುರ: ಮರಳು ಲಾರಿ ಮಾಲೀಕರ ಬೇಡಿಕೆಗಳು ಈಡೇರದಿದ್ದರೆ ಮುಖ್ಯಮಂತ್ರಿಗಳ ನಿವಾಸದೆದುರು ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ತಾಲೂಕು ಲೈಲ್ಯಾಂಡ್ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್. ರವಿ ಹೇಳಿದರು.
ಪಟ್ಟಣದ ಲೋಕೋಪಯೋಗಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಲಾರಿ ಮಾಲೀಕರ ನಾಲ್ಕು ದಿನಗಳಿಂದ ನಡೆಸುತ್ತಿರುವ ಹೋರಾಟವನ್ನು ನಿರ್ಲಕ್ಷ್ಯ ಭಾವನೆಯಿಂದ ನೋಡುತ್ತಿದೆ. ತಾಲೂಕು ಹಾಗೂ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಗೂ ಪ್ರತಿಭಟನಾನಿರತರ ಕಷ್ಟ ಕೇಳುವ ಕನಿಷ್ಠ ಸೌಜನ್ಯವೂ ಇಲ್ಲದಂತಾಗಿದೆ. ನಾವು ನಡೆಸುತ್ತಿರುವ ಮುಷ್ಕರವನ್ನು ನಗಣ್ಯವಾಗಿ ಕಂಡರೆ ಸಿಎಂ ನಿವಾಸಕ್ಕೆ ಹೋರಾಟ ಸ್ಥಳಾಂತರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಲಾರಿ ಮಾಲೀಕ ಪುಟ್ಟು, ಮಹೇಶ್, ರಾಜಶೇಖರ, ನಾಗೇಂದ್ರ, ಗುರುಕಿರಣ್, ಮಂಜು, ಮುರುಗ, ಕನಕ ಶಿವು, ಶಂಕರ, ನಟರಾಜ, ಸುರೇಶ, ಪ್ರಜ್ವಲ್, ಮಲ್ಲು, ಜಯಶೀಲ, ಗಿರೀಶ್, ಬಾಲಾಜಿ, ಎಸ್.ಬಿ. ಸುಗಂದರಾಜು, ಮಂಜು ಭಾಗವಹಿಸಿದ್ದರು.