ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗರುಡಗಂಭ ವಾರ್ಷಿಕೋತ್ಸವ: ಗಣ್ಯರಿಗೆ ಸನ್ಮಾನ

Srinivasa Murthy VN
Updated On : 16 Jun 2014, 11:08 am

ಕೆ.ಆರ್. ನಗರ: 80 ವರ್ಷಗಳ ಹಿಂದೆಯೇ ಕೆ.ಆರ್.ನಗರ ಪಟ್ಟಣವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿ ರಾಜ್ಯದಲ್ಲಿಯೇ ಉತ್ತಮ ಮೂಲ ಸೌಲಭ್ಯವುಳ್ಳ ನಗರವನ್ನಾಗಿಸಿದ ಕೀರ್ತಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣಕ್ಕೆ ಕೃಷ್ಣರಾಜನಗರ ಎಂದು ನಾಮಕರಣ ಮಾಡಿ ಗರುಡಗಂಭ ಪ್ರತಿಷ್ಠಾಪಿಸಿ 80 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಗರುಡಗಂಭ ಸಂವೇದನಾ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಜನರ ಹಿತದೃಷ್ಟಿಯಿಂದ ಸದಾ ಜನಪರ ಕೆಲಸ ಮಾಡುತ್ತಿದ್ದ ಮಹಾರಾಜರು ನಮ್ಮ ಪಾಲಿನ ದೇವರು ಎಂದು ಬಣ್ಣಿಸಿದರು.
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣವಾದ ವೇಳೆ ಹಳೆ ಎಡತೊರೆಯಿಂದ ಇಲ್ಲಿಗೆ ಪಟ್ಟಣ ಸ್ಥಳಾಂತರವಾದಾಗ ಅಂದು ಜರ್ಮನಿಯ ಎಂಜಿನಿಯರ್ ಕ್ರಂಬಿಗಲ್ ಅವರಿಂದ ಉತ್ತಮವಾದ ಮತ್ತು ವ್ಯವಸ್ಥಿತವಾದ ನೀಲನಕ್ಷೆ ತಯಾರಿಸಿ ಭವಿಷ್ಯದ ನಗರ ನಿರ್ಮಿಸಿದ್ದಾರೆ. ಅವರ ದೂರದೃಷ್ಟಿತ್ವ ಪ್ರಶಂಸನೀಯ ಎಂದು ತಿಳಿಸಿದರು.
ಗರುಡಗಂಭವನ್ನು ಸ್ಮಾರಕವನ್ನಾಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡು ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ಗಮನಹರಿಸಬೇಕು ಎಂದು ಒತ್ತಾಯಿಸಿ, ಸ್ಥಳೀಯ ಪುರಸಭೆಯವರು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಡಾವಣೆಗಳಿಗೆ ಅಗತ್ಯ ಮೂಲ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭದ ಸ್ವಾಮಿ ನೇತೃತ್ವದಲ್ಲಿ ಪುರಸಭಾ ಅಧ್ಯಕ್ಷೆ ಪಾರ್ವತಿ ನಾಗರಾಜು, ಮಾಜಿ ಅಧ್ಯಕ್ಷ ಆರ್.ಬಿ.ನಾಗರಾಜು, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳೆಮಿರ್ಲೆ ಸುನಯ್‌ಗೌಡ, ಹಿರಿಯ ವಕೀಲ ಕೃಷ್ಣರಾಜೇಅರಸ್, ಪತ್ರಿಕಾ ಛಾಯಾಗ್ರಾಹಕ ಶಿಲ್ಪಶ್ರೀನಿವಾಸ್ ಅವರನ್ನು ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಮಂಜುನಾಥ್, ಸೃಜನ ಬಳಗದ ಅಧ್ಯಕ್ಷ ರಾ.ಸುರೇಶ್, ನಗರ ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ರೈತ ಸಂಘದ ಮುಖಂಡರಾದ ಯೋಗಣ್ಣ, ಅಮೀನ್, ಸ್ವಾಮೀಗೌಡ, ಕೆ.ಎಲ್. ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement