ಹುಳು ನಿಯಂತ್ರಣ ತಂತ್ರಜ್ಞಾನ
ಕ.ಪ್ರ. ವಾರ್ತೆ ಸುತ್ತೂರು ಜೂ.16
ಬದನೆ ಬೆಳೆಗೆ ಮಾರಕವಾದ ಕಾಂಡ ಮತ್ತು ಕಾಯಿ ಕೊರೆಯುವ ಹುಳುವಿನ ಬಾಧೆ ನಿಯಂತ್ರಿಸಲು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಸಾವಯವ ಹಾಗೂ ಸುಲಭವಾಗಿ ಅಳವಡಿಸಬಹುದಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.
ಜಿಲ್ಲೆಯಲ್ಲಿ ಈ ತಂತ್ರಜ್ಞಾನವನ್ನು ಪ್ರಪ್ರಥಮವಾಗಿ ಇಬ್ಬರು ರೈತರ ಜಮೀನಿನಲ್ಲಿ ಪ್ರಯೋಗಿಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಎಚ್.ಡಿ.ಕೋಟೆ ತಾಲೂಕಿನ ಬೆಟ್ಟದಬೀಡು ಗ್ರಾಮದ ಕರಿಗೌಡ ಹಾಗೂ ಹಾರೋಹಳ್ಳಿ ಗ್ರಾಮದ ಬಸವರಾಜ ಅವರು ಟ್ರೈಕೋಗ್ರಾಮ ಹಾಗೂ ಲಿಂಗಾಕರ್ಷಕ ಬಲೆಗಳನ್ನು ಬಳಸಿ ಕಾಂಡ ಮತ್ತು ಕಾಯಿ ಕೊರಕಗಳ ಹಾನಿಯನ್ನು ಶೇ.50ಕ್ಕಿಂತಲೂ ಕಡಿಮೆಗಿಳಿಸಿ ಉತ್ತಮ ಫಸಲು ಪಡೆದಿದ್ದಾರೆ.
ಈ ತಂತ್ರಜ್ಞಾನ ಬಳಸಿದ ಅನುಭವ ಹಂಚಿಕೊಳ್ಳಲು ಸೋಮವಾರ ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ಬೆಟ್ಟದ ಬೀಡು ಗ್ರಾಮದಲ್ಲಿ ಕ್ಷೇತ್ರೋತ್ಸವ ಏರ್ಪಡಿಸಿತ್ತು. ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಪ್ರಗತಿಪರ ರೈತರಾದ ನರಸಿಂಹೆಗೌಡರು ತಂತ್ರಜ್ಞಾನ ಫಲಕಾರಿಯಾಗಿದ್ದು, ತಮ್ಮ ನೆರೆಯ ಜಮೀನಿನವರಾದ ಕರಿಗೌಡರು ಉತ್ತಮ ಫಸಲು ಪಡೆದಿದ್ದಾರೆ. ಹಾನಿಗೊಳಗಾದ ಕಾಯಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಹಾಗೂ ಕಾಯಿಗಳು ಆರೋಗ್ಯಯುತವಾಗಿ ಆಕರ್ಷಕವಾಗಿರುವುದರಿಂದ ಮೂಟೆಗೆ ಕನಿಷ್ಠ ರು. 20 ರಿಂದ 30ಕ್ಕೂ ಹೆಚ್ಚು ಬೆಲೆ ಪಡೆಯುವುದು ಖಚಿತ ಎಂದು ಅಭಿಪ್ರಾಯಪಟ್ಟರು.
ಉತ್ತಮ ಲಾಭ ಪಡೆಯಬಹುದು: ಬದನೆ ಸಸಿಗಳನ್ನು ನಾಟಿ ಮಾಡಿದ 20 ದಿನಗಳಿಂದ ಹಿಡಿದು ಕಾಯಿ ಕೀಳುವವರೆಗೆ ಬೆಳೆಯ ವಿವಿಧ ಹಂತಗಳಲ್ಲಿ ಮೂರು ವಿವಿಧ ತಂತ್ರಜ್ಞಾನಗಳನ್ನು ಸಮಗ್ರ ಕೀಟ ನಿರ್ವಹಣಾ ಪದ್ಧತಿಯಡಿ ಜೈವಿಕ ಹತೋಟಿ ಕ್ರಮದ ಮೂಲಕ ಬಳಸಿ ಕಾಂಡ ಹಾಗೂ ಕಾಯಿ ಕೊರಕದ ಬಾಧೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಿಸಿ ಉತ್ತಮ ಲಾಭ ಪಡೆಯಬಹುದಾಗಿದೆ ಎಂದು ರೈತರು ಅನುಭವ ಹಂಚಿಕೊಡರು.
ಕೇಂದ್ರ ಸರ್ಕಾರದ ಡಿಎಸ್ಟಿ ಅನುದಾನದಿಂದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಹಿರಿಯ ವಿಜ್ಞಾನಿಗಳಾದ ಡಾ.ಗಂಗಾ ವಿಶಾಲಾಕ್ಷಿಯವರು ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಮೈಸೂರಿನಲ್ಲಿ ಪರಿಚಯಿಸಿದ್ದಾರೆ. ಡಾ.ಗಂಗಾ ವಿಶಾಲಾಕ್ಷಿಯವರು ಕ್ಷೇತ್ರೋತ್ಸವ ಉದ್ಘಾಟಿಸಿ, ತಂತ್ರಜ್ಞಾನದ ವಿವರ ನೀಡಿದರು. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಸತೀಶ್ ಅವರು ತಂತ್ರಜ್ಞಾನ ಬಳಸುವ ವಿಧಾನ ವಿವರಿಸಿದರು. ಡಾ.ಅರುಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನದ ಬಳಕೆ ಮಾಡುವುದರೊಂದಿಗೆ ಕೃಷಿ ವಿಜ್ಞಾನ ಕೇಂದ್ರದೊಂದಿಗೆ ಸಂಪರ್ಕವಿಟ್ಟುಕೊಂಡು ಇಂತಹುದೇ ಅನೇಕ ತಂತ್ರಜ್ಞಾನಗಳ ಮಾಹಿತಿ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಗ್ರಾಮದ ಹಿರಿಯರಾದ ಗುಂಡೇಗೌಡ, ಚಿಕ್ಕಬೋರೇಗೌಡ, ದೇವೇಗೌಡ, ಇತರ ರೈತರು ಇದ್ದರು. ಶ್ರೀನಿವಾಸ ಮಂಕಣಿ ನಿರೂಪಿಸಿದರು.