ಹಕ್ಕುಪತ್ರಕ್ಕೆ ಆಗ್ರಹ
ಹುಣಸೂರು: ತಾಲೂಕಿನ ನಾಗಾಪುರ ಗಿರಿಜನ ಹಾಡಿಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಭೂಮಿಯ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿಯ ತಾಲೂಕು ಘಟಕ ಸದಸ್ಯರು ಪ್ರತಿಭಟಿಸಿದರು.
ಸಮಿತಿಯ ಸದಸ್ಯರು ಹಾಗೂ ಆದಿವಾಸಿಗಳು ಪಟ್ಟಣದ ಪುರಸಭಾ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಕೂಡಲೇ ತಾಲೂಕು ಆಡಳಿತ ಪುನರ್ವಸತಿಗೊಂಡ ಕುಟುಂಬಗಳಿಗೆ ಸೂಕ್ತ ಮನೆ ಹಾಗೂ ಭೂಮಿಯ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು. ಸಮಿತಿಯ ರಾಜ್ಯ ಸಂಚಾಲಕ ವಿ.ಬಸವರಾಜು ಕಲ್ಕುಣಿಕೆ, ಮುಖಂಡರಾದ ಕೃಷ್ಣ, ಹರೀಶ್, ಕುಮಾರ್, ಗಣೇಶ್ ಕೊಡಗು, ಸಿಪಿಎಂ ಜಗದೀಶ್ ಸೂರ್ಯ, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಮಹೇಶ್ಕುಮಾರ್ ಭಾಗವಹಿಸಿದ್ದರು. ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಕಾಮಗಾರಿಗೆ ಸಹಾಯಧನ ವಿತರಣೆ
ಕೆ.ಆರ್. ನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮ ಕಲ್ಯಾಣ ಯೋಜನೆಯಡಿ ತಾಲೂಕಿನ 11 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡದ ನಿರ್ಮಾಣ ಕಾಮಗಾರಿಗೆ 5.45 ಲಕ್ಷ ಸಹಾಯಧನ ನೀಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಬಿ.ಅಶೋಕ್ ಹೇಳಿದರು. ಪಟ್ಟಣದ ಕಚೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಸಂಸ್ಥೆಯು ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರ ಮತ್ತು ಅಗತ್ಯ ಸಹಾಯಧನ ನೀಡುತ್ತಿದ್ದು, ನಮ್ಮೊಂದಿಗೆ ಸಾರ್ವಜನಿಕರು ಕೈಜೋಡಿಸಿ ಎಂದು ಮನವಿ ಮಾಡಿದರು. ಮೈಮುಲ್ ಮಾಜಿ ಅಧ್ಯಕ್ಷ ಸೋಮಶೇಖರ್, ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ವನಜಾಕ್ಷಿ, ಮಮತಾ, ನಾಗಮಣಿ, ಜಯಶ್ರೀ ಇದ್ದರು.